ಬೆಂಗಳೂರು(ಮೇ.18): ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್‌ ಹಿರಿಯ ನಾಯಕ ಎಚ್. ಡಿ. ದೇವೇಗೌಡರಿಗೆ ಇಂದು 88ನೇ ಹುಟ್ಟುಹಬ್ಬದ ಸಂಭ್ರಮ. ಹೀಗಿರುವಾಗ ಪ್ರಧಾನ ಮಂತ್ರಿ ನರರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭ ಕೋರಿದ್ದಾರೆ.

ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಪಿಎಂ ಮೋದಿ 'ದೇವೇಗೌಡ ಜೀಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ದೀರ್ಘಾಯುಷ್ಯ ಹಾಗೂ ಒಳ್ಳೆ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ಇನ್ನು ದೇವೇಗೌಡರ ಮಗ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಕೂಡಾ ತಮ್ಮ ತಂದೆಗೆ ಜನ್ಮ ದಿನದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ 'ದೇಶದ ಅತ್ಯುನ್ನತ, ಅಸಾಮಾನ್ಯ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ. ಈ ಮಾತನ್ನು, ಹಳ್ಳಿಯ ಮಣ್ಣಿಂದ ಬಂದು, ರಾಷ್ಟ್ರೀಯ ಪಕ್ಷದ ಹಿನ್ನೆಲೆ ಇಲ್ಲದೇ ಸಾಧಿಸಿ ತೋರಿಸಿದವರು ಎಚ್. ಡಿ. ದೇವೇಗೌಡರು. ಬದ್ಧತೆ, ಛಲ, ಪರಿಶ್ರಮ, ಹೋರಾಟ ಮತ್ತು ನಾಡಿಗೆ ಹೆಗ್ಗುರುತಾಗಿರುವ ಅವರ ಜನ್ಮದಿನಕ್ಕೆ ಶುಭಾಶಯಗಳು' ಎಂದು ಬರೆದಿದ್ದಾರೆ.

ಕರ್ನಾಟಕ ಸಿಎಂ ಯಡಿಯೂರಪ್ಪ ಕೂಡಾ ದೇವೇಗಡೌಡರಿಗೆ ಶುಭ ಕೋರಿದ್ದು, ಭಾರತದ ಪ್ರಧಾನಮಂತ್ರಿಗಳಾಗಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮಹತ್ವದ ಸೇವೆ ಸಲ್ಲಿಸಿರುವ, ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ರಾಜಕೀಯ ಮುತ್ಸದ್ಧಿ ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡರವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಅನುಗ್ರಹ ತಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಕೂಡಾ ಟ್ವೀಟ್ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.