Asianet Suvarna News Asianet Suvarna News

BBMP Elections: ಮೋದಿ ಶೋ ನಡೆಸಿ ಚುನಾವಣೆಗೆ ಬಿಜೆಪಿ ಸಿದ್ಧತೆ?

* 20ರಂದು ರಾಜ್ಯ ಪ್ರವಾಸಕ್ಕಾಗಿ ನಗರಕ್ಕೆ ಆಗಮಿಸಲಿರುವ ಮೋದಿ

* ಸೆಪ್ಟೆಂಬರ್‌ ಅಥವಾ ಆಗಸ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ 

* 28 ಕಿಮೀ ರಸ್ತೆಯಲ್ಲಿ ಸಾಗಲಿರುವ ಪ್ರಧಾನಿ

* ಈ ವೇಳೆ ಅಪಾರ ಜನಸಂಖ್ಯೆ ಸೇರಿಸಿ ಬಿಬಿಎಂಪಿ ಚುನಾವಣೆಗೆ ಪರೋಕ್ಷ ಪ್ರಚಾರ ನಡೆಸಲು ಬಿಜೆಪಿ ಯೋಜನೆ

PM Modi to hold road shows, public rally during his visit to Bengaluru on June 20 pod
Author
Bangalore, First Published Jun 16, 2022, 7:22 AM IST

ಬೆಂಗಳೂರು(ಜೂ.16): ವರ್ಷದಿಂದಲೂ ನೆನೆಗುದಿಗೆ ಬಿದ್ದಿರುವ ಬಿಬಿಎಂಪಿ ಚುನಾವಣೆ ಬರುವ ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸುವ ವೇಳೆ ರೋಡ್‌ ಶೋ ನಡೆಸಿ ಚುನಾವಣಾ ಪ್ರಚಾರವನ್ನು ಪರೋಕ್ಷವಾಗಿ ಆರಂಭಿಸಲು ಬಿಜೆಪಿ ಮುಖಂಡರು ಯೋಜಿಸಿದ್ದಾರೆ.

ಸುಪ್ರೀಂಕೋರ್ಚ್‌ ತೀರ್ಪಿನ ಹಿನ್ನೆಲೆಯಲ್ಲಿ ಹೆಚ್ಚು ದಿನಗಳ ಕಾಲ ಮುಂದೂಡುವುದು ಸಾಧ್ಯವಿಲ್ಲದಿರುವುದರಿಂದ ಅಂತಿಮವಾಗಿ ಚುನಾವಣೆ ನಡೆಸಲು ಆಡಳಿತಾರೂಢ ಬಿಜೆಪಿ ಮನಸ್ಸು ಮಾಡಿದ್ದು, ಬಹುತೇಕ ಜುಲೈ ಅಂತ್ಯ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಪೂರಕವಾಗಿ ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರ ಪ್ರದಕ್ಷಿಣೆ ಹಮ್ಮಿಕೊಂಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಜತೆಗೆ ಮೂಲಸೌಕರ್ಯಗಳ ಕೊರತೆ ಇರುವುದನ್ನು ಪರಿಶೀಲಿಸಿ ಸರಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಈ ತಿಂಗಳ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದಿನ ಸಾರ್ವಜನಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸುವುದರ ಜೊತೆಗೆ ಅವರು ಯಲಹಂಕ ವಾಯುನೆಲೆಯಿಂದ ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯವರೆಗೆ (ಐಐಎಸ್‌ಸಿ) ರೋಡ್‌ ಶೋ ನಡೆಸುವ ಮೂಲಕ ಮುಂಬರುವ ಬಿಬಿಎಂಪಿ ಚುನಾವಣಾ ಪ್ರಚಾರಕ್ಕೆ ಪರೋಕ್ಷವಾಗಿ ಚಾಲನೆ ನೀಡಲು ಬಿಜೆಪಿ ಸಿದ್ಧತೆ ಆರಂಭಿಸಿದೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಮುಖಂಡರನ್ನು ಒಳಗೊಂಡ ಪ್ರಧಾನಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅದಕ್ಕಿಂತ ಕಡಿಮೆಯಾಗದಂತೆ ನಾವು ಸ್ವಾಗತಿಸಬೇಕು. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಅವರ ಭೇಟಿಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಮೋದಿ ಅವರು ಬಹಳ ದಿನಗಳ ಬಳಿಕ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಬೇರೆ ರಾಜ್ಯಗಳಿಗೆ ಹೋದಾಗ ಭಾರಿ ಬೆಂಬಲ ಸಿಕ್ಕಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಂತರ ಈ ಪ್ರವಾಸ ಕೈಗೊಂಡಿದ್ದಾರೆ. ಇತ್ತೀಚೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಜನಸ್ತೋಮ ಸೇರಿತ್ತು. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಬೆಂಬಲ ಸಿಗುವಂತೆ ನೋಡಿಕೊಳ್ಳಬೇಕು. ಮೊದಲನೆಯದಾಗಿ ಮೋದಿ ಅವರು ಬಹಳ ದಿನಗಳ ನಂತರ ರಾಜ್ಯಕ್ಕೆ ಬರುತ್ತಿದ್ದಾರೆ. ಎರಡನೆಯದಾಗಿ ಚುನಾವಣೆ ವರ್ಷ ಇದೆ ಮತ್ತು ಮೂರನೇಯದಾಗಿ ಬಿಬಿಎಂಪಿ ಚುನಾವಣೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವ ಪ್ರವಾಸವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಪ್ರತಿ ಮಂಡಲದಿಂದ 5 ಸಾವಿರ ಜನ ಸೇರಿಸಲು ಸಿಎಂ ಸೂಚನೆ

ಯಲಹಂಕದಿಂದ ಪ್ರಧಾನಿಯವರು ಬರುವಾಗ ಅಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಬೇಕು. ಯಲಹಂಕದಿಂದ ಐಐಎಸ್‌ಸಿವರೆಗೆ 16 ಕಿ.ಮೀ. ಅಂತರ ಇದ್ದು, ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ ಶೋ ಆಗಬೇಕು. ಅಂತೆಯೇ ಕೊಮ್ಮಘಟ್ಟದಿಂದ ಡಾ

ಬಿ.ಆರ್‌.ಅಂಬೇಡ್ಕರ್‌ ಎಕಾಮಿಕ್ಸ್‌ ಸಂಸ್ಥೆಗೆ ರಸ್ತೆಯ ಮೂಲಕ ಆಗಮಿಸಲಿದ್ದಾರೆ. ಇದು 12 ಕಿ.ಮೀ. ಇದ್ದು, ಅಲ್ಲಿಯೂ ಪ್ರಧಾನಿಯವರನ್ನು ಸ್ವಾಗತಿಸಲು ರೋಡ್‌ ಶೋ ನಡೆಸಬೇಕು. ಎರಡು ಕಡೆಯೂ ದೊಡ್ಡಮಟ್ಟದಲ್ಲಿ ಆಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದೇ ವೇಳೆ ಕೊಮ್ಮಘಟ್ಟದ ಸಮಾರಂಭಕ್ಕೆ ಯಶವಂತಪುರ, ಆರ್‌.ಆರ್‌.ನಗರ, ವಿಜಯ ನಗರ, ಗೋವಿಂದರಾಜ ನಗರ, ದಾಸರಹಳ್ಳಿ ಹಾಗೂ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರಗಳಿಂದ ಜನ ಸೇರಿಸಬೇಕು. ಪ್ರತಿ ಮಂಡಲದಿಂದ ಕನಿಷ್ಠ ಐದು ಸಾವಿರ ಜನ ಬರಬೇಕು. ಜನರನ್ನು ಕರೆತರಲು ಬಸ್‌ ವ್ಯವಸ್ಥೆ ಮಾಡಬೇಕು ಎಂಬ ಸೂಚನೆಯನ್ನು ಬಿಜೆಪಿ ನಾಯಕರು ಸ್ಥಳೀಯ ಮುಖಂಡರಿಗೆ ನೀಡಿದ್ದಾರೆ.

ಎಲ್ಲೆಲ್ಲೆ ರೋಡ್‌ ಶೋ?

*ಯಲಹಂಕ ವಾಯುನೆಲೆಯಿಂದ ಐಐಎಸ್ಸಿವರೆಗೆ

*ಕೆಮ್ಮಘಟ್ಟದಿಂದ ಅಂಬೇಡ್ಕರ್‌ ಎಕನಾಮಿಕ್ಸ್‌ ಶಾಲೆವರೆಗೆ

Follow Us:
Download App:
  • android
  • ios