'SITಯಿಂದ ಫೋನ್ ಕದ್ದಾಲಿಕೆ, ಖಚಿತವಾದ್ರೆ ತನಿಖಾಧಿಕಾರಿಗಳ ಸಮವಸ್ತ್ರ ಬಿಚ್ಚಿಸದೇ ಬಿಡೋದಿಲ್ಲ'
ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ದಿಕ್ಕು ತಪ್ಪಿಸುವ ಕೆಲಸ ಎಸ್‌ಐಟಿಯಿಂದ ನಡೆಯುತ್ತಿದೆ| ಪೊಲೀಸರು ಆದ ಮಾತ್ರಕ್ಕೆ ಯಾರ ಫೋನ್ ಕೂಡ ಕದ್ದಾಲಿಕೆ ಮಾಡಬಹುದು ಎಂದುಕೊಂಡಿರುವ ಹಾಗೇ ಇದೆ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ ಎಂದು ಪೊಲೀಸರ ವಿರುದ್ಧ ಕಿಡಿಕಾರಿದ ವಕೀಲ ಜಗದೀಶ್|
ಬೆಂಗಳೂರು(ಏ.16): ಸಿಡಿ ಪ್ರಕರಣದಲ್ಲಿ ಯುವತಿ ಪರ ವಕೀಲರ ಫೋನ್ ಕದ್ದಾಲಿಕೆ ಮಾಡುವ ಬಗ್ಗೆ ಗುಮಾನಿ ಇದ್ದು, ಇದು ಖಚಿತವಾದರೆ ಎಸ್‌ಐಟಿಯ ತನಿಖಾಧಿಕಾರಿಗಳ ಸಮವಸ್ತ್ರ ಬಿಚ್ಚಿಸದೇ ಬಿಡುವುದಿಲ್ಲ ಎಂದು ವಕೀಲ ಕೆ.ಎನ್.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಅವರು, ‘ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ದಿಕ್ಕು ತಪ್ಪಿಸುವ ಕೆಲಸ ಎಸ್‌ಐಟಿಯಿಂದ (ವಿಶೇಷ ತನಿಖಾ ತಂಡ) ನಡೆಯುತ್ತಿದೆ. ನಿಜಕ್ಕೂ ಎಸ್‌ಐಟಿ ಆರೋಪಿ ವಿಚಾರಣೆ ಮಾಡುವುದನ್ನು ಬಿಟ್ಟು, ಕೇವಲ ಸಂತ್ರಸ್ತೆ ಪರ ಇರುವ ವ್ಯಕ್ತಿಗಳು ಹಾಗೂ ವಕೀಲರ ಫೋನ್ ಕದ್ದಾಲಿಕೆಯಲ್ಲಿ ನಿರತವಾಗಿದೆ ಎಂಬ ಸಂಶಯ ಬಂದಿದೆ. ಶೀಘ್ರದಲ್ಲೇ ಎಲ್ಲವೂ ಹೊರ ಬರಲಿದೆ. ಪೊಲೀಸರು ಆದ ಮಾತ್ರಕ್ಕೆ ಯಾರ ಫೋನ್ ಕೂಡ ಕದ್ದಾಲಿಕೆ ಮಾಡಬಹುದು ಎಂದುಕೊಂಡಿರುವ ಹಾಗೇ ಇದೆ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ’ ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
SIT ವಿರುದ್ಧವೇ ತಿರುಗಿಬಿದ್ದ ಸಿ.ಡಿ. ಸಂತ್ರಸ್ತೆ: ವಕೀಲ ಜಗದೀಶ್‌ನಿಂದಲೂ ಗಂಭೀರ ಆರೋಪ
‘ಪ್ರಕರಣದ ಆರೋಪಿ ನಾಲ್ಕೈದು ತಿಂಗಳಿಂದ ಯರಾರಯರ ಜತೆ ಸಂಪರ್ಕದಲ್ಲಿದ್ದರು? ಯಾರಾರಯರು ಆರೋಪಿಯನ್ನು ಸಂಪರ್ಕ ಮಾಡಿದ್ದಾರೆ ಎಂಬ ಬಗ್ಗೆ ಎಸ್‌ಐಟಿಯ ಮಾಹಿತಿ ಕಲೆ ಹಾಕಿಲ್ಲ. ಇವರ ಸಿಡಿಆರ್ (ಮೊಬೈಲ್ ಕರೆಗಳ ವಿವರ) ಬಗ್ಗೆ ಕೂಡ ಮಾಹಿತಿ ಕಲೆ ಹಾಕಿಲ್ಲ. ನಮ್ಮ ಫೋನ್ ಯಾರು ಕದ್ದಾಲಿಕೆ ಮಾಡುತ್ತಿದ್ದಾರೋ ಅವರ ಸಮವಸ್ತ್ರವನ್ನು ನಾನು ಬಿಚ್ಚಿಸುತ್ತೇನೆ. ಮೊಬೈಲ್ ಕದ್ದಾಲಿಕೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ನಿಮಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವರು ಅಥವಾ ಗೃಹ ಇಲಾಖೆ ಕಾರ್ಯದರ್ಶಿ ಆದೇಶ ಇದೆಯೇ?’ ಎಂದು ಪ್ರಶ್ನಿಸಿದ್ದಾರೆ.
ಯುವತಿಗೆ, ನಮಗೆ ಭದ್ರತೆ ನೀಡಿಲ್ಲ:
‘ಪ್ರಕರಣದ ಯುವತಿ ಹಾಗೂ ವಕೀಲರಿಗೆ ಭದ್ರತೆಯ ವ್ಯವಸ್ಥೆಯ ಅಗತ್ಯ ಇದೆ ಎಂದು ಕಬ್ಬನ್‌ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಮಾರುತಿ ಅವರೇ ಖುದ್ದು ನಮಗೆ ಲೆಟರ್ ನೀಡಿದ್ದಾರೆ. ಆದರೆ ಇಲ್ಲಿ ತನಕ ಭದ್ರತೆ ನೀಡಿಲ್ಲ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ನಗರ ಪೊಲೀಸ್ ಆಯುಕ್ತ ಹಾಗೂ ಎಸ್‌ಐಟಿ ಅಧಿಕಾರಿಗಳ ವಿರುದ್ಧ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗುವುದು’ ಎಂದು ಇದೇ ವೇಳೆ ಜಗದೀಶ್ ತಿಳಿಸಿದ್ದಾರೆ.