ಬೆಂಗಳೂರು (ಮೇ.10):  ಎರಡು ವಾರಗಳ ಸೆಮಿ ಲಾಕ್‌ಡೌನ್‌ ಸೋಮವಾರದಿಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಗತ್ಯವಸ್ತುಗಳ ಖರೀದಿಗೆ ಜನ ಭಾನುವಾರ ಮಾರುಕಟ್ಟೆಗಳಿಗೆ ಮುಗಿಬಿದ್ದರು. ಖರೀದಿ ಭರಾಟೆಯಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುವ ಆತಂಕ ಎದುರಾಗಿದೆ.

ಸೆಮಿಲಾಕ್‌ಡೌನ್‌ಗೂ ಮುನ್ನ ಕಡೇ ದಿನದ ಈ ಖರೀದಿ ಪ್ರಕ್ರಿಯೆ ವೇಳೆ ಕಲಬುರಗಿ, ಬೆಳಗಾವಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಹಾಕಬೇಕೆನ್ನುವ ನಿಯಮಗಳಿಗೆ ಜನ ಕ್ಯಾರೇ ಅನ್ನಲಿಲ್ಲ. ಮಾರುಕಟ್ಟೆಯನ್ನು ಸಂಪರ್ಕಿಸುವ ರಸ್ತೆಗಳಂತೂ ವಾಹನಗಳು ಹಾಗೂ ಜನಜಂಗುಳಿಯಿಂದ ಗಿಜಗುಡುತ್ತಿತ್ತು.

ಕಲಬುರಗಿಯಲ್ಲಿ ಮದುವೆ ಮತ್ತಿತರ ಕಾರ‍್ಯಕ್ರಮಕ್ಕಾಗಿ ಹೊಸ ಬಟ್ಟೆಖರೀದಿಗಾಗಿ ಜನ ಮುಗಿಬಿದ್ದರು. ಇಲ್ಲಿನ ಸೂಪರ್‌ ಮಾಕೆಟ್‌ನಲ್ಲಿ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ರಾಯಚೂರಿನ ಬಟ್ಟೆಬಜಾರ್‌ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆತು ಜನ ಓಡಾಡಿದರು. ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಶಿವಮೊಗ್ಗದಲ್ಲಿ ತರಕಾರಿ ಖರೀದಿ ನೆಪದಲ್ಲಿ ಜನ ಹಾಗೂ ವ್ಯಾಪಾರಸ್ಥರಿಂದಲೂ ಕೋವಿಡ್‌ ನಿಯಮಾವಳಿ ನಿರ್ಲಕ್ಷಿಸಲಾಯಿತು.

ಸೆಮಿ ಲಾಕ್ಡೌನ್‌, ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಕೊನೆ ...

ಚಿಕ್ಕಬಳ್ಳಾಪುರದಲ್ಲಿ ಸಂತೆ ಮಾರುಕಟ್ಟೆ, ಚಿತ್ರದುರ್ಗದ ಪ್ರಮುಖ ಮಾರುಕಟ್ಟೆಗಳಲ್ಲೂ ಕೊರೋನಾ ನಿಯಮ ಉಲ್ಲಂಘಿಸಿ 15 ದಿನಕ್ಕೆ ಬೇಕಾಗುವಷ್ಟುಅಗತ್ಯವಸ್ತುಗಳನ್ನು ಖರೀದಿಸಲು ಜನ ಮುಗಿಬಿದ್ದರು. ಚಳ್ಳಕೆರೆ ಪಟ್ಟಣದ ಮಾರುಕಟ್ಟೆಯಲ್ಲಂತೂ ಕಾಲಿಡಲಾಗದ ಸ್ಥಿತಿ ಇತ್ತು. ಮಂಡ್ಯದ ಸೂಪರ್‌ ಮಾರುಕಟ್ಟೆ, ದಾವಣಗೆರೆಯ ಕೆ.ಆರ್‌.ಮಾರುಕಟ್ಟೆಕೂಡ ಜನರಿಂದ ತುಂಬಿ ತುಳುಕುತ್ತಿತ್ತು. ಬಳ್ಳಾರಿಯಲ್ಲಿ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಜನಸಾಗರವೇ ಸೇರಿತ್ತು.

ಇನ್ನು ವಿಜಯಪುರ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ, ಹುಬ್ಬಳ್ಳಿ, ಕೊಪ್ಪಳ, ಉತ್ತರ ಕನ್ನಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲೂ ಇದೇ ಸ್ಥಿತಿ ಇತ್ತು. ಹುಬಳ್ಳಿ-ಧಾರವಾಡದ ಹಲವೆಡೆ ಪೊಲೀಸರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಾಕೀತು ಮಾಡುತ್ತಿದ್ದರು. ಆದರೂ ಜನ ತರಕಾರಿ ಮಾರುವ ವಾಹನ, ತಳ್ಳುಗಾಡಿಗಳ ಎದುರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದರು. ಉತ್ತರ ಕನ್ನಡ ಜಿಲ್ಲೆಯ ಎಲ್ಲೆಡೆ ನಗರ, ಪಟ್ಟಣ ಪ್ರದೇಶದಲ್ಲಿ ಮಾರುಕಟ್ಟೆಜನರಿಂದ ಗಿಜಿಗಿಡುತ್ತಿತ್ತು.

ಮದ್ಯದಂಗಡಿ ಮುಂದೆಯೂ ಕ್ಯೂ: ಮಾರುಕಟ್ಟೆಯ ಸ್ಥಿತಿ ಒಂದು ರೀತಿಯಾದರೆ ಹಾಸನ, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆ ಬಾರ್‌ಗಳ ಮುಂದೆಯೂ ಮದ್ಯಪ್ರಿಯರ ಸಾಲಿತ್ತು. 15 ದಿನದ ಸೆಮಿಲಾಕ್‌ಡೌನ್‌ ವೇಳೆ ಎಲ್ಲಿ ಮದ್ಯದ ಸ್ಟಾಕ್‌ ಖಾಲಿಯಾಗುತ್ತೋ ಅನ್ನೋ ಭೀತಿಯಿಂದ ಜನ ಬೆಳಗ್ಗೆಯಿಂದಲೇ ಸಾಲಲ್ಲಿ ನಿಂತು ಎರಡು ವಾರಕ್ಕಾಗುವಷ್ಟುಮದ್ಯ ಖರೀದಿಸಿದರು.

ಭಾನುವಾರದ ಬಾಡೂಟಕ್ಕೆ ಮಾಂಸದಂಗಡಿ ಮುಂದೆ ಸಾಲು

ರಾಮನಗರ, ಹಾಸನ, ಬೆಂಗಳೂರು, ಕೋಲಾರ, ಮಂಡ್ಯ ಸೇರಿ ಹಲವೆಡೆ ಭಾನುವಾರವಾದ್ದರಿಂದ ಮಾಂಸದಂಗಡಿ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ಜನಜಂಗುಳಿ ಇತ್ತು. ಹಾಸನದಲ್ಲಿ ಸಾಮಾಜಿಕ ಅಂತರ ಮರೆತು ಜನ ಮೀನು, ಮಾಂಸ ಖರೀದಿಸಿದರು. ಶಿವಮೊಗ್ಗದಲ್ಲೂ ಇದೇ ಪರಿಸ್ಥಿತಿ ಇತ್ತಾದರೂ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಲಾಠಿ ಚಾಜ್‌ ಮಾಡುವ ಮೂಲಕ ಜನಜಂಗುಳಿ ಚದುರಿಸಿದರು. ಬೆಂಗಳೂರಿನಲ್ಲೂ ಮಾಂಸದಂಗಡಿ ಮುಂದೆ ಹೆಚ್ಚಿನ ಜನ ಸೇರಿದ್ದರು.

ಲಾಕ್‌ಡೌನ್‌: ಕೊಪ್ಪಳದಲ್ಲಿ 8 ಗಡಿ ಬಂದ್ .

ಕೊಡಗು, ದಕ್ಷಿಣ ಕನ್ನಡ ಸ್ತಬ್ಧ

ಮಂಗಳೂರು/ಮಡಿಕೇರಿ: ಸೆಮಿಲಾಕ್‌ಡೌನ್‌ ಮುನ್ನಾದಿನವಾದ ಭಾನುವಾರ ರಾಜ್ಯದ ಬೇರೆಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಬಹುತೇಕ ಸ್ತಬ್ಧವಾಗಿದ್ದವು. ಮಂಗಳೂರು ನಗ​ರ​ದ ಹೃದ​ಯ ಭಾಗದ ​ಸೆಂಟ್ರ​ಲ್‌ ಮಾರು​ಕ​ಟ್ಟೆಸುತ್ತ​ಮು​ತ್ತ ಸೇರಿ ಮಾರು​ಕ​​ಟ್ಟೆ, ಅಂಗ​ಡಿ ಮುಂಗ​ಟ್ಟು​ಗ​ಳು ​ಸಂಪೂ​ರ್ಣ ಬಂದ್‌ ಆಗಿ​ದ್ದ​ವು. ಅಗ​ತ್ಯ ​ವ​ಸ್ತು​ಗ​ಳ ಸಾಗಾ​ಟ​ದ ವಾಹ​ನ​ಗ​ಳು, ಫುಡ್‌ ಡೆಲಿ​ವ​ರಿ ವಾಹ​ನ​ಗ​ಳು ಬೆ​ರ​ಳೆ​ಣಿ​ಕೆ​ ಸಂಖ್ಯೆ​ಯ​ಲ್ಲಿ ನಗ​ರ​ದ ರಸ್ತೆ​ಗ​ಳ​ಲ್ಲಿ ಕಂಡು ಬಂ​ತಾ​ದ​ರೂ ಬಹು​ತೇ​ಕ​ವಾ​ಗಿ ನಗ​ರ ವೀ​ಕೆಂಡ್‌ ಕಫä್ರ್ಯ​ಗೆ ಸ್ತ​ಬ್ಧ​ಗೊಂಡಿ​ದೆ. ಮಡಿಕೇರಿ ನಗರದ ಪ್ರಮುಖ ರಸ್ತೆಗಳೂ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona