Asianet Suvarna News Asianet Suvarna News

ಮತ್ತೆ ಕರ್ನಾಟಕದಲ್ಲಿ ನಾಳೆ ಮೋದಿ ಹವಾ..!

ಬೆಂಗಳೂರು ಹಾಗೂ ತುಮಕೂರಿಗೆ ಭೇಟಿ ನೀಡಿ ಹಲವಾರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ. ಈ ಯೋಜನೆಗಳು ದೇಶದಲ್ಲಿ ಹಲವು ಮಹತ್ತರ ಪರಿವರ್ತನೆ ತರುವ ಯೋಜನೆಗಳಾಗಿವೆ.

PM Narendra Modi Will Be Come to Karnataka on Feb 5th grg
Author
First Published Feb 5, 2023, 3:15 AM IST

ನವದೆಹಲಿ(ಫೆ.05):  ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ಸೋಮವಾರ) ಕರ್ನಾಟಕಕ್ಕೆ ಆಗಮಿಸಲಿದ್ದು, ಬೆಂಗಳೂರು ಹಾಗೂ ತುಮಕೂರಿಗೆ ಭೇಟಿ ನೀಡಿ ಹಲವಾರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ದೇಶದಲ್ಲಿ ಹಲವು ಮಹತ್ತರ ಪರಿವರ್ತನೆ ತರುವ ಯೋಜನೆಗಳಾಗಿವೆ. ಮೊದಲು ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡಿ ಸಿದ್ಧಪಡಿಸಲಾಗಿರುವ ನೂತನ ‘ಇ 20’ ಪೆಟ್ರೋಲ್‌ ವಿತರಣೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಒಮ್ಮೆ ಬಳಸಿ ಬಿಸಾಡುವ ಹಳೆಯ ಪ್ಲಾಸ್ಟಿಕ್‌ ತ್ಯಾಜ್ಯದ ಬಾಟಲ್‌ನಿಂದ ತಯಾರಿಸಿದ ಸಮವಸ್ತ್ರ ಅನಾವರಣ ಮಾಡಲಿದ್ದಾರೆ.

ಬಳಿಕ ತುಮಕೂರಿಗೆ ತೆರಳಲಿರುವ ಅವರು, ದೇಶದ ಅತಿದೊಡ್ಡ ರಕ್ಷಣಾ ಹೆಲಿಕಾಪ್ಟರ್‌ ಘಟಕ ಲೋಕಾರ್ಪಣೆ ಮಾಡಲಿದ್ದಾರೆ. ಈ ವೇಳೆ, ತುಮಕೂರು ಕೈಗಾರಿಕಾ ಟೌನ್‌ಶಿಪ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಅಲ್ಲಿಯೇ ತುಮಕೂರು ಜಿಲ್ಲೆಯ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಸ್ವಚ್ಛ ಕುಡಿವ ನೀರು ಒದಗಿಸುವ 2 ಜಲಜೀವನ್‌ ಮಿಶನ್‌ ಯೋಜನೆಗೆ ಗುದ್ದಲಿಪೂಜೆ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.

Bengaluru Traffic: ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಮೂರು ದಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಇ-20 ಪೆಟ್ರೋಲ್‌ಗೆ ಚಾಲನೆ:

ಮೊದಲಿಗೆ ‘ಭಾರತ ಇಂಧನ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಮೋದಿ, ಅದೇ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 67 ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿರುವ ‘ಇ-20’ ಪೆಟ್ರೋಲ್‌ ವಿತರಣೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ‘ಇ-20’ ಪೆಟ್ರೋಲ್‌ ಎಂಬುದು ಶೇ.20ರಷ್ಟುಎಥೆನಾಲ್‌ ಮಿಶ್ರಣ ಮಾಡಿರುವ ಪೆಟ್ರೋಲ್‌ನ ಮಾದರಿ. ಎಥೆನಾಲ್‌ ಸಕ್ಕರೆ ಅಥವಾ ಬೆಲ್ಲ ಉತ್ಪಾದನೆ ವೇಳೆ ಕಬ್ಬಿನಿಂದ ಸಿಗುವ ಉಪ ಉತ್ಪನ್ನವಾಗಿದೆ. ಇದರ ಬಳಕೆಯಿಂದ ಎಥೆನಾಲ್‌ಗೆ ಹೆಚ್ಚಿನ ಬೇಡಿಕೆ ಲಭ್ಯವಾಗಿ ರೈತರಿಗೆ ಆದಾಯದ ಮತ್ತೊಂದು ಮೂಲವಾಗಿ ಹೊರಹೊಮ್ಮಲಿದೆ. ಜೊತೆಗೆ ಇದು ಪರಿಸರ ಸ್ನೇಹಿ ಇಂಧನ. ಇದರ ಬಳಕೆಯಿಂದ ಸಹಜವಾಗಿಯೇ ಅಷ್ಟುಪ್ರಮಾಣದ ಪೆಟ್ರೋಲ್‌ನಿಂದ ಹೊರಹೊಮ್ಮುತ್ತಿದ್ದ ಮಾಲಿನ್ಯ ಕಡಿಮೆಯಾಗಲಿದೆ. 2030ರಲ್ಲಿ ಇದರ ಜಾರಿಗೆ ಉದ್ದೇಶಿಸಲಾಗಿತ್ತು. ಆದರೆ 7 ವರ್ಷ ಮೊದಲೇ ಗುರಿ ತಲುಪಲಾಗಿದ್ದು, ‘ಇ-20’ ಪೆಟ್ರೋಲ್‌ ಬಳಕೆಗೆ ಲಭ್ಯವಾಗಲಿದೆ.

ಪ್ಲಾಸ್ಟಿಕ್‌ ತ್ಯಾಜ್ಯದ ಸಮವಸ್ತ್ರ ಲೋಕಾರ್ಪಣೆ:

ಇದೇ ವೇಳೆ, ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ ಬಳಸಿ ಸಿದ್ಧಪಡಿಸಲಾದ ವಿನೂತನ ಸಮವಸ್ತ್ರಗಳನ್ನುಮೋದಿ ಸೋಮವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಿದ್ದಾರೆ. ಸರ್ಕಾರಿ ಸ್ವಾಮ್ಯದ ಇಂಡಿಯಲ್‌ ಆಯಿಲ್‌ ಕಂಪನಿಯು ‘ಅನ್‌ಬಾಟಲ್ಡ್‌’ ಕಾರ್ಯಕ್ರಮದಡಿ ಹಳೆಯ, ನಿರುಪಯುಕ್ತ, ಏಕಬಳಕೆಯ ಪ್ಲಾಸ್ಟಿಕ್‌ ಬಳಸಿ, ತನ್ನ ಅಡುಗೆ ಅನಿಲ ವಿತರಣೆ ಮಾಡುವ ಸಿಬ್ಬಂದಿಗೆಂದೇ ವಿಶೇಷ ಸಮವಸ್ತ್ರಗಳನ್ನು ಸಿದ್ಧಪಡಿಸಿದೆ. ಮರುಸಂಸ್ಕೃರಿತ ಪಾಲಿಸ್ಟರ್‌ ಮತ್ತು ಹತ್ತಿ ಬಳಸಿ ಈ ಸಮವಸ್ತ್ರಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಸೇನೆ ಸೇರಿ ಇತರ ಇಲಾಖೆಗಳ ಸಮವಸ್ತ್ರಕ್ಕೂ ಇದನ್ನು ವಿಸ್ತರಿಸಲಾಗುತ್ತದೆ.

ದೇಶದ ಅತಿದೊಡ್ಡ ರಕ್ಷಣಾ ಕಾಪ್ಟರ್‌ ಘಟಕಕ್ಕೆ ಚಾಲನೆ:

ನಂತರ ಬೆಂಗಳೂರಿನಿಂದ ತುಮಕೂರಿಗೆ ತೆರಳಲಿರುವ ಮೋದಿ, ಎಚ್‌ಎಎಲ್‌ ಸಂಸ್ಥೆ ತುಮಕೂರಿನಲ್ಲಿ ನಿರ್ಮಿಸಿರುವ ನೂತನ ಸೇನಾ ಹೆಲಿಕಾಪ್ಟರ್‌ ನಿರ್ಮಾಣ ಘಟಕಕ್ಕೂ ಚಾಲನೆ ನೀಡಲಿದ್ದಾರೆ. ಇದು ದೇಶದ ಅತಿದೊಡ್ಡ ಹೆಲಿಕಾಪ್ಟರ್‌ ನಿರ್ಮಾಣ ಘಟಕ ಎಂಬ ಹಿರಿಮೆಯೂ ಇದಕ್ಕಿದೆ.

615 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಘಟಕ ದೇಶದಲ್ಲಿ ಹೆಲಿಕಾಪ್ಟರ್‌ ಉತ್ಪಾದನೆಗೆ ಬೇಕಾದ ಎಲ್ಲಾ ಅಗತ್ಯವನ್ನೂ ಒಂದೇ ಕಡೆ ಪೂರೈಸುವ ಹೊಸ ಕೇಂದ್ರವಾಗಲಿದೆ. ಮುಂದಿನ 20 ವರ್ಷಗಳ ಅವಧಿಯಲ್ಲಿ ಇಲ್ಲಿ ಒಟ್ಟಾರೆ 3 ಲಕ್ಷ ಕೋಟಿ ರು ಮೌಲ್ಯದ 1000ಕ್ಕೂ ಹೆಚ್ಚು ಕಾಪ್ಟರ್‌ ಉತ್ಪಾದನೆ ಗುರಿಯನ್ನು ಎಚ್‌ಎಎಲ್‌ ಹಾಕಿಕೊಂಡಿದೆ.

ಮೊದಲ ಹಂತದಲ್ಲಿ ಈ ಘಟಕದಲ್ಲಿ ಲೈಟ್‌ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಹಂತಹಂತವಾಗಿ ಅದನ್ನು 3-15 ಟನ್‌ ಗಾತ್ರದ ವಿವಿಧ ಮಾದರಿ ಕಾಪ್ಟರ್‌ ಉತ್ಪಾದನೆಗೆ ವಿಸ್ತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ತುಮಕೂರು ಕೈಗಾರಿಕಾ ಟೌನ್‌ಶಿಪ್‌ಗೆ ಶಂಕು:

ಬಳಿಕ ತುಮಕೂರು ಕೈಗಾರಿಕಾ ಟೌನ್‌ಶಿಪ್‌ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಯೋಜನೆಯಡಿ ಒಟ್ಟು ಮೂರು ಹಂತದಲ್ಲಿ 8484 ಎಕರೆ ಪ್ರದೇಶದಲ್ಲಿ ಈ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣಗೊಳ್ಳಲಿದೆ. ಈ ಯೋಜನೆಯು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುತ್ತದೆ.

2 ಜಲಜೀವನ್‌ ಯೋಜನೆ ಶಂಕು:

ನಂತರ ತುಮಕೂರು ಜಿಲ್ಲೆಯ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಜಲಜೀವನ್‌ ಯೋಜನೆಯಡಿ ಕೈಗೊಳ್ಳಲಾಗುವ ಎರಡು ಕುಡಿಯುವ ನೀರಿನ ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ತಿಪಟೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು 430 ಕೋಟಿ ರು.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇನ್ನು ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 147 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 115 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಎರಡೂ ಯೋಜನೆಗಳು ಸಾವಿರಾರು ಜನರಿಗೆ ಸ್ವಚ್ಛ ಕುಡಿಯುವ ನೀರಿನ ಸೌಲಭ್ಯವನ್ನು ಖಚಿತಪಡಿಸಲಿವೆ.

ರೈತರು ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಮೋದಿ ಬರಲಿಲ್ಲ; ಈಗ ಬರ್ತಿರೋದು ಯಾಕೆ? ಎಚ್‌ಡಿಕೆ

ದೇಶದ ಅತಿದೊಡ್ಡ ಹೆಲಿಕಾಪ್ಟರ್‌ ತಯಾರಿ ಘಟಕ ಉದ್ಘಾಟನೆ

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಬಿದರಿಳ್ಳದಲ್ಲಿ 615 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ಹೆಲಿಕಾಪ್ಟರ್‌ ತಯಾರಿಕಾ ಘಟಕವನ್ನು ಮೋದಿ ಉದ್ಘಾಟಿಸಲಿದ್ದಾರೆ. ಎಚ್‌ಎಎಲ್‌ ಸಂಸ್ಥೆ ಇಲ್ಲಿ ಮುಂದಿನ 20 ವರ್ಷಗಳಲ್ಲಿ .3 ಲಕ್ಷ ಕೋಟಿ ಮೌಲ್ಯದ 1000ಕ್ಕೂ ಹೆಚ್ಚು ಹೆಲಿಕಾಪ್ಟರ್‌ ಉತ್ಪಾದಿಸುವ ಗುರಿ ಹೊಂದಿದೆ.

ಇತರೆ 5 ಕಾರ್ಯಕ್ರಮ

1. ರಾಜಧಾನಿ ಬೆಂಗಳೂರಿನಲ್ಲಿ ‘ಭಾರತ ಇಂಧನ ಸಪ್ತಾಹ’ವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ
2. ವಿವಿಧ ರಾಜ್ಯಗಳ 67 ಬಂಕ್‌ಗಳಲ್ಲಿ ಪ್ರಾಯೋಗಿಕವಾಗಿ 20% ಎಥೆನಾಲ್‌ಮಿಶ್ರಿತ ಪೆಟ್ರೋಲ್‌ ವಿತರಣೆಗೆ ಚಾಲನೆ
3. ಇಂಡಿಯನ್‌ ಆಯಿಲ್‌ನ ‘ಅನ್‌ಬಾಟಲ್ಡ್‌’ ಯೋಜನೆಯಡಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಮವಸ್ತ್ರ ಲೋಕಾರ್ಪಣೆ
4. 3 ಹಂತದಲ್ಲಿ 8484 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ತುಮಕೂರು ಕೈಗಾರಿಕಾ ಟೌನ್‌ಶಿಪ್‌ಗೆ ಶಂಕು
5. ತಿಪಟೂರು, ಚಿಕ್ಕನಾಯಕನಹಳ್ಳಿಯ .545 ಕೋಟಿ ವೆಚ್ಚದ ಜಲಜೀವನ್‌ ಕುಡಿವ ನೀರು ಯೋಜನೆಗಳಿಗೆ ಅಡಿಗಲ್ಲು

Follow Us:
Download App:
  • android
  • ios