ಚಾಮರಾಜನಗರ[ಫೆ.25]: ಬಂಡೀಪುರದಲ್ಲಿ ಅಗ್ನಿ ನರ್ತನ ಮುಂದುವರೆದಿದ್ದು, ಮುಗ್ಧ ಪ್ರಾಣಿಗಳು ಸುಟ್ಟು ಕರಕಲಾಗಿವೆ. ಬಂಡೀಪುರ ರಕ್ಷಿತಾರಣ್ಯದಲ್ಲಿ ಹಬ್ಬಿಕೊಂಡಿರುವ ಈ ಬೆಂಕಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತೀ ಹೆಚ್ಚು ಪ್ರದೇಶವನ್ನು ಭಸ್ಮ ಮಾಡಿದೆ. ಬೆಂಕಿಯ ಕೆನ್ನಾಲಿಗೆ ಕಾಡನ್ನು ಆವರಿಸುತ್ತಿದ್ದಂತೆಯೇ ಈ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಚರ್ಚೆಗಳೂ ಆರಂಭವಾಗಿವೆ. ಕೆಲವರು ಇದು ಕಾಡ್ಗಿಚ್ಚು ಎಂದು ವಾದಿಸಿದರೆ, ಅನೇಕರು ಇದು ಮಾನವ ನಿರ್ಮಿತ ಎಂದು ಆರೋಪಿಸುತ್ತಿದ್ದಾರೆ. ಇವೆಲ್ಲದರ ನಡುವೆ ಬೆಂಕಿ ತಗುಲಿರುವುದರ ಹಿಂದೆ ಟಿಂಬರ್ ಮಾಫಿಯಾ ಕೈವಾಡ ಇರುವ ಶಂಕೆಯೂ ವ್ಯಕ್ತವಾಗಿದೆ. ಆದರೀಗ ಈ ಅಂತೆ ಕಂತೆಗಳ ನಡುವೆ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು, ಕಾಡಿಗೆ ಮನುಷ್ಯರೇ ಬೆಂಕಿ ಹಚ್ಚಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ.

ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಸಿ: ಸಿಎಂ ಕುಮಾರಸ್ವಾಮಿ

ಹೌದು ಟ್ವಿಟರ್ ನಲ್ಲಿ United Conservation Movement ಎಂಬ ಖಾತೆಯಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಬಂಡೀಪುರದಲ್ಲಿ ನಿಯಂತ್ರಿಸಲು ಸಾಧ್ಯವಾಗದ ಬೆಂಕಿಯನ್ನು ಮನುಷ್ಯರೇ ಹಚ್ಚಿದ್ದಾರೆ ಎಂಬ ಅನುಮಾನವನ್ನು ಗಟ್ಟಿಗೊಳಿಸಿದೆ. '2016ರಲ್ಲಿ ಬಂಡೀಪುರ ಅರಣ್ಯದ ಕಲ್ಕೆರೆ, ಬೇಗೂರು ಹಾಗೂ ಗುಂಡ್ರೆ ಬೆಟ್ಟಗಳಂತೆ  ಈ ವರ್ಷವೂ ಬಂಡೀಪುರ ಬೆರಣಿ/ಲದ್ದಿಗೆ ಹಚ್ಚಿದ ಬೆಂಕಿಗೆ ಬಲಿಯಾದಂತೆ ಭಾಸವಾಗುತ್ತಿದೆ. ಬಂಡೀಪುರದಲ್ಲಿ ಬಹುದೊಡ್ಡ ಅಗ್ನಿ ಅನಾಹುತ ಸಂಭವಿಸಿದ ಸುಮಾರು 20 ನಿಮಿಷದ ಬಳಿಕ ಹರೇಕೆರೆ, ಗೋಪಾಲಸ್ವಾಮಿ ಬೆಟ್ಟದಲ್ಲಿ ಈ ದೃಶ್ಯಗಳು ಕಂಡು ಬಂದಿವೆ ' ಎಂದು ಬರೆದುಕೊಂಡಿದ್ದಾರೆ.

ಬಂಡೀಪುರದ 8650 ಎಕರೆ ಭಸ್ಮ: ಇಲ್ಲಿ ಈ ಪ್ರಮಾಣದ ಅರಣ್ಯ ಹಾನಿ ಇದೇ ಮೊದಲು!
ಅಕೌಂಟ್ ನಲ್ಲಿ ನೀಡಿದ ಮಾಹಿತಿ ಅನ್ವಯ  United Conservation Movement ಎಂಬುವುದು ಪರಿಸರ ಪ್ರೇಮಿ ನಾಗರಿಕರ ಸಂಘವಾಗಿದೆ. ಇದು ಅರಣ್ಯ ರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತದೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಹಲವಾರು ಅನುಮಾನಗಳನ್ನು ಹುಟ್ಟು ಹಾಕಿವೆ.