ಶಿವಾನಂದ ಫ್ಲೈಓವರ್ ಕೆಳಗೆ ಸ್ಕೇಟಿಂಗ್, ಬಾಸ್ಕೆಟ್ ಬಾಲ್ ಆಡಿ!
- ಶಿವಾನಂದ ಫ್ಲೈಓವರ್ ಕೆಳಗೆ ಸ್ಕೇಟಿಂಗ್, ಬಾಸ್ಕೆಟ್ ಬಾಲ್ ಆಡಿ!
- ಸ್ಕೇಟಿಂಗ್, ಬಾಸ್ಕೆಟ್ ಬಾಲ್ ಅಂಕಣ ನಿರ್ಮಿಸಲು ಬಿಬಿಎಂಪಿ ಯೋಜನೆ
- ಶೌಚಾಲಯ, ವಿಶ್ರಮಿಸಲು ಆಸನ ವ್ಯವಸ್ಥೆ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಸೆ.26) : ನಗರದ ಶಿವಾನಂದ ವೃತ್ತದಲ್ಲಿ ಬಹುತೇಕ ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಮೇಲ್ಸೇತುವೆ ಕೆಳಭಾಗದಲ್ಲಿರುವ ಸ್ಥಳಾವಕಾಶದಲ್ಲಿ ‘ಸ್ಕೇಟಿಂಗ್’ ಹಾಗೂ ‘ಬ್ಯಾಸ್ಕೆಟ್ ಬಾಲ್’ ಅಂಕಣ ನಿರ್ಮಿಸಿ ಸದ್ಬಳಕೆ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 47 ಫ್ಲೈಓವರ್‌ಗಳಿದ್ದು, ಇವುಗಳ ಕೆಳ ಭಾಗದಲ್ಲಿ ಕಸ ಸುರಿಯುವುದು, ಮೂತ್ರ ವಿಸರ್ಜನೆ ಸೇರಿದಂತೆ ಅನೈತಿಕ ಜಾಣಗಳಾಗಿ ಮಾರ್ಪಟಿವೆ. ಇದರಿಂದ ನಗರದ ಸ್ವಚ್ಛತೆ ಮತ್ತು ಸೌಂದರ್ಯ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ, ಪ್ರಾಯೋಗಿಕವಾಗಿ ಶಿವಾನಂದ ಮೇಲ್ಸೇತುವೆ ಕೆಳಭಾಗದ ಸ್ಥಳವನ್ನು ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಬಿಬಿಎಂಪಿ ಯೋಜನಾ ವಿಭಾಗವು ಮುಂದಾಗಿದೆ.
ಶಿವಾನಂದ ವೃತ್ತದ ಮೇಲ್ಸೇತುವೆ ಬಳಿಯಲ್ಲಿ ಫುಟ್‌ಪಾತ್ ಒತ್ತುವರಿ
ಮುಖ್ಯಮಂತ್ರಿಗಳ ಅಧಿಕೃತ ನಿವಾಸ, ಕಚೇರಿ, ಸಚಿವರ ನಿವಾಸಗಳು, ರೇಸ್ ಕೋರ್ಸ್ ಹತ್ತಿರ ಇರುವುದರಿಂದ ಶಿವಾನಂದ ವೃತ್ತವು ಅತ್ಯಂತ ಜನಸಂದಣಿ ಮತ್ತು ವಾಹನ ದಟ್ಟಣೆಯ ಕೇಂದ್ರವಾಗಿದೆ. ಆದರೆ, ಹತ್ತಿರದಲ್ಲಿ ಸಾರ್ವಜನಿಕರ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆ ಇಲ್ಲ. ಇನ್ನು ಮಕ್ಕಳಿಗೆ ಆಟವಾಡುವುದಕ್ಕೂ ಮೈದಾನವಿಲ್ಲ. ಹೀಗಾಗಿ, 493 ಮೀಟರ್ ಉದ್ದದ ಮೇಲ್ಸೇತುವೆ ಕೆಳಭಾಗದ ಸ್ಥಳವನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭಿಸಲಾಗಿದೆ.
ಎರಡು ಕ್ರೀಡಾ ಅಂಕಣಗಳು:
ಈ ಹಿಂದೆ ಗಾಂಧಿ ಭವನದ ಸಮೀಪದಲ್ಲಿ ಖಾಸಗಿ ಸ್ಪೋಟ್ಸ್‌ರ್ ಕ್ಲಬ್ ಇತ್ತು. ಕೋವಿಡ್ ನಂತರ ಈ ಸ್ಪೋಟ್ಸ್‌ರ್ ಕ್ಲಬ್ ಸಹ ಮುಚ್ಚಿದೆ. ಹೀಗಾಗಿ, ಫ್ಲೈಓವರ್ ಕೆಳಭಾಗದಲ್ಲಿ ಒಂದು ಸ್ಕೇಟಿಂಗ್ ಅಂಕಣ ಮತ್ತು ಬಾಸ್ಕೆಟ್ ಬಾಲ್ ಅಂಕಣ ನಿರ್ಮಾಣಕ್ಕೆ ಯೋಜನೆ ರೂಪಿಸಿಸಲಾಗಿದೆ. ಬ್ಯಾಸ್ಕೆಟ್ ಬಾಲ್ ಅಂಕಣದಿಂದ ಬಾಲ್ ಹೊರ ಹೋಗದಂತೆ ನೆಟ್ ಅಳವಡಿಕೆ, ಸ್ಕೇಟಿಂಗ್ ಅಂಕಣದ ಸುರಕ್ಷತೆಗೂ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಫ್ಲೈಓವರ್ ನಿರ್ಮಾಣ ಪೂರ್ವದಲ್ಲಿ ಇಲ್ಲಿದ್ದ ಸಾರ್ವಜನಿಕ ಶೌಚಾಲಯವನ್ನು ತೆರವು ಮಾಡಲಾಗಿತ್ತು. ಇದೀಗ ಫ್ಲೈಓವರ್‌ನ ಎರಡು ತುದಿಯಲ್ಲಿ ಒಂದೊಂದು ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ. ಜತೆಗೆ, ಸಾರ್ವಜನಿಕರು ಕುಳಿತುಕೊಂಡು ವಿಶ್ರಾಂತಿ ಪಡೆಯುವುದಕ್ಕೂ ಆಸನ ವ್ಯವಸ್ಥೆ ಮಾಡುವ ಕಾಮಗಾರಿ ಆರಂಭಿಸಲಾಗಿದೆ.
ಶಿವಾನಂದ ಫ್ಲೈಓವರ್ ಬಳಿ ದಿನದ 24 ಗಂಟೆಯೂ ವಾಹನ ಸಂಚಾರ ಇರುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗಿರಲಿದ್ದು, ಫ್ಲೈಓವರ್ ಕೆಳಭಾಗದಲ್ಲಿ ತಾಪಮಾನ ಹೆಚ್ಚಾಗುವುದರಿಂದ ಎಷ್ಟರ ಮಟ್ಟಿಗೆ ಸಾರ್ವಜನಿಕರು ಈ ಸೌಲಭ್ಯ ಬಳಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಹಲವು ಕಡೆ ವಿಫಲ: ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಹೆಬ್ಬಾಳ ಫ್ಲೈಓವರ್ ಕೆಳಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕೆ ಸಂತೆ ಅಂಗಳಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ, ಗ್ರಾಹಕರು ಆಗಮಿಸದ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳು ಫ್ಲೈಓವರ್ ಕೆಳಭಾಗದಲ್ಲಿ ವ್ಯಾಪಾರ ನಡೆಸಲು ಆಸಕ್ತಿ ತೋರಲಿಲ್ಲ. ಅದೇ ರೀತಿ ನಗರದ ಒಂದರೆಡು ಫ್ಲೈಓವರ್ ಕೆಳಭಾಗದಲ್ಲಿ ಉದ್ಯಾನವನ ಸೇರಿದಂತೆ ವಿವಿಧ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ವಿಫಲವಾಗಿರುವುದು ಕಣ್ಣ ಮುಂದಿದೆ.
Hebbal Flyover ಬಳಿ ಸಂಚಾರ ದಟ್ಟಣೆ ತಪ್ಪಿಸಲು ಇಂದಿನಿಂದ ಹೊಸ ನಿಯಮ
ಪ್ರಾಯೋಗಿಕವಾಗಿ ಸ್ಕೇಟಿಂಗ್ ಮತ್ತು ಬಾಸ್ಕೆಟ್ ಬಾಲ್ ಅಂಕಣ, ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆ ಮಾಡಿ ಶಿವಾನಂದ ಫ್ಲೈಓವರ್ ಕೆಳಭಾಗದ ಜಾಗವನ್ನು ಸಾರ್ವಜನಿಕರ ಬಳಕೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಯಶಸ್ವಿಯಾದರೆ, ನಗರ ಇತರೆ ಫ್ಲೈಓವರ್ ಕೆಳಭಾಗದಲ್ಲಿಯೂ ಕ್ರೀಡಾ ಚಟುವಟಿಕೆ, ಆಸನ ವ್ಯವಸ್ಥೆ ಮಾಡಲಾಗುತ್ತದೆ.
-ಲೋಕೇಶ್, ಮುಖ್ಯ ಎಂಜಿನಿಯರ್, ಬಿಬಿಎಂಪಿ ಯೋಜನಾ ವಿಭಾಗ.