ಮೈಸೂರು[ಜ.25]: ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್​ ಶಾಸಕ ಕೆ.ಮಹದೇವ ಅವರ ಮೇಲೆ ಎರಡು ಮದುವೆ ಆಗಿರುವ ಆರೋಪ ಕೇಳಿ ಬಂದಿದೆ. ಮೊದಲ ಹೆಂಡತಿ ಬದುಕಿರುವಾಗಲೇ ಆಕೆಯನ್ನು ಮನೆಯಿಂದ ಹೊರದಬ್ಬಿ ಮತ್ತೊಂದು ಮದುವೆಯಾಗಿರುವ ವಿವಾದ ಶಾಸಕನ ಕೊರಳು ಸುತ್ತಿಕೊಂಡಿದೆ.

 ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು  ಸಾಲಿಗ್ರಾಮ ಊರಿನ ರುಕ್ಮಿಣಿ[ಮೊದಲ ಹೆಂಡತಿ] ಎಂಬುವವರು ಮಹದೇವ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ಶಾಸಕರಿಗೆ ಈಗ ಸಂಕಷ್ಟ ಎದುರಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಿಂದ ಶಾಸಕನ ಎರಡು ಮದುವೆ ರಹಸ್ಯ ಬಯಲಾಗಿದ್ದು, ಮೊದಲನೇ ಪತ್ನಿ ರುಕ್ಮಿಣಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 

1975ರಲ್ಲಿ ಮದುವೆಯಾಗಿದ್ದ ಮಹದೇವ್ ಹಾಗೂ ರುಕ್ಮಿಣಿ ದಂಪತಿಗೆ ಒಂದು ಹೆಣ್ಣುಮಗು ಜನಿಸಿತ್ತು. ಆದರೆ ಮದುವೆಯಾಗಿ 9 ವರ್ಷದ ನಂತರ ರುಕ್ಮಿಣಿ ಹಾಗೂ ಮಗಳನ್ನು ದೂರ ಮಾಡಿ ಸುಭದ್ರಮ್ಮ ಎಂಬುವರ ಜತೆ ವಿವಾಹವಾಗಿದ್ದಾರೆ ಎಂಬುದು ರುಕ್ಮಿಣಿ ಅವರ ದೂರು.

ಹಿರಿಯರ ಸಮ್ಮುಖದಲ್ಲಿ ಮದುವೆಯಾದ ತನಗೆ ಇಲ್ಲಸಲ್ಲದ ಕಷ್ಟಗಳನ್ನು ನೀಡಿದ ಆಸಾಮಿ ಚುನಾವಣೆ ವೇಳೆ ಅಫಿಡವಿಟ್​ ಸಲ್ಲಿಸುವಾಗ ಪತ್ನಿಯ ಹೆಸರಿದ್ದ ಸ್ಥಳದಲ್ಲಿ ಸುಭದ್ರಮ್ಮ ಎಂದು ಉಲ್ಲೇಖಿಸಿದ್ದಾರೆ. ಅದನ್ನು ಹೇಗೋ ನೋಡಿದ ಮೊದಲ ಪತ್ನಿ ರುಕ್ಮಿಣಿ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ ಇದನ್ನು ರುಜುವಾತು ಮಾಡಲು ತನ್ನ ಮಗಳ ಡಿಎನ್​ಎ ಟೆಸ್ಟ್​ ಮಾಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. 

ಸದ್ಯ ಪ್ರಕರಣ ಕೆ.ಆರ್​.ನಗರದ ಜೆಎಂಎಫ್​ಸಿ ನ್ಯಾಯಾಲಯದಲ್ಲಿದ್ದು, ಫೆಬ್ರವರಿ16ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದರೊಂದಿಗೆ ಗುಟ್ಟಾಗಿ ಎರಡು ಮದುವೆ ಆಗಿರುವ ವಿಚಾರದಲ್ಲಿ ಶಾಸಕರಿಗೆ ತೊಡಕಾಗುವ ಸಾಧ್ಯತೆ ಇದೆ.