ನ.28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದು, ಉಡುಪಿ ಕೃಷ್ಣ ಸನ್ನಿಧಿಯಲ್ಲಿ ಭಗವದ್ಗೀತೆ ಶ್ಲೋಕವನ್ನು ಪಠಿಸಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಖಚಿತಪಡಿಸಿದ್ದಾರೆ.
ಉಡುಪಿ (ನ.06): ನ.28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದು, ಉಡುಪಿ ಕೃಷ್ಣ ಸನ್ನಿಧಿಯಲ್ಲಿ ಭಗವದ್ಗೀತೆ ಶ್ಲೋಕವನ್ನು ಪಠಿಸಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಉಡುಪಿಯಲ್ಲಿ ಬೃಹತ್ ಗೀತೋತ್ಸವ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಬೆಳಗ್ಗೆ 11 ಗಂಟೆಗೆ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸುವರ್ಣ ತೀರ್ಥ ಮಂಟಪವನ್ನು ಮೋದಿಯವರು ಉದ್ಘಾಟಿಸಲಿದ್ದು, ಕನಕನ ಕಿಂಡಿಗೆ ಸುವರ್ಣ ಕವಚವನ್ನು ಸಹ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಗೀತಾಮಂದಿರ ಭೇಟಿ ಹಾಗೂ ಮಠದಲ್ಲೇ ಪ್ರಸಾದ ಸ್ವೀಕಾರ ನಡೆಯಲಿದ್ದು, ವಿಶಾಲ ಗದ್ದೆಯಲ್ಲಿ ಲಕ್ಷ ಕಂಠ ಗೀತಾ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೆಲ ಶ್ಲೋಕಗಳನ್ನು ಪಠಣ ಮಾಡುತ್ತಾರೆ. ಮೋದಿ ಸುಮಾರು ಹತ್ತು ಶ್ಲೋಕವನ್ನು ಪಠಣ ಮಾಡುವ ಮೂಲಕ, ವಿಶ್ವದಾದ್ಯಂತ ಭಗವದ್ಗೀತೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ವಿಶ್ವ ನಾಯಕ ವಿಶ್ವಗೀತಾ ಪರ್ಯಾಯಕ್ಕೆ ಬರುತ್ತಿರುವುದು ಬಹಳ ಸಂತೋಷ. ದ.ಕ, ಚಿಕ್ಕಮಗಳೂರು, ಉ.ಕ, ಹಾಸನ, ಶಿವಮೊಗ್ಗದಿಂದ ಜನ ಬರ್ತಾರೆ. ನವೆಂಬರ್ 30ಕ್ಕೆ ಕೃಷ್ಣ ಮಠದಲ್ಲಿ ಸಂತ ಸಂಗಮ ನಡೆಯಲಿದ್ದು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗುತ್ತಾರೆ ಎಂದು ಸಹ ಪುತ್ತಿಗೆ ಶ್ರೀ ತಿಳಿಸಿದರು.
ಗೀತೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ವಿಶ್ವಗೀತಾ ಪರ್ಯಾಯ ಎಂದೇ ಕರೆಯಲ್ಪಡುವ 4ನೇ ಪರ್ಯಾಯೋತ್ಸವ ಆರಂಭದಲ್ಲಿ ಸಂಕಲ್ಪಿಸಿದಂತೆ, ನ. 8ರಿಂದ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವದ ಆಮಂತ್ರಣ ಪತ್ರವನ್ನು ಬುಧವಾರ ಕನಕ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು. ಈ ಗೀತೋತ್ಸವದ ಅಂಗವಾಗಿ ಅಪೂರ್ವವಾದ ಲಕ್ಷಕಂಠ ಗೀತಾ ಪಾರಾಯಣ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಅಲ್ಲದೇ ಅನೇಕ ಸಂತರು ಈ ಉತ್ಸವದಲ್ಲಿ ಪಾಲ್ಗೊಂಡು ಗೀತಾ ಸಂದೇಶ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಮಾತನಾಡಿ, ಲಕ್ಷಾಂತರ ಮಂದಿ ಈಗಾಗಲೇ ಕೋಟಿ ಗೀತಾ ಲೇಖನಯಜ್ಞದಲ್ಲಿ ಭಾಗವಹಿಸಿದ್ದು ಅತೀವ ಸಂತಸ ತಂದಿದೆ. ಆ ಪ್ರಯುಕ್ತ ನಡೆಯಲಿರುವ ಈ ಬೃಹತ್ ಗೀತೋತ್ಸವದಲ್ಲಿ ಭಗವದ್ಗೀತೆಯ ತತ್ತ್ವವನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರಧಾನ ಮಂತ್ರಿ ಮೋದಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ರೀಕೃಷ್ಣನ ಸಂಕಲ್ಪವಾಗಿದೆ. ಈ ಕಾರ್ಯಕ್ರಮವನ್ನು ಉಡುಪಿಯ ಎಲ್ಲಾ ಜನರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಗೀತಾಚಾರ್ಯ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಶಿಸಿದರು. ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮದ ವಿವರ ನೀಡಿದರು. ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.
