ತುಮಕೂರು[ಜ.01]: ಪ್ರಧಾನಿ ಮೋದಿ ಅವರು ಗುರುವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಬಳಿಕ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬೃಹತ್‌ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ತುಮಕೂರಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಮಾಹಿತಿ ನೀಡಿದರು. ರೈತ ಸಮಾವೇಶದಲ್ಲಿ ರಾಜ್ಯದ ಮೂವರು ಪ್ರಗತಿಪರ ರೈತರು ಸೇರಿ 28 ಮಂದಿಗೆ ಪ್ರಧಾನಿ ಮೋದಿ ಅವರು ‘ಕೃಷಿ ಕರ್ಮಣ್ಯೆ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜತೆಗೆ, ಪ್ರಧಾನ ಮಂತ್ರಿ ‘ಕಿಸಾನ್‌ ಸನ್ಮಾನ್‌’ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಿದ್ದಾರೆ ಎಂದರು.

ಸಿದ್ಧಗಂಗಾ ಮಠಕ್ಕೆ ಭೇಟಿ: ಸಮಾವೇಶಕ್ಕೂ ಮುನ್ನ ಅಂದರೆ ಮಧ್ಯಾಹ್ನ 2.15ಕ್ಕೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿರುವ ಅವರು, ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಶ್ರೀಗಳ ವಸ್ತು ಪ್ರದರ್ಶನ ಭವನಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.

ಮಠದ ಕಾರ್ಯಕ್ರಮದ ನಂತರ 3.30ಕ್ಕೆ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಣಿಪುರ, ಜಾರ್ಖಂಡ್‌ ರಾಜ್ಯಗಳ ಮುಖ್ಯಮಂತ್ರಿಗಳು, ಉತ್ತರಾಖಂಡ ರಾಜ್ಯಪಾಲರು ಸೇರಿ ವಿವಿಧ ರಾಜ್ಯಗಳ ಗಣ್ಯರು ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.