ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೂ ರಾಜಾತಿಥ್ಯ, ಜೈಲಿನ ಸಾಲು ಸಾಲು ಅಕ್ರಮ ಬಯಲು, ADGP ದಯಾನಂದ್ ಹಾಗೂ ಹೋಮ್ ಗಾರ್ಡ್ ಇಲಾಖೆಯ ಕಾರ್ಯದರ್ಶಿ ಶರತ್ಚಂದ್ರ ನಡುವಿನ ಶೀತಲ ಸಮರವೇ ಈ ಅಕ್ರಮ ಬಯಲು ಮಾಡಿದೆ.

ಬೆಂಗಳೂರು (ನ.08) ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಡುಕರು, ಉಗ್ರರು, ಕಳ್ಳರಿಗೆ ರಾಜಾತಿಥ್ಯ ನೀಡುತ್ತಾರೆ ಅನ್ನೋ ಆರೋಪ ಹೊಸದಲ್ಲ. ಇದಕ್ಕೆ ಸಾಕ್ಷ್ಯಗಳು ಲಭ್ಯವಿದೆ. ಕೋರ್ಟ್ ಕೂಡ ಛೀಮಾರಿ ಹಾಕಿದ ಉದಾಹರಣೆ ಇದೆ. ಪರಪ್ಪನ ಅಗ್ರಹಾರ ಜೈಲು ಹಲವು ಘಟಾನುಘಟಿಗಳು ಶಿಕ್ಷೆ ಅನುಭವಿಸಿದ ಜೈಲು. ಇಲ್ಲಿ ಅಕ್ರಮವೇ ಹೆಚ್ಚು ಅನ್ನೋದು ಮೊದಲಿನಿಂದಲೇ ಕೇಳಿಬರುತ್ತಿರುವ ಕೂಗು. ಇದೀಗ ಪರಪ್ಪನ ಅಗ್ರಹಾರ ಜೈಲಿನ ಸಾಲು ಸಾಲು ಅಕ್ರಮ ಬಯಲಾಗಿದೆ. ಉಗ್ರ ಜುಹಾದ್ ಹಮೀದ್ ಸೇರದಂತೆ ನಟೋರಿಯಸ್ ರೌಡಿಗಳಿಗೂ ರಾಜಾತಿಥ್ಯ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿಖಾನೆ ಸೆರೆಮನೆ ಮತ್ತು ಹೋಮ್ ಗಾರ್ಡ್ ಇಲಾಖೆಯ ಕಾರ್ಯದರ್ಶಿ ಶರತ್ಚಂದ್ರ ಮತ್ತು ADGP ದಯಾನಂದ್ ನಡುವಿನ ಶೀತಲ‌ ಸಮರವೇ ಈ ಅಕ್ರಮ ಬಯಲು ಬರಲು ಕಾರಣ ಎಂದು ಹೇಳಲಾಗುತ್ತಿದೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಇಲಾಖೆ ಎಡಿಜಿಪಿ ದಯಾನಂದ್ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಕ್ರಮಗಳು ಹೊರಬರುತ್ತಿದೆ. ಒಂದೆಡೆ ದಯಾನಂದ್ ಬಂದ ಬಳಿಕ ಜೈಲಿನ ಅಕ್ರಮಗಳು ಹೆಚ್ಚಾಯಿತು ಅನ್ನೋ ಮಾತುಗಳು ಕೇಳಿಬರುತ್ತದೆ. ಮತ್ತೊದೆಡೆ ದಯಾನಂದ್ ಬಂದ ಬಳಿಕ ಅಕ್ರಮ ಬಯಲಿಗೆಳೆಯುತ್ತಿದ್ದಾರೆ ಅನ್ನೋ ಮಾತುಗಳು ಚರ್ಚೆಯಲ್ಲಿದೆ. ಒಟ್ಟಿನಲ್ಲಿ ಜೈಲಿನಲ್ಲಿ ಅಕ್ರಮಗಳು ಖಚಿತ ಅನ್ನೋದು ಬಯಲಾಗಿದೆ.

ಜೈಲಿನ ಕೊಠಡಿಯಲ್ಲಿ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡಿದ್ದ ಗುಬ್ಬಚ್ಚಿ ಸೀನ

ದೊಮ್ಮಸಂದ್ರ ಮುಸರಿ ವೆಂಕಟೇಶ್ ಕೊಲೆ ಆರೋಪಿಯಾಗಿರುವ ಗುಬ್ಬಚ್ಚಿ ಸೀನ ಜೈಲಿನಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ್ದ. ಸಹಚರರ ಜೊತೆ ಸೇರಿ ಜೈಲಿನಲ್ಲಿ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದ. ಕೇಕ್ ಸೇರಿದಂತೆ ಎಲ್ಲಾ ರೀತಿಯ ಪಾರ್ಟಿ ಇಲ್ಲಿತ್ತು. ಶಿಕ್ಷೆ ಅನುಭವಿಸುವ ಅಪರಾಧಿಗಳು, ಆರೋಪಿಗಳಿಗೆ ಈ ರೀತಿಯ ವ್ಯವಸ್ಥೆಗಳು ಹೇಗೆ ಬರುತ್ತಿದೆ ಅನ್ನೋದು ಗೌಪ್ಯವಾಗಿರುವ ಮಾಹಿತಿಯಲ್ಲ.

ನೇರವಾಗಿ ಕ್ರಮ ತೆಗೆದುಕೊಳ್ಳಲು ಜೈಲಿನ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಜೈಲು ಅಧಿಕಾರಿಗಳು ತಮ್ಮ ತಲೆ ಉಳಿಸಿಕೊಳ್ಳಲು ಅಮಾಯಕರ ಮೇಲೆ ವರದಿ ನೀಡುತ್ತಿದ್ದಾರೆ. ಜೈಲಿನ ಸುಪರಿಟೆಂಡೆಂಟ್ ಸುರೇಶ್, ಸುಪರಿಟೆಂಡೆಂಟ್ ಮ್ಯಾಗೇರಿರವರು ವರದಿ ನೀಡುವುದು, ದಕ್ಷಿಣ ವಲಯ ಐಜಿ ದಿವ್ಯಾರವರು ಕಳೆದ ಬಾರಿ ಗುಬ್ಬಚ್ಚಿ ಸೀನನ ಬರ್ತ್ ಡೇ ವಿಡೀಯೋ ಸಂದರ್ಭದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದರು.

ಜೈಲಿನ ಒಳಗಡೆ ಪತ್ನಿ ಜೊತೆ ಸೆಲ್ಫಿ

ಸಜಾ ಬಂಧಿ ಸಾಧಿಕ್ ಅಹ್ಮದ್ ಜೈಲಿನ ಒಳಗಡೆ ಪತ್ನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಇಷ್ಟೇ ಅಲ್ಲ ಜೈಲಿನಿಂದ ಪತ್ನಿಗೆ ವಾಟ್ಸಾಪ್ ಕಾಲ್ ಮಾಡಿದ್ದ ಸಾಧಿಕ್ ವಿಡಿಯೋ ವೈರಲ್ ಆಗಿತ್ತು. ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಅಪರಾಧಿಗಳು, ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಫೋನ್ ಲಭ್ಯವಿಲ್ಲ. ಆದರೂ ಇವರು ರಾಜಾರೋಷವಾಗಿ ವ್ಯಾಟ್ಸಾಪ್ ಕಾಲ್, ಸೆಲ್ಫಿ, ವಿಡಿಯೋ ಮಾಡುತ್ತಿರುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ

ಇದೀಗ ಸೀರಿಯಲ್ ಕಿಲ್ಲರ್ ವಿಕೃತ ಕಾಮಿಗೆ ಸ್ಪೆಷಲ್ ಟ್ರೀಟ್ಮೆಂಟ್ ನೀಡಲಾಗಿದೆ. ಎರಡೆರಡು ಆಂಡ್ರಾಯ್ಡ್ ಮೊಬೈಲ್ ಬಳಕೆ ವಿಡಿಯೋ ವೈರಲ್ ಆಗಿದೆ. ಈತನಿಗೆ ಮನರಂಜನೆಗಾಗಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಇತ್ತ ಅಡುಗೆ ಮಾಡಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗಿದೆ. ರನ್ಯಾರಾವ್ ಪ್ರಿಯಕರ ತರುಣ್ ರಾಜ್ ಅಕ್ರಮ ಚಿನ್ನ ಸಾಗಣೆಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕಿಂಗ್ ಪಿನ್ ತರುಣ್ ರಾಜ್ ಗು ರಾಜಾತಿಥ್ಯ ನೀಡಲಾಗುತ್ತಿದೆ. ಜೈಲಿನ ಕೊಠಡಿಯಲ್ಲಿ ಮೊಬೈಲ್ ಬಳಕೆ ವಿಡಿಯೋ ವೈರಲ್ ಆಗಿದೆ. ತರಣ್ ಗು ಕೂಡ ಆಡುಗೆ ಮಾಡಿಕೊಳ್ಳಲು ಸಕಲ ವ್ಯವಸ್ಥೆ ಮಾಡಿಕೊಡಲಾಗಿದೆ.

ಐಸಿಎಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ

ಐಸಿಎಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಗು ರಾಜಾತಿಥ್ಯ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೋಸ್ಟ್ ವಾಂಟೆಡ್‌ ಉಗ್ರ ಮನ್ನಾ. ಆದರೆ ಈತನಿಗೆ ರಾಜಾತಿಥ್ಯ ಸಿಗುತ್ತಿದೆ. ಈ ಉಗ್ರ ಮುನ್ನ ಭಾರತದಿಂದ ಸಿರಿಯಾ ದೇಶದ ಮುಸ್ಲಿಂ ಯುವಕನನ್ನು ಕಳುಹಿಸುತ್ತಿದ್ದ. ಮೋಸ್ಟ್ ವಾಂಟೆಡ್‌ ಉಗ್ರನಿಗು ಆಂಡ್ರಾಯ್ಡ್ ಮೊಬೈಲ್ ವ್ಯವಸ್ಥೆ ಮಾಡಿಕೊಡಲಾಗಿದೆ.