ಬೆಂಗಳೂರು(ಏ.18): ಲಾಕ್‌ಡೌನ್‌ ವಿಸ್ತರಣೆಯಾದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಓಡಾಡುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ ಕೊರೋನಾ ಸೋಂಕು ನಿಯಂತ್ರಣಕ್ಕೆ ಹರ ಸಾಹಸಪಡುತ್ತಿರುವ ಸಂದರ್ಭದಲ್ಲಿ ರಾಜಧಾನಿ ಮಂದಿ ಲಾಕ್‌ ಡೌನ್‌ ಬೆಂಬಲಿಸುವ ಬದಲು ಬೀದಿಗಳಿಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ವ್ಯಾಪ್ತಿಯಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದರೂ ಇದ್ಯಾವುದನ್ನೂ ಲೆಕ್ಕಿಸದೆ ಜನ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಮೊದಲ ಹಂತದ ಲಾಕ್‌ ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಣೆ ವಾಹನಗಳು ಹಾಗೂ ಪೊಲೀಸ್‌ ವಾಹನಗಳನ್ನು ಹೊರತುಪಡಿಸಿ ಎಲ್ಲ ಮಾದರಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಜನ ವಾಹನಗಳಲ್ಲಿ ಆಚೆ ಬರಲು ಹೆದರುತ್ತಿದ್ದರು. ಇದೀಗ ಯಾವುದೇ ಭಯ ಇಲ್ಲದೆ ಸ್ವಂತ ವಾಹನಗಳಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದಾರೆ.

ರಾಜ್ಯದಲ್ಲಿ ರ‍್ಯಾಪಿಡ್‌ ಟೆಸ್ಟ್‌ ಆರಂಭ?: 12400 ಟೆಸ್ಟಿಂಗ್‌ ಕಿಟ್‌ ಆಗಮನ!

ವೈದ್ಯಕೀಯ, ಆಹಾರ ಸರಬರಾಜು, ದಿನಸಿ, ತರಕಾರಿ ಸರಬರಾಜು ಹೆಸರಿನಲ್ಲಿ ವಾಹನಗಳು, ದ್ವಿಚಕ್ರ ವಾಹನಗಳ ಮೇಲೆ ಪೇಪರ್‌ ಅಂಟಿಸಿಕೊಂಡ ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯ ಅನೇಕ ಕಡೆ ಸಾಮಾನ್ಯವಾಗಿದೆ.

ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಜಂಕ್ಷನ್‌ಗಳನ್ನು ಬ್ಯಾರಿಕೇಡ್‌ ಹಾಕಿ ಮುಚ್ಚಿದ್ದರೂ ಅಡ್ಡ ರಸ್ತೆಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಿಂದ ವಿಶ್ರಾಂತಿ ಇಲ್ಲದೆ ಹಗಲು-ರಾತ್ರಿ ಕರ್ತವ್ಯ ಮಾಡುತ್ತಿರುವ ಪೊಲೀಸರು, ಈ ಜನ ಹಾಗೂ ವಾಹನಗಳ ಓಡಾಟವನ್ನು ಗಂಭೀರವಾಗಿ ಕಾಣಿಸದಂತೆ ಕಾಣುತ್ತಿಲ್ಲ. ರಾತ್ರಿ ಹೊತ್ತು ಪೊಲೀಸರು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ತಡೆದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ, ಹಗಲಿನಲ್ಲಿ ಇದು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಹಲವು ರಸ್ತೆಗಳಲ್ಲಿ ಕಣ್ಣಮುಂದೆಯೂ ವಾಹನಗಳು ಸಂಚರಿಸಿದರೂ ಪೊಲೀಸರು ತಡೆಯುವ ಗೋಜಿಗೆ ಹೋಗುತ್ತಿಲ್ಲ.

ಇನ್ನು ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಬರುವ ಜನರು, ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಮನೆಗಳಿಗೆ ತೆರಳುವ ಬದಲು ಗುಂಪಾಗಿ ವಿನಾಕಾರಣ ಚರ್ಚೆಗಳಲ್ಲಿ ತೊಡಗುತ್ತಿದ್ದಾರೆ. ದಿನಸಿ, ತರಕಾರಿ ವ್ಯಾಪಾರಿಗಳು ಎಷ್ಟೇ ಹೇಳಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಬೆಳಗ್ಗೆ ಹೊತ್ತು ದಿನಸಿ, ತರಕಾರಿ, ಹಾಲು, ಮಾಂಸದ ಅಂಗಡಿಗಳ ಎದುರು ಸಂತೆಯ ವಾತಾವರಣ ನಿರ್ಮಾಣವಾಗುತ್ತಿದೆ. ಮಾಸ್ಕ್‌ ಧರಿಸದೆ ಓಡಾಡುವವರ ಸಂಖ್ಯೆ ಹೆಚ್ಚಿದೆ. ಪರಿಸ್ಥಿತಿಯ ಅರಿತು ವರ್ತಿಸಬೇಕಾದ ಜನರು, ಎಂದಿನಂತೆ ಇರಲು ಬಯಸುತ್ತಿದ್ದಾರೆ.

3 ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ತೀವ್ರ: ಚಚ್ಚುಮದ್ದು ಪಡೆದವರಿಗೂ ರೋಗ!

ಇನ್ನು ಯುವಕರು ತಂಡವಾಗಿ ರಸ್ತೆಗಳಲ್ಲಿ ವಿನಾಕಾರಣ ಓಡಾಡುತ್ತಿದ್ದಾರೆ. ಆರಂಭದಲ್ಲಿ ಹೀಗೆ ವಿನಾಕಾರಣ ಓಡಾಡುವವರಿಗೆ ಲಾಠಿ ರುಚಿ ತೋರಿಸಿ ಲಾಕ್‌ ಡೌನ್‌ ಯಶಸ್ವಿ ಮಾಡಿದ್ದ ಪೊಲೀಸರು, ಇದೀಗ ಕೈಚೆಲ್ಲಿ ಕುಳಿತಂತೆ ಕಾಣುತ್ತದೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಜನರು ಲಾಕ್‌ ಡೌನ್‌ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಭಾರೀ ತೊಂದರೆ ಅನುಭವಿಸಬೇಕಾಗುತ್ತದೆ. ಪೊಲೀಸರು ಮೈಚಳಿ ಬಿಟ್ಟು, ಯಾವುದೇ ಮುಲಾಜಿಗೆ ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ.