ಬೆಂಗಳೂರು ಸೇರಿದಂತೆ ರಾಜ್ಯದ 11 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಾಫ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಗೆ ಸೇರಿದ 30ಕ್ಕೂ ಹೆಚ್ಚು ಕಚೇರಿಗಳಿಗೆ ಬೀಗ ಹಾಕಿದ ಪೊಲೀಸರು

ಬೆಂಗಳೂರು/ನವದೆಹಲಿ(ಸೆ.30): ಕೇಂದ್ರ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಆರೋಪದಡಿ ಬೆಂಗಳೂರು ಸೇರಿದಂತೆ ರಾಜ್ಯದ 11 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಾಫ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದ 30ಕ್ಕೂ ಹೆಚ್ಚು ಕಚೇರಿಗಳಿಗೆ ಪೊಲೀಸರು ಗುರುವಾರ ಬೀಗ ಹಾಕಿದ್ದು, ಸಂಘಟನೆಗೆ ಸೇರಿದ ದಾಖಲೆ ಪತ್ರ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸಂಘಟನೆಯ ಹಲವು ಪದಾಧಿಕಾರಿಗಳ ಮನೆ ಸೇರಿದಂತೆ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ.

ದೇಶದ ಇತರೆಡೆಗೂ ಪಿಎಫ್‌ಐ ಕಚೇರಿಗಳನ್ನು ಬಂದ್‌ ಮಾಡಿದ್ದು, ದೆಹಲಿಯಲ್ಲಿ 3 ಕಡೆ ಹಾಗೂ ಅಸ್ಸಾಂನಲ್ಲಿ 3 ಕಡೆ ಬೀಗ ಜಡಿದಿದ್ದಾರೆ. ಇದೇ ವೇಳೆ, ದೇಶಾದ್ಯಂತ ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳ ಫೇಸ್‌ಬುಕ್‌, ಟ್ವೀಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಚಾನಲ್‌ಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಪಿಎಫ್‌ಐ ಕಾರ್ಯಕರ್ತರ ವಾಟ್ಸಾಪ್‌ ಚಾಟ್‌ಗಳನ್ನು ಕೂಡ ಗಮನಿಸಲಾಗುತ್ತಿದೆ.

PFI ಕಾರ್ಯಕರ್ತರನ್ನ ಮುಸ್ಲಿಮರೇ ಸಮುದಾಯದಿಂದ ಹೊರಹಾಕಬೇಕು - ಉಡುಪಿ ಶಾಸಕ ರಘುಪತಿ ಭಟ್

ರಾಜ್ಯ ಕೇಂದ್ರ ಕಚೇರಿಗೆ ಬೀಗ:

ಬೆಂಗಳೂರಿನಲ್ಲಿ ಜೆ.ಸಿ.ನಗರದ ಎಸ್‌ಕೆ ಗಾರ್ಡನ್‌ನಲ್ಲಿರುವ ಪಿಎಫ್‌ಐ ರಾಜ್ಯ ಕೇಂದ್ರ ಕಚೇರಿ, ಹೆಬ್ಬಾಳದ ಮನೋರಾಯನಪಾಳ್ಯದಲ್ಲಿನ ಪಿಎಫ್‌ಐ ಮಾಧ್ಯಮ ಕೇಂದ್ರ, ಕಬ್ಬನ್‌ ಪೇಟೆ ಮುಖ್ಯರಸ್ತೆಯಲ್ಲಿರುವ ಪಿಎಫ್‌ಐ ಸಹ ಸಂಘಟನೆಯಾದ ಎಂಪವರ್‌ ಆಫ್‌ ಇಂಡಿಯಾ ಫೌಂಡೇಷನ್‌ ಕಚೇರಿ, ಕ್ವಿನ್ಸ್‌ ರಸ್ತೆಯ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕಚೇರಿ, ಟ್ಯಾನರಿ ರಸ್ತೆಯಲ್ಲಿರುವ ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ) ಕಾರ್ಯಾಲಯ ಸೇರಿ ಐದು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂರು ಕಡೆ ದಾಳಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ವಗಾರ್‌ ರಸ್ತೆಯಲ್ಲಿರುವ ಪಿಎಫ್‌ಐ ಕಾರ್ಯಕರ್ತ ಆರೀಫ್‌ ಹಾಗೂ ಪಿಎಫ್‌ಐ ಜಿಲ್ಲಾಧ್ಯಕ್ಷ ಚಾಂದ್‌ ಪಾಷಾ ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಚಿಕ್ಕಮಗಳೂರಿನ ಎಸ್‌ಡಿಪಿಐ ಕಾರ್ಯಾಲಯದಲ್ಲಿ ಪಿಎಫ್‌ಐ ಚಟುವಟಿಕೆ ನಡೆಸುತ್ತಿರುವುದರಿಂದ ಈ ಕಚೇರಿ ಮೇಲೂ ದಾಳಿ ನಡೆಸಲಾಯಿತು.

ಕೊಪ್ಪಳದಲ್ಲಿ ಪೊಲೀಸರು ಪಿಎಫ್‌ಐ ಜಿಲ್ಲಾಧ್ಯಕ್ಷನಾಗಿದ್ದ ಅಬ್ದುಲ್‌ ಫೈಯಾಸ್‌ನ ಬ್ಯಾಂಕ್‌ ಖಾತೆಯ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಬಂಧಿತರು ಹಾಗೂ ಸಂಘಟನೆಯ ಪದಾಧಿಕಾರಿಗಳ ಮನೆಗಳ ಮೇಲೆಯೂ ದಾಳಿ ನಡೆಸಲಾಗಿದೆ. ಕೋಲಾರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಸಂಘಟನೆಯ ಕಚೇರಿಗೆ ಬೀಗ ಹಾಕಿರುವ ಪೊಲೀಸರು, ಹಲವು ಬ್ಯಾನರ್‌, ಬಂಟಿಂಗ್‌್ಸ , ಕೆಲ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸೀಜ್‌ ಮಾಡಿದ್ದಾರೆ.

ದ.ಕ.ದಲ್ಲಿ ಭಾರಿ ಕಾರ್ಯಾಚರಣೆ:

ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿನ 12 ಹಾಗೂ ಗ್ರಾಮಾಂತರ ಪ್ರದೇಶದ 7 ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ. ಉಡುಪಿಯ ಹೊರಭಾಗದಲ್ಲಿರುವ ಪಂದುಬೆಟ್ಟು ಎಂಬಲ್ಲಿನ ಮಸೀದಿಯ ಬಳಿ, ಹೂಡೆ, ಗಂಗೊಳ್ಳಿಗಳಲ್ಲಿರುವ ಎಸ್‌ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಕಚೇರಿಗಳಿಗೆ ಬೀಗ ಹಾಕಿದ್ದಾರೆ. ಇಲ್ಲಿನ ಎಸ್‌ಡಿಪಿಐ ಕಚೇರಿಗಳಿಂದಲೇ ಪಿಎಫ್‌ಐ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲದೆ, ಎಸ್‌ಡಿಪಿಐ ನಾಯಕರಾದ ಬಶೀರ್‌ ಮತ್ತು ನಜೀರ್‌ ಎಂಬುವರ ಮನೆ, ನಾಯರ್‌ ಕೆರೆಯ ಮಸೀದಿಗಳಿಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿಯಲ್ಲಿ ಮಹದೇವಪೇಟೆಯಲ್ಲಿರುವ ಪಿಎಫ್‌ಐ ಕಚೇರಿಗೆ ಬೀಗ ಹಾಕಲಾಗಿದೆ. ಬೆಳಗಾವಿಯಲ್ಲಿನ ಸುಭಾಷ ನಗರದಲ್ಲಿರುವ ಪಿಎಫ್‌ಐ ಕಚೇರಿಯನ್ನು ಗುರುವಾರ ಸೀಜ್‌ ಮಾಡಲಾಗಿದೆ. ಅಲ್ಲದೆ, ತಲೆಮರೆಸಿಕೊಂಡಿರುವ ಪಿಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ನವೀದ್‌ ಕಟಗಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಹುಮನಾಬಾದ್‌ನಲ್ಲಿ ಸಂಘಟನೆಯ ಬೀದರ್‌ ಜಿಲ್ಲಾಧ್ಯಕ್ಷ ಅಬ್ದುಲ್‌ ಕರೀಮ್‌ಗೆ ಸೇರಿದ ಅಂಗಡಿ ಲೇಔಟ್‌ದಲ್ಲಿರುವ ಪರ್ಫೆಕ್ಟ್ ಕಂಪ್ಯೂಟರ್‌ ತರಬೇತಿ ಸಂಸ್ಥೆ, ನೂರಖಾನ್‌ ಅಖಾಡಾ ಮಸೀದಿ ಪಕ್ಕದಲ್ಲಿರುವ ಮನೆ ಹಾಗೂ ಶಿವಪೂರ ಬಡಾವಣೆಯಲ್ಲಿರುವ ಎಸ್‌ಡಿಪಿಐ ಸಂಘಟನೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

PFI Ban: ಪಿಎಫ್‌ಐ ಬ್ಯಾನ್‌ ಆಯ್ತು, ಎಸ್‌ಡಿಪಿಐ ಕಥೆ ಏನು?

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಒಬ್ಬ ಹಾಗೂ ಶಿಡ್ಲಘಟ್ಟದಲ್ಲಿ ಮೂವರು ಕಾರ್ಯಕರ್ತರ ಮನೆಗಳ ಮೇಲೆಯೂ ದಾಳಿ ನಡೆದಿದೆ. ಚಿತ್ರದುರ್ಗದಲ್ಲಿ ಪಿಎಫ್‌ಐ ಸಂಘಟನೆಯ ಕಾರ್ಯಾಚರಣೆ ನಡೆಯುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಎಸ್‌ಡಿಪಿಐ ಕಚೇರಿಗೆ ಬೀಗ ಹಾಕಲಾಗಿದೆ.

ಪಿಎಫ್‌ಐ ಆಸ್ತಿ ಜಪ್ತಿ ಪ್ರಕ್ರಿಯೆ ಆರಂಭ

ಪಿಎಫ್‌ಐ ಸಂಘಟನೆಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಪರಿಶೀಲಿಸಿ ಜಪ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಆಸ್ತಿ ಮುಟ್ಟುಗೋಲು ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇನ್ನುಮುಂದೆಯೂ ಆ ಸಂಘಟನೆಯ ಪ್ರತಿಯೊಬ್ಬ ಸದಸ್ಯನ ಚಲನವಲನದ ಮೇಲೆ ಕಣ್ಣಿಡಲಾಗುತ್ತದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.