ಬೆಂಗಳೂರು[ಡಿ.05]: ಮೆಟ್ರೋ ರೈಲಿನಲ್ಲಿ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಜತೆ ಅನುಚಿತ ವರ್ತನೆ ತೋರಿಸಿದ ಕಿಡಿಗೇಡಿಯೊಬ್ಬನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ.

ನೆಲಮಂಗಲದ ಲೋಕೇಶ್‌ ಕುಚೋದ್ಯತನ ತೋರಿಸಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ಮೆಜೆಸ್ಟಿಕ್‌ನಿಂದ ಸುಬ್ರಹ್ಮಣ್ಯ ನಗರಕ್ಕೆ ಸಂತ್ರಸ್ತೆ ತೆರಳುವಾಗ ಈ ಘಟನೆ ನಡೆದಿದೆ. ರಾಜಾಜಿನಗರದ ವಲ್ಡ್‌ರ್‍ ಟ್ರೇಡ್‌ ಸಮುಚ್ಛಯದಲ್ಲಿರುವ ಖಾಸಗಿ ಕಂಪನಿಯಲ್ಲಿ ಸಂತ್ರಸ್ತೆ ಉದ್ಯೋಗದಲ್ಲಿದ್ದಾರೆ. ಎಂದಿನಂತೆ ಸೋಮವಾರ ಸಹ ಕೆಲಸಕ್ಕಾಗಿ ಮೆಜೆಸ್ಟಿಕ್‌ನಿಂದ ಮೆಟ್ರೋದಲ್ಲಿ ಅವರು ತೆರಳುತ್ತಿದ್ದರು. ಆ ವೇಳೆ ಅವರ ಹಿಂಬದಿ ನಿಂತಿದ್ದ ಆರೋಪಿ, ಮಾರ್ಗ ಮಧ್ಯೆ ಸಂತ್ರಸ್ತೆಯನ್ನು ಹಿಂದಿನಿಂದ ಸ್ಪರ್ಶಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಕೂಡಲೇ ಆಕೆ ಪ್ರತಿರೋಧಿಸಿದಾಗ ಒರಾಯನ್‌ ಮಾಲ್‌ ಸಮೀಪದ ನಿಲ್ದಾಣದಲ್ಲಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ.

ಕೂಡಲೇ ಆರೋಪಿಯನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಸಾರ್ವನಿಜಕರು ಹಿಡಿದು ಥಳಿಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ.