Bagalkote: ಮನ್ ಕಿ ಬಾತ್‌ನಲ್ಲಿ ಬಿಲ್‌ಕೆರೂರ ಗ್ರಾಮದ ಕೆರೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್‌ನಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ಬಾಗಲಕೋಟೆ ಮತಕ್ಷೇತ್ರದ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿ ಶ್ಲಾಘಿಸಿರೋ ಘಟನೆ ನಡೆದಿದೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಆ.28): ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್‌ನಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ಬಾಗಲಕೋಟೆ ಮತಕ್ಷೇತ್ರದ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿ ಶ್ಲಾಘಿಸಿರೋ ಘಟನೆ ನಡೆದಿದೆ. ಹೌದು! ಅಮೃತ ಸರೋವರ ಅಭಿಯಾನದಡಿ ಬಾಗಲಕೋಟೆ ಜಿಲ್ಲೆಯ ಬಿಲ್ ಕೆರೂರ ಗ್ರಾಮದ ಕೆರೆಯನ್ನ ಬಾಗಲಕೋಟೆ ಜಿಲ್ಲಾ ಪಂಚಾಯತಿ ವತಿಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯಡಿ ಅಂದಾಜು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲದೆ ಅಭಿವೃದ್ಧಿಗೊಂಡ ಕೆರೆಯನ್ನು ಅಗಸ್ಟ್ 15ರಂದು ಉದ್ಘಾಟನೆಗೊಳಿಸಲಾಗಿತ್ತು. ಸದ್ಯ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಲ್ ಕೆರೂರ ಕೆರೆ ಅಭಿವೃದ್ಧಿ ಪ್ರಸ್ತಾಪಿಸಿ ಪ್ರಧಾನಿ ಮೋದಿ ಶ್ಲಾಘನೆ, ಅಭಿನಂದನೆ: ಹೌದು! ಇಂದು ನಡೆದ ಪ್ರಧಾನಿಗಳ ಮನ್ ಕಿ ಬಾತ್ ಕೇಳುತ್ತಿದ್ದಂತೆ ಬಾಗಲಕೋಟೆ ಜಿಲ್ಲೆಯ ಜನತೆಗೆ ಅಚ್ಚರಿಯೊಂದು ಕಾದಿತ್ತು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಏಕಾಎಕಿ ಬಾಗಲಕೋಟೆ ಜಿಲ್ಲೆಯ ಬಿಲ್ ಕೆರೂರ ಗ್ರಾಮದ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೆ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿಪಡಿಸುವ ಮೂಲಕ ಹರಿದು ಹೋಗುತ್ತಿದ್ದ ನೀರನ್ನು ತಡೆದು ಹಿಡಿಯಲಾಗಿದೆ. ಜೊತೆಗೆ ಸುಂದರ ಕೆರೆ ಅಭಿವೃದ್ಧಿ ಮಾಡಲಾಗಿದೆ. ಇದು ಶ್ಲಾಘನೀಯ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅಭಿನಂದಿಸಿದರು.
ಪ್ರಧಾನಿ ಮೋದಿ ಮನ್ ಕಿ ಬಾತ್: ಮುಗದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಜೋಶಿ
ಪ್ರಧಾನಿ ಕೆರೆ ಅಭಿವೃದ್ಧಿ ಶ್ಲಾಘಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕ ವೀರಣ್ಣ ಚರಂತಿಮಠ: ಇನ್ನು ತಮ್ಮ ಬಾಗಲಕೋಟೆ ಮತಕ್ಷೇತ್ರದ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಕ್ಕೆ ಪ್ರಧಾನಿಯವರನ್ನು ಶಾಸಕ ವೀರಣ್ಣ ಚರಂತಿಮಠ ಅಭಿನಂದಿಸಿದ್ದಾರೆ. ಅಲ್ಲದೆ ತಮ್ಮ ಮತಕ್ಷೇತ್ರದಲ್ಲಿ ಇನ್ನು ಹೆಚ್ಚೆಚ್ಚು ಉತ್ತಮ ಅಭಿವೃದ್ಧಿ ಕೆಲಸ ಮಾಡುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೀರ್ತಿ ತರುವಂತಹ ಕೆಲಸ ಮಾಡುತ್ತೇವೆ ಎಂದು ಶಾಸಕ ಚರಂತಿಮಠ ಹೇಳಿದ್ದಾರೆ.
ಅಮೃತ ಮಹೋತ್ಸವ ಹಿನ್ನೆಲೆ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ: ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೂ ಜಿಲ್ಲಾ ಪಂಚಾಯತಿ ವತಿಯಿಂದ ಅಮೃತ ಸರೋವರ ಯೋಜನೆಯಡಿ 75 ಕೆರೆಗಳ ಅಭಿವೃದ್ಧಿಗೆ ಮುಂದಾಗಿತ್ತು. ಇವುಗಳ ಪೈಕಿ ಬಿಲ್ ಕೆರೂರ ಗ್ರಾಮದ ಕೆರೆ ಸೇರಿದಂತೆ 15 ಕೆರೆಗಳು ಅಗಸ್ಟ್ 15ರಂದು ಉದ್ಘಾಟನೆಗೊಂಡಿದ್ದವು. ಬಿಲ್ ಕೆರೂರ ಕೆರೆಯನ್ನು ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿ ಅಂದಾಜು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಸದ್ಯ ಪ್ರಧಾನಿ ಮೋದಿಯವರು ಮನ್ ಕಿ ಬಾತ್‌ನಲ್ಲಿ ಜಿಲ್ಲೆಯ ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ ಬಗ್ಗೆ ಶ್ಲಾಘಿಸಿದ್ದು, ತಮಗೆ ಸಂತಸ ತಂದಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ನಿರ್ವಹಿಸಲು ಇದು ಪ್ರೇರಣೆಯಾಗಲಿದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಓ ಟಿ.ಭೂಬಾಲನ್ ತಿಳಿಸಿದ್ದಾರೆ.
Mann ki Baat; ಕೋಲಾರದ ಬೃಹತ್ ತ್ರಿವರ್ಣ ಧ್ವಜ ಬಗ್ಗೆ ಮೋದಿ ಶ್ಲಾಘನೆ
ವಿಶೇಷ ದಿನಗಳಂದೇ ಅಭಿವೃದ್ಧಿಯಾದ ಕೆರೆಗಳ ಉದ್ಘಾಟನೆ: ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಅಮೃತ ಸರೋವರ ಅಭಿಯಾನದಡಿ ಸದ್ಯ 125 ಕೆರೆಗಳ ಅಭಿವೃದ್ಧಿಗೆ ಪಣ ತೊಡಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಅಗಸ್ಟ್ 15ಕ್ಕೆ ಒಟ್ಟು 15 ಕೆರೆಗಳ ಅಭಿವೃದ್ಧಿ ಪೂರ್ಣಗೊಂಡಿದ್ದು, ಇನ್ನುಳಿದಂತೆ 110 ಕೆರೆಗಳ ಅಭಿವೃದ್ಧಿ ಕೆಲಸ ಮುನ್ನಡೆಯುತ್ತಿದೆ. ಇನ್ನು ಕೆರೆಗಳ ಅಭಿವೃದ್ಧಿ ಕೆಲಸ ಭರದಿಂದ ಸಾಗಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಓ ಟಿ.ಭೂಬಾಲನ್ ಅಭಿವೃದ್ಧಿಗೊಂಡ ಕೆರೆಗಳನ್ನ ಮಹತ್ವದ ದಿನಗಳಂದೇ ಉದ್ಘಾಟನೆಗೊಳಿಸಲು ಸೂಚನೆ ನೀಡಿದ್ದಾರೆ. ಅಂದರೆ ಅಕ್ಟೋಬರ್ 2 ಗಾಂಧಿ ಜಯಂತಿ, ನವೆಂಬರ್ 1 ಕನ್ನಡ ರಾಜ್ಯೋತ್ಸವ ಮತ್ತು ಜನವರಿ 26 ಗಣರಾಜ್ಯೋತ್ಸವ ಹೀಗೆ ವಿಶೇಷ ದಿನಗಳಂದೇ ಅಭಿವೃದ್ಧಿ ಮೂಲಕ ಪೂರ್ಣಗೊಂಡ ಕೆರೆಗಳನ್ನ ಉದ್ಘಾಟನೆಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬಾಗಲಕೋಟೆ ಸಿಇಓ ಟಿ.ಭೂಬಾಲನ್ ತಿಳಿಸಿದ್ದಾರೆ.