Asianet Suvarna News Asianet Suvarna News

ಶಬರಿಮಲೆ ಮಹಿಳೆಯರ ಪ್ರವೇಶ: ಅಚ್ಚರಿ ಮೂಡಿಸಿದೆ ಪೇಜಾವರ ಶ್ರೀಗಳ ಹೇಳಿಕೆ!

ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು ಬಿಂದು ಹಾಗೂ ಕನಕದುರ್ಗಾ ಸದ್ಯ ದೇಶದಾದ್ಯಂತ ಸದ್ದು ಮಾಡಿದ್ದಾರೆ. ದೇಗುಲ ಪ್ರವೇಶಿಸಿದ ಬೆನ್ನಲ್ಲೇ ಇವರ ನಡೆಗೆ ಪರ ವಿರೋಧಗಳು ವ್ಯಕ್ತವಾಗಿವೆ. ರಾಜಕೀಯ ನಾಯಕರೂ ಈ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ಹಿರಿಯರಾದ ಪೇಜಾವರ ಶ್ರೀಗಳು ಇಬ್ಬರು ನೀಡಿರುವ ಹೆಳಿಕೆ ಮಾತ್ರ ಅಚ್ಚರಿ ಮೂಡಿಸಿದೆ.

Pejawar shree supports the women who entered sabarimala ayyappa temple
Author
Udupi, First Published Jan 2, 2019, 4:28 PM IST

ಶಬರಿಮಲೆ[ಜ.02]: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ಹೆದರಿದ ಹಲವಾರು ಮಹಿಳೆಯರು ಹಾಗೂ ಹೋರಾಟಗಾರ್ತಿಯರು ದರ್ಶನ ಪಡೆಯಲು ಹೋಗಿ, ಸಾಧ್ಯವಾಗದೆ ಮರಳಿದ್ದರು. ಆದರೀಗ ಯಾವುದೇ ಮುನ್ಸೂಚನೆ ಇಲ್ಲದೆ ಬಿಂದು ಹಾಗೂ ಕನಕದುರ್ಗಾ ಹೆಸರಿನ ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ತೆರೆ ಎಳೆದು ಇತಿಹಾಸ ನಿರ್ಮಿಸಿದ್ದಾರೆ.

ಈ ಮಹಿಳೆಯರ ದೇಗುಲ ಪ್ರವೇಶವು ಅಯ್ಯಪ್ಪ ಭಕ್ತರನ್ನು ಕೆರಳಿಸಿದ್ದು, ಈಗಾಗಲೇ ಕೇರಳದಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ. ಹೀಗಿದ್ದರೂ ಹಿರಿಯರಾದ ಉಡುಪಿ ಶ್ರೀಕೃಷ್ಣ ಮಠದ ಸ್ವಾಮೀಜಿ ಪೇಜಾವರ ಶ್ರೀಗಳು ಸೇರಿದಂತೆ ಹಲವಾರು ಮಂದಿ ಇಬ್ಬರು ಮಹಿಳೆಯದ ದೇಗುಲ ಪ್ರವೇಶವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. 

"

ಮಹಿಳೆಯರ ದೇಗುಲ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂದು ಯಾವುದೇ ಶಾಸ್ತ್ರದಲ್ಲಿ ಹೇಳಿಲ್ಲ. ಎಲ್ಲ ಹಿಂದು ದೇವಸ್ಥಾನಗಳಲ್ಲಿ ಅವಕಾಶ ಇದೆ ಎನ್ನುವುದಾದರೆ ಶಬರಿಮಲೆಯಲ್ಲಿ ಯಾಕೆ ಬೇಡ? ಶಬರಿ‌ಮಲೆ  ಮಹಿಳೆಯರ ಪ್ರವೇಶ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

-ಪೇಜಾವರ ಶ್ರೀಗಳು

ದೇವರನ್ನ ಪೂಜೆ ಮಾಡುವ ಅಧಿಕಾರ ಲಿಂಗ ಬೇಧವಿಲ್ಲದೆ ಎಲ್ಲರಿಗೂ ಅವಕಾಶ ಇದೆ ಅದನ್ನ ಹೊರತಾಗಿ ಕೆಲವು ದೇವಸ್ಥಾನಗಳು ತಮ್ಮದೇ ಆದ ನಿಯಮ ಹೊಂದಿವೆ. ಆದರೆ ಕಾಲ ಕಾಲಕ್ಕೆ ಅಂಥ ನಿಯಮಗಳನ್ನ ಸಡಿಲಿಸಿಕೊಳ್ಳುವ ಅವಶ್ಯಕೆತೆಯಿದೆ ಮಹಿಳೆಯರು ಪ್ರವೇಶ ಮಾಡಿರುವುದನ್ನು ಬಹಳ ದೊಡ್ಡ ಸಮಸ್ಯೆ ಆಗಿ ತೆಗೆದುಕೊಳ್ಳುವ ಅವಶ್ಯಕೆತೆಯಿಲ್ಲ. ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರನ್ನ ಬಿಡುವದು ಒಳ್ಳೆಯದು

-ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ದರಾಮ ಸ್ವಾಮೀಜಿ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರಕಾರ ನಡೆದುಕೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಕೇರಳ ಸರಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲಿನ ಸರಕಾರದ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಇದೊಂದು ಹೆಮ್ಮೆಯ ಕ್ರಮ. ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿದರೆ ಸುಪ್ರಿಂಗೆ ಅಗೌರವ, ಸಂವಿಧಾನಕ್ಕೂ ಅಗೌರವ ತೋರಿಸಿದಂತೆ. ಆದರೆ ಇದೀಗ ಕೇರಳ ಸರಕಾರ ಒಳ್ಳೆಯ ಕೆಲಸ ಮಾಡಿದೆ. ನಾವು ಇಡೀ ಕೇರಳ ಜನತೆಗೆ ಅಭಿನಂದನೆ ಸಲ್ಲಿಸಬೇಕು. ಒಬ್ಬರಿಗೆ ಎಂಟ್ರಿ ಸಿಕ್ಕರೆ ಸಾಕು, ಅದು ಮುಂದುವರೆಯಲಿದೆ. ಮೂಢನಂಬಿಕೆ, ಕೋಮುವಾದ ಆಧುನಿಕ ಮೌಲ್ಯಗಳಲ್ಲ.
-ಚಂದ್ರಶೇಖರ ಪಾಟೀಲ್, ಸಾಹಿತಿ 

ಮತ್ತೊಂದೆಡೆ ಮಹಿಳೆಯರ ಈ ವರ್ತನೆಯನ್ನು ಹಲವಾರು ಮಂದಿ ಖಂಡಿಸಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಹಲವಾರು ನಾಯಕರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮಹಿಳೆಯರ ದೇಗುಲ ಪ್ರವೇಶದಿಂದ ಕೇರಳದಾದ್ಯಂತ ಪರಿಸ್ಥಿತಿ ಹದಗೆಟ್ಟಿದ್ದು, ಇಬ್ಬರ ಮನೆಗೂ ಪೊಲೀಸ್ ಬಿಗಿ ಭದ್ರತೆ ಡಲಾಗಿದೆ.

Follow Us:
Download App:
  • android
  • ios