ಮಾಲೂರು[ಜ.14] : ಸ್ಥಳೀಯ ಗ್ರಾಮೀಣ ಕ್ರೀಡಾ ಸಾಂಸ್ಕೃತಿಕ ಕಲಾ ತಂಡವು ಸಂಕ್ರಾತಿ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ನಾಟಿ ಕೋಳಿ ಸಾರು- ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಗುರುಪ್ಪ ಶೆಟ್ಟಿ ಎಂಬುವರು 16.5 ಮುದ್ದೆ ತಿಂದು ₹15 ಸಾವಿರ ಗೆದ್ದಿದ್ದಾರೆ. ಕಳೆದ ಬಾರಿಯೂ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ದೊಡ್ಡ ಕಡತೂರಿನ ಗುರಪ್ಪ ಶೆಟ್ಟಿ ಈ ಸಲ ಸಹ ಪ್ರಥಮ ಸ್ಥಾನ ಪಡೆದರು.

₹10 ಸಾವಿರ ಬಹುಮಾನದ ಜೊತೆಗೆ ಶಾಸಕ ನಂಜೇಗೌಡ ಅವರು ನೀಡಿದ ₹5 ಸಾವಿರ ಪಡೆದರು. ಟೇಕಲ್ ಹೋಬಳಿಯ ಕೃಷ್ಣಪ್ಪ 15 ಮುದ್ದೆ ತಿಂದು ₹10 ಸಾವಿರ, ದೊಡ್ಡಕಡತೂರು ಕೃಷ್ಣಪ್ಪ ಶೆಟ್ಟಿ 12 ಮುದ್ದೆ ತಿಂದು ಮೂರನೇ ಸ್ಥಾನ ಪಡೆದು ₹5 ಸಾವಿರ, ನಾಲ್ಕನೇ ಬಹುಮಾನವಾಗಿ ₹3 ಸಾವಿರ ಪಡೆದ ಸಂಪಂಗೆರೆ ಶ್ರೀನಿವಾಸ 11.5 ಮುದ್ದೆ ತಿಂದರು.

ತಲಾ 10 ಮುದ್ದೆ ತಿಂದ ಒಂಭತ್ತು ಮಂದಿಗೆ ತಲಾ ₹500 ನೀಡಲಾಯಿತು. ಒಟ್ಟು 28 ಸ್ಪರ್ಧಿಗಳು ಭಾಗವಹಿಸಿದ್ದರು. ಒಬ್ಬ ಸ್ಪರ್ಧಿ ಮುದ್ದೆ ಜತೆಯಲ್ಲಿ ಸಸ್ಯಾಹಾರ ಸ್ವೀಕರಿಸಿದರು.