Asianet Suvarna News Asianet Suvarna News

ಸಾರಿಗೆ ವಾಹನಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ: ಸಂಪುಟ ನಿರ್ಧಾರ

  • ಸಾರಿಗೆ ವಾಹನಗಳಿಗೆ ಟ್ರ್ಯಾಕಿಂಗ್‌ ಸಿಸ್ಟಂ ಕಡ್ಡಾಯ
  • ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌, ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಸಂಪುಟ ನಿರ್ಧಾರ
  • ಖಾಸಗಿ, ಸರ್ಕಾರಿ ಸಾರಿಗೆ ವಾಹನಗಳಿಗೆ ಅನ್ವಯ
Panic button is mandatory in transport vehicles bengaluru state rav
Author
First Published Nov 4, 2022, 3:21 AM IST

ಬೆಂಗಳೂರು (ನ.4) : ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಖಾಸಗಿ ಮತ್ತು ಸರ್ಕಾರಿ ಸಾರಿಗೆ ವಾಹನಗಳ ಮೇಲೆ ನಿಗಾವಹಿಸುವ ಸಂಬಂಧ ಕಡ್ಡಾಯವಾಗಿ ಸ್ಥಳ ಪತ್ತೆ ಹಚ್ಚುವ ಸಾಧನ ಮತ್ತು ತುರ್ತು ದಿಗಿಲು ಗುಂಡಿ (ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌) ಅಳವಡಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಾರಿಗೆ ಬಸ್‌ಗಳಲ್ಲಿ ಚಾಲಕ ಸಾಕು, ಪ್ರತ್ಯೇಕ ಕಂಡಕ್ಟರ್‌ ಬೇಡ: ಶಿಫಾರಸು

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಥಳ ಪತ್ತೆ ಹಚ್ಚುವ ಸಾಧನ ಮತ್ತು ತುರ್ತು ದಿಗಿಲು ಗುಂಡಿ ಅವಳಡಿಕೆ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 21.22 ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40ರ ಅನುಪಾತದಲ್ಲಿ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರ ಯೋಜನಾ ಸಮಾಲೋಚಕರನ್ನು ಕೇಂದ್ರದ ವತಿಯಿಂದ ನೀಡಲಾಗುತ್ತಿದೆ. ಈ ಸಂಬಂಧ ಸಾರಿಗೆ ಇಲಾಖೆಯ ಆಯುಕ್ತರ ಖಾತೆಗೆ 5.97 ಕೋಟಿ ರು. ಹಣವನ್ನು ಕೇಂದ್ರವು ನೀಡಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುವುದನ್ನು ನಿಯಂತ್ರಿಸಲು ಈ ಯೋಜನೆಯು ಸಹಕಾರಿಯಾಗಲಿದೆ. ಅಲ್ಲದೆ, ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆಯೇ, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲಾಗುತ್ತಿದೆಯೇ ಎಂಬುದೂ ಸೇರಿದಂತೆ ಸಮಾಜಘಾತುಕ ಶಕ್ತಿಗಳಿಂದ ರಕ್ಷಿಸಲು ಸ್ಥಳವನ್ನು ಪತ್ತೆಹಚ್ಚಲು ಉಪಯೋಗವಾಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಕ್ಷೇತ್ರದ ಸಾರ್ವಜನಿಕ ಸಾರಿಗೆ ವಾಹನಗಳು ಮತ್ತು ಪ್ರವಾಸಿ ವಾಹನಗಳಲ್ಲಿ ಕಡ್ಡಾಯವಾಗಿ ಈ ಸಾಧನ ಅವಳಡಿಕೆ ಮಾಡುವುದರಿಂದ ವಾಹನಗಳ ವೇಳಾಪಟ್ಟಿಗನುಗುಣವಾಗಿ ಸಂಚಾರ ಮತ್ತು ಚಲನವನದ ಮೇಲೆ ನಿಗಾ ಇಡಬಹುದು. ಇದರಿಂದ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಬಹುದು. ಸಾರಿಗೆ ಇಲಾಖೆಯು ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ನಿಗದಿತ ಸ್ಥಳದಿಂದ ಎಲ್ಲವನ್ನು ಗಮನಿಸಬಹುದು ಎಂದು ಸಚಿವರು ಹೇಳಿದರು.

Bus Ticket Fare: ಸಾರಿಗೆ ಬಸ್‌ ದರ ಹೆಚ್ಚಳವಿಲ್ಲ : ಸಚಿವ ಶ್ರೀರಾಮುಲು

ಯಾವ್ಯಾವ ವಾಹನಗಳಿಗೆ ಟ್ರ್ಯಾಕಿಂಗ್‌ ಸಿಸ್ಟಂ ಕಡ್ಡಾಯ?

ರಾಜ್ಯದಲ್ಲಿ ಒಟ್ಟು ಸೇವಾ ವಾಹನಗಳು 6,08,717 ಇದ್ದು, ಈ ಪೈಕಿ ಟ್ಯಾಕ್ಸಿ, ಮತ್ತು ಮ್ಯಾಕ್ಸಿ ಕ್ಯಾಬ್‌ಗಳು 4,51,520 ಇವೆ. ಶಾಲಾ ವಾಹನಗಳು 16432, ಖಾಸಗಿ ವಾಹನಗಳು 23077, ಕೆಎಸ್‌ಆರ್‌ಟಿಸಿ ವಾಹನಗಳು 34701, ಒಪ್ಪಂದ ವಾಹನಗಳು 5138, ಪ್ರವಾಸಿ ವಾಹನಗಳು 1900, ಸರಕು ಸಾಗಾಣಿಕೆ ವಾಹನಗಳು 85,949 ಇವೆ. ಇವೆಲ್ಲವುಗಳಿಗೂ ಟ್ರ್ಯಾಕಿಂಗ್‌ ಸಿಸ್ಟಂ ಅಳವಡಿಸಲಾಗುತ್ತದೆ.

Follow Us:
Download App:
  • android
  • ios