Asianet Suvarna News Asianet Suvarna News

PM Modi Birthday: ಪ್ರತಿಯೊಬ್ಬ ರಾಜಕಾರಣಿಗೂ ಮೋದೀಜಿ ಮಾದರಿ: ಸಿಎಂ ಬೊಮ್ಮಾಯಿ

ಸವಾಲುಗಳನ್ನೂ ಅವಕಾಶವನ್ನಾಗಿ ಪರಿವರ್ತಿಸುವ ದಾರ್ಶನಿಕ, ವಿಶ್ವದಲ್ಲಿ ಭಾರತಕ್ಕೆ ಅಗ್ರಮನ್ನಣೆ ತಂದುಕೊಟ್ಟ ನಾಯಕ, 21 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಹಿಗ್ಗದ ಜನಹಿತ ಜಪಿಸುವ ನಮೋ 

PM Narendra Modi Role Model for Every Politician Says CM Basavaraj Bommai grg
Author
First Published Sep 17, 2022, 6:45 AM IST

ಬೆಂಗಳೂರು(ಸೆ.17): ನಾಯಕತ್ವ ವಹಿಸುವಾಗ ಸೇವಕನಾಗಿರು; ನಿಸ್ವಾರ್ಥ ಮತ್ತು ಅಮಿತ ವಿಶ್ವಾಸದಿಂದಿರು. ಯಶಸ್ಸು ನಿನ್ನದಾಗುವುದು: ಸ್ವಾಮಿ ವಿವೇಕಾನಂದ. ಈ ಗುಣಗಳ ಕುರಿತು ಯೋಚಿಸುವಾಗ ಕಣ್ಣೆದುರು ಬರುವ ವ್ಯಕ್ತಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು. ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಹಿಗ್ಗಲಿಲ್ಲ. ತಮ್ಮನ್ನು ದೇಶದ ಪ್ರಧಾನ ಸೇವಕ ಎಂದು ಪರಿಚಯಿಸಿಕೊಂಡರು. ಇಂದಿಗೂ ಅದಕ್ಕೆ ತಕ್ಕಂತೆ ನಡೆದುಕೊಂಡು ಜನರ ಮನಸ್ಸನ್ನಾಳುತ್ತಿದ್ದಾರೆ. ಕಳೆದ 21 ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಜನಹಿತ ಚಿಂತನೆಯನ್ನೇ ಜಪಿಸುತ್ತಿದ್ದಾರೆ. ಭಾರತದ ಇತಿಹಾಸವನ್ನು ಅವಲೋಕಿಸುವಾಗ ಮೋದಿ ಪೂರ್ವ ಕಾಲ ಹಾಗೂ ಮೋದಿ ನಂತರದ ಕಾಲವೆಂದು ಉಲ್ಲೇಖಿಸಬೇಕಾಗುತ್ತದೆ ಎಂದು ಕೆಲವರು ಹೇಳಿರುವುದು ಉತ್ಪ್ರೇಕ್ಷೆಯಲ್ಲ.

ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿಯಾಗಿ, ಅದಕ್ಕೂ ಮುನ್ನ ಗುಜರಾತಿನ ಮುಖ್ಯಮಂತ್ರಿಯಾಗಿ ಅವರು ಮಾಡಿರುವ ಸಾಧನೆ ಬೆರಗುಗೊಳಿಸುವಂತಹದ್ದು. ಪ್ರತಿಯೊಬ್ಬ ರಾಜಕಾರಣಿ ಅನುಕರಿಸುವಂಥದ್ದು. 2001ರಲ್ಲಿ ಅವರು ಮುಖ್ಯಮಂತ್ರಿಯಾದಾಗ, ಶಾಸಕರೂ ಆಗಿರದ ಈ ವ್ಯಕ್ತಿ ಮುಖ್ಯಮಂತ್ರಿ ಹುದ್ದೆ ಸಂಭಾಳಿಸಬಲ್ಲರೇ ಎಂಬ ಸಂಶಯ ಅನೇಕರಲ್ಲಿ ಮೂಡಿದ್ದು ಸುಳ್ಳಲ್ಲ. ಆದರೆ ಅವರು ಅಭಿವೃದ್ಧಿಯ ಪಥದಲ್ಲಿ ಹಿಂದಿರುಗಿ ನೋಡಲೇ ಇಲ್ಲ. ಬಡತನ, ನಿರ್ಮೂಲನೆ, ಸಮಾನತೆ ಮೊದಲಾದ ಅಂಶಗಳು ಅವರಿಗೆ ಕೇವಲ ಭಾಷಣದ ಸರಕಾಗಲಿಲ್ಲ; ಕಣ್ಣೊರೆಸುವ ತಂತ್ರವೂ ಆಗಲಿಲ್ಲ. ಬದಲಿಗೆ ತುಳಿತಕ್ಕೊಳಗಾದ ಸಮುದಾಯಗಳ ಅಭ್ಯುದಯಕ್ಕೆ ಅಕ್ಷರಶಃ ಶ್ರಮಿಸಿದರು. ಮಾತಿಗಿಂತ ಕೃತಿ ಮೇಲು ಎಂಬುದನ್ನು ಸದಾ ಕಾಲ ಪಾಲಿಸಿದರು. ಇದರಿಂದಾಗಿ ಅವರು ಇಂದು ಕೇವಲ ಭಾರತದಲ್ಲಷ್ಟೇ ಅಲ್ಲ; ವಿಶ್ವದಲ್ಲೇ ಪ್ರಭಾವಿ ನಾಯಕನಾಗಿ ಬೆಳೆದಿದ್ದಾರೆ. ಭಾರತಕ್ಕೆ ಅಗ್ರ ಮನ್ನಣೆ ತಂದುಕೊಟ್ಟಿದ್ದಾರೆ.

Pm Modi Birthday: ಇಂದು ಕುನೋ ಅರಣ್ಯಕ್ಕೆ ಪ್ರಧಾನಿಯಿಂದ ಆಫ್ರಿಕನ್ ಚೀತಾ ಬಿಡುಗಡೆ

ಜನರ ಮನ ಗೆದ್ದ ನಾಯಕ

ಇಂದು ಬೀದಿ ಬದಿ ವ್ಯಾಪಾರಿಗಳೂ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸುಲಲಿತವಾಗಿ ವ್ಯಾಪಾರ ನಡೆಸುತ್ತಾರೆ. ಚಿಲ್ಲರೆಗಾಗಿ ತಡಕಾಡುವ ಗ್ರಾಹಕರೆದುರು ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಲು ತಿಳಿಸಿ, ಹೆಮ್ಮೆಯಿಂದ ಬೀಗುತ್ತಾರೆ. ಪ್ರತಿ ಮನೆಗೆ ಶೌಚಾಲಯ, ನಳದ ಮೂಲಕ ಕುಡಿಯುವ ನೀರಿನ ಪೂರೈಕೆ, ಹಳ್ಳಿ-ಹಳ್ಳಿಯಲ್ಲಿ ವಿದ್ಯುತ್‌, ಇಂಟರ್ನೆಟ್‌ ಸೌಲಭ್ಯ, ದೂರವಾಣಿ ಮೂಲಕವೇ ಗ್ಯಾಸ್‌ ಸಿಲಿಂಡರ್‌ ಬುಕಿಂಗ್‌ ಹೀಗೆ ಜನರ ಬದುಕು ಸರಳ, ಸುಗಮಗೊಳಿಸಲು ಪ್ರತಿ ಯೋಜನೆಯನ್ನು ಒಂದು ಅಭಿಯಾನದ ಮಾದರಿಯಲ್ಲಿ ಜಾರಿಗೊಳಿಸಿ, ಜನರ ಮನ ಗೆದ್ದಿದ್ದಾರೆ. ಜನಕಲ್ಯಾಣದ ಆಶಯವನ್ನು ಕೇವಲ ಮಾತಿನಲ್ಲಲ್ಲ, ಕೃತಿಯಲ್ಲಿ ಸಾಕಾರಗೊಳಿಸಿದ್ದಾರೆ.

ಮೋದಿಜಿ ಅವರು ಆಡಳಿತದಲ್ಲಿಯೂ ಹೊಸ ಸಂಚಲನ ಮೂಡಿಸಿದರು. ಉತ್ತಮ ಆಡಳಿತದ ಧ್ಯೇಯದೊಂದಿಗೆ ತಂತ್ರಜ್ಞಾನವನ್ನೂ ಆಡಳಿತ ಸುಧಾರಣೆಗೆ ಬಳಸಿಕೊಂಡ ಶ್ರೇಯ ಅವರದ್ದು. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಹಾಗೂ ಸಬ್‌ ಕಾ ಪ್ರಯಾಸ್‌ ಎಂಬುದು ಶ್ರೇಷ್ಠ ಭಾರತ ನಿರ್ಮಾಣದ ಅವರ ಕನಸಿನ ಸಾಕಾರಕ್ಕೆ ಅವರು ಕಂಡುಕೊಂಡ ಸೂತ್ರ. ಅವರು ಯೋಜನೆಗಳ ಫಲಾನುಭವಿಗಳನ್ನು ಸೃಷ್ಟಿಸಲಿಲ್ಲ. ಅಭಿವೃದ್ಧಿಯ ಭಾಗೀದಾರರನ್ನು ಸೃಷ್ಟಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದ ಬದುಕು ನಡೆಸಲು ಬೆಳಕು ತೋರಿದರು.

ದೇಶಭಕ್ತಿಯ ಭಾವ ಮೂಡಿಸಿದವರು

ದೇಶದ ನಾಗರಿಕರಲ್ಲಿ ದೇಶ ಭಕ್ತಿಯ ಭಾವ ಮೂಡಿಸಿ, ದೇಶದ ಉನ್ನತಿಗಾಗಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕೆಂಬ ಪ್ರೇರಣೆ ನೀಡಿದರು. ಜನರ ಆಶೋತ್ತರಗಳಿಗೆ ಸ್ಪಂದಿಸಿ, ಜನಸ್ನೇಹಿ ಆಡಳಿತ ನೀಡಿದ ಮೋದಿಜಿ ಅವರನ್ನು ದೇಶದ ನಾಗರಿಕರು ಮುಕ್ತ ಮನಸ್ಸಿನಿಂದ ತಮ್ಮ ನಾಯಕನಾಗಿ ಸ್ವೀಕರಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಎರಡನೇ ಬಾರಿಗೆ ದೊರೆತ ಅಭೂತಪೂರ್ವ ಗೆಲುವು ಇದಕ್ಕೆ ಸಾಕ್ಷಿ.
ಜನಧನ ಯೋಜನೆಯ ಮೂಲಕ ಪ್ರತಿಯೊಬ್ಬ ನಾಗರಿಕನನ್ನೂ ಬ್ಯಾಂಕಿಂಗ್‌ ಜಾಲಕ್ಕೆ ಸೇರ್ಪಡೆಗೊಳಿಸುವ ಮೂಲಕ ಸರ್ಕಾರದ ಸವಲತ್ತುಗಳು ನೇರವಾಗಿ ಅವರಿಗೆ ತಲುಪುವಂತೆ ಮಾಡಿದ್ದು, ಅವರ ದೂರದೃಷ್ಟಿಗೆ ನಿದರ್ಶನ.

ಕಡುಬಡವರಿಗೂ ನಗದು ರಹಿತ ಚಿಕಿತ್ಸಾ ಸೌಲಭ್ಯ ನೀಡುವ ಆಯುಷ್ಮಾನ್‌ ಭಾರತ್‌ ಯೋಜನೆ, ಎಲ್ಲರಿಗೂ ಸೂರು ಒದಗಿಸುವ ಪಿಎಂ ಆವಾಸ್‌ ಯೋಜನೆ, ಪಿಎಂ-ಕಿಸಾನ್‌ ಯೋಜನೆ, ಕಿಸಾನ್‌ ರೇಲ… ಮತ್ತಿತರ ಯೋಜನೆಗಳ ಮೂಲಕ ರೈತರಿಗೆ ಬೆಂಬಲ ನೀಡುವ ಕ್ರಮಗಳು ಮತ್ತು ಇತರ ಯೋಜನೆಗಳು ದನಿಯಿಲ್ಲದವರ ಉನ್ನತಿಗೆ ಪೂರಕವಾಗಿವೆ.

ಜನ ಸೇವೆಯನ್ನೇ ಬದುಕಾಗಿಸಿಕೊಂಡಿರುವ ಮೋದಿಜಿ ಅವರ ನೇತೃತ್ವದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮವೇ ದೊರೆತಿದೆ. ಮೇಕ್‌ ಇನ್‌ ಇಂಡಿಯಾ, ಡಿಜಿಟಲ… ಇಂಡಿಯಾ, ಮುದ್ರಾ ಮತ್ತಿತರ ಯೋಜನೆಗಳ ಫಲವಾಗಿ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ. ಈ ಯೋಜನೆಗಳು ಉದ್ಯೋಗ ಅವಕಾಶ ಹಾಗೂ ಉದ್ಯೋಗದಾತರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡ ದಿಟ್ಟನಿರ್ಣಯಗಳ ಫಲವನ್ನು ನಾವು ಈಗಾಗಲೇ ಕಂಡಿದ್ದೇವೆ. ಇಂದು ಶೇ. 60 ಕ್ಕೂ ಹೆಚ್ಚು ರಕ್ಷಣಾ ಉಪಕರಣಗಳು ಭಾರತದಲ್ಲಿಯೇ ಉತ್ಪಾದನೆಯಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ.

ಕೋವಿಡ್‌ ನಿರ್ವಹಣೆ ಕ್ಷಮತೆ ಅನನ್ಯ

ಮಹಿಳೆಯರ ಸಬಲೀಕರಣ, ಹೆಣ್ಣು ಮಗುವಿನ ಶಿಕ್ಷಣದಂತಹ ಸಾಮಾಜಿಕ ವಿಷಯಗಳಿಗೂ ಹೆಚ್ಚಿನ ಒತ್ತು ನೀಡಿರುವ ಮೋದಿಜಿ ಅವರು ಬೇಟಿ ಬಚಾವೊ, ಬೇಟಿ ಪಢಾವೊ, ಪೋಷಣ್‌ ಅಭಿಯಾನ ಮತ್ತಿತರ ಕಾರ್ಯಕ್ರಮಗಳ ಮೂಲಕ ಸಾಕಾರಗೊಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಶಿಕ್ಷಣ ವ್ಯವಸ್ಥೆಯಲ್ಲಿಯೇ ಒಂದು ಕ್ರಾಂತಿಕಾರಿ ಬದಲಾವಣೆ ತರುವುದಲ್ಲದೆ, ಶಿಕ್ಷಣ ಎಲ್ಲರಿಗೂ ದೊರೆಯುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಯಾವುದೇ ನಿರ್ಬಂಧವಿಲ್ಲದೇ ಅಧ್ಯಯನ ಮಾಡಲು ಇದರಿಂದ ಅನುಕೂಲವಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಎಂತಹ ಸವಾಲುಗಳನ್ನಾದರೂ ಎದುರಿಸುವ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಅವರನ್ನು ಸಜ್ಜುಗೊಳಿಸುವಂತಹ ನೀತಿ ಇದಾಗಿದೆ.

ಕೋವಿಡ್‌ 19ರ ನಿರ್ವಹಣೆಯಲ್ಲಿಯೂ ಮೋದಿ ಜಿ ಅವರು ತೋರಿದ ಕ್ಷಮತೆ ಅನನ್ಯವಾದುದು. 130 ಕೋಟಿ ಜನರ ದೇಶದಲ್ಲಿ ಸೀಮಿತ ಆರೋಗ್ಯ ಸೇವಾ ಸೌಲಭ್ಯಗಳ ನಡುವೆಯೂ ಪ್ರಧಾನ ಮಂತ್ರಿಗಳು ಯಶಸ್ವಿಯಾಗಿ ಕೋವಿಡ್‌ 19 ಸಾಂಕ್ರಾಮಿಕದ ವಿರುದ್ಧದ ಸಮರವನ್ನು ನಿಭಾಯಿಸಿದರು. ಜನರಲ್ಲಿ ವಿಶ್ವಾಸ ಮೂಡಿಸುವ ಜೊತೆಗೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಸಾಂಕ್ರಾಮಿಕದ ನಿಯಂತ್ರಣಕ್ಕೆ ಶ್ರಮಿಸಿದರು. ಇದರೊಂದಿಗೆ ಲಸಿಕೆಗಳ ಸಂಶೋಧನೆಗೆ ಒತ್ತು ನೀಡುವ ಮೂಲಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡರು. ದೇಶದ ಜನತೆಗೆ ಉಚಿತ ಲಸಿಕೆ ನೀಡುವುದರೊಂದಿಗೆ ಹಲವು ದೇಶಗಳಿಗೆ ಲಸಿಕೆ ನೀಡುವ ಮೂಲಕ ಜಾಗತಿಕವಾಗಿ ಮನ್ನಣೆ ಗಳಿಸಿದರು.

PM Modi Birthday ಸೆ.17ಕ್ಕೆ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ, ನಾಲ್ಕು ಕಾರ್ಯಕ್ರಮ!

ಮೋದಿಜಿ ಅವರು ಸವಾಲುಗಳನ್ನೂ ಅವಕಾಶವನ್ನಾಗಿ ಪರಿವರ್ತಿಸುವ ದಾರ್ಶನಿಕರು. ಅವರ ಈ ಸಾಮರ್ಥ್ಯದಿಂದಾಗಿ ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆಯೂ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿದೆ. ಅವರು ಭಾರತದ ಮುನ್ನಡೆಗೆ ನೀಡಿದ ವೇಗ, ತುಂಬಿದ ಶಕ್ತಿ ನಮಗೆಲ್ಲರಿಗೂ ಸ್ಫೂರ್ತಿಯಾಗಲಿ. ಸೇವೆಯನ್ನೇ ಬದುಕಾಗಿಸಿಕೊಂಡಿರುವ ಅವರ ಜನ್ಮದಿನವನ್ನು ಸೇವಾ ಪಾಕ್ಷಿಕವಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ.
ಪ್ರಧಾನಿ ಮೋದಿಜಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

ಆಡಳಿತಕ್ಕೆ ಹೊಸ ಸಂಚಲನ ಮೂಡಿಸಿದ ಧೀಮಂತ ನಾಯಕ

ಮೋದಿ ಅವರು ಯೋಜನೆಗಳ ಫಲಾನುಭವಿಗಳನ್ನು ಸೃಷ್ಟಿಸಲಿಲ್ಲ. ಅಭಿವೃದ್ಧಿಯ ಭಾಗೀದಾರರನ್ನು ಸೃಷ್ಟಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದ ಬದುಕು ನಡೆಸಲು ಬೆಳಕು ತೋರಿದರು. ಜನ ಸೇವೆಯನ್ನೇ ಬದುಕಾಗಿಸಿಕೊಂಡಿರುವ ಮೋದಿಜಿ ಅವರ ನೇತೃತ್ವದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮವೇ ದೊರೆತಿದೆ. ಮೇಕ್‌ ಇನ್‌ ಇಂಡಿಯಾ, ಡಿಜಿಟಲ… ಇಂಡಿಯಾ, ಮುದ್ರಾ ಮತ್ತಿತರ ಯೋಜನೆಗಳ ಫಲವಾಗಿ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  
 

Follow Us:
Download App:
  • android
  • ios