ಪಂಚಮಸಾಲಿ ಸಮುದಾಯಕ್ಕೆ 2ಎ ಸರಿಸಮಾನ ಮೀಸಲಾತಿಗೆ ಆಗ್ರಹ.  ಜ.13ರಂದು ಶಿಗ್ಗಾಂವಿಯ ಸಿಎಂ ಮನೆ ಎದುರು ಧರಣಿಗೆ ಜಯಮೃತ್ಯುಂಜಯ ಶ್ರೀ ನಿರ್ಧಾರ. ಹೋರಾಟಕ್ಕೆ ಅನ್ಯಾಯ ಮಾಡಿದವರನ್ನು ಸಮಾಜ ದೂರ ಇಡುತ್ತೆ ಎಂದು ಸ್ವಾಮೀಜಿ ಎಚ್ಚರಿಕೆ.

ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಜ.7): ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗದಡಿ ಮೀಸಲಾತಿ ನೀಡುವ ಸಂಪುಟ ಸಭೆ ನಿರ್ಣಯವನ್ನು ಪಂಚಮಸಾಲಿ ಸಮುದಾಯ ತಿರಸ್ಕರಿಸಿದೆ. ಜನವರಿ 12ರೊಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಂಬಂಧ ಗೆಜೆಟ್ ನೋಟಿಫಿಕೇಷನ್ ಹೊರಡಿಸದಿದ್ರೆ ಶಿಗ್ಗಾಂವಿಯ ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸಲು ಬಸವ ಜಯಮೃತ್ಯುಂಜಯ ಸ್ವಾಮೀಜಿ ನಿರ್ಧರಿಸಿದ್ದಾರೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, 'ಡಿಸೆಂಬರ್ 29ರ ಸಂಪುಟ ಸಭೆಯ ನಿರ್ಣಯ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ಮಾಡಿದ್ದೇವೆ. ಎಲ್ಲರ ಸಲಹೆ ಪಡೆದು ಆಲೋಚಿಸಿ ಸಂಪುಟ ಸಭೆ ನಿರ್ಣಯ ತಿರಸ್ಕಾರಕ್ಕೆ ತೀರ್ಮಾನ ಮಾಡಿದ್ದೇವೆ. ಡಿಸೆಂಬರ್ 29ರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ಅಸ್ಪಷ್ಟವಾಗಿದೆ. ಎಲ್ಲಿಯೂ ಸಹ ಈ ವಿಚಾರ ಬಗ್ಗೆ ಯಾರಿಂದಲೂ ಸಹಮತ ವ್ಯಕ್ತವಾಗಿಲ್ಲ. ಇಡೀ ಸಮಾಜದಲ್ಲಿ ಗೊಂದಲ ಸೃಷ್ಟಿಯಾದ ಹಿನ್ನೆಲೆ ತಿರಸ್ಕಾರ ಮಾಡಿದ್ದು ಜನವರಿ 12ರೊಳಗೆ ಸಿಎಂ ಮೀಸಲಾತಿ ಸಂಬಂಧ ಗೆಜೆಟ್ ನೋಟಿಫಿಕೇಷನ್‌ ಹೊರಡಿಸಬೇಕು. ಪಂಚಮಸಾಲಿ ಮೀಸಲಾತಿ ಸಂಬಂಧ ತಮ್ಮ ನಿಲುವು ಕೈಗೊಳ್ಳಬೇಕು. ಸರ್ಕಾರ ಅಧಿಸೂಚನೆ ಹೊರಡಿಸದೇ ಹೋದ್ರೆ ಜ‌ನವರಿ 13ರಂದು ಶಿಗ್ಗಾಂವಿಯ ಸಿಎಂ ಮನೆ ಎದುರು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

 24 ಗಂಟೆಯೊಳಗೆ ಮೀಸಲಾತಿ ಕೊಡ್ತಿರೋ ಕೊಡಲ್ವೋ ಎಂಬುದನ್ನು ಸ್ಪಷ್ಟಪಡಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದರು. ಕಾನೂನು ಚೌಕಟ್ಟಿನಲ್ಲಿ ಕೊಡ್ತೀನಿ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಎಂದಿನ ಮಾತು ಮುಂದುವರಿಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಸಿಎಂ ಏನು ಮಾತನಾಡಿದಾರೆ ಗೊತ್ತಿಲ್ಲ. ನನಗೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಕೇಳಿದ್ರೆ ಸ್ಪಷ್ಟತೆ ಬರಲು ಸಾಧ್ಯ. 2D ಮೀಸಲಾತಿ ಅಥವಾ 2ಎ ಮೀಸಲಾತಿ ಬಗ್ಗೆ ಅಧಿಸೂಚನೆ ಹೊರಡಿಸಲು ಗಡುವು‌ ನೀಡಿದ್ದೇವೆ. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 2ಎಗೆ ಸರಿಸಮಾನಾದ ಮೀಸಲಾತಿಗೆ ಆಗ್ರಹಿಸಿದ್ದೇವೆ. ಸರ್ಕಾರ ಹಾಗೂ ಮೀಸಲಾತಿ ಹೋರಾಟ ಸಮಿತಿ ನಡುವೆ ಸಂಧಾನಕಾರರಾಗಿ ಸಿ.ಸಿ.ಪಾಟೀಲ್ ಇದ್ದಾರೆ‌. ಅವರೂ ಸಹ ಸಿಎಂ ಜೊತೆ ಎಲ್ಲಾ ಹೋರಾಟಗಾರರ ಜೊತೆ ಚರ್ಚಿಸುವುದಾಗಿ ಸಕಾರಾತ್ಮಕ ಮಾತು ಆಡಿದ್ದಾರೆ.

ಸಚಿವ ಸಿ.ಸಿ.ಪಾಟೀಲ್ ಸಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಮ್ಮ ಸಮುದಾಯದ ಶಾಸಕರು ಸರ್ಕಾರದ ಚೌಕಟ್ಟಿನಲ್ಲಿ ಯಾವ ರೀತಿ ಒತ್ತಡ ತರಬೇಕು ಯೋಚಿಸಬೇಕು‌. ಅವರು ಸಚಿವ ಸಿ‌.ಸಿ‌‌‌.ಪಾಟೀಲ್‌ರವರ ಮಾರ್ಗ ಅನುಸರಿಸಬೇಕು ಎಂದು ನಮ್ಮ ಸಮುದಾಯದ ಎಲ್ಲ ಜನರಿಗೆ ಇದನ್ನ ಹೇಳಲು ಬಯಸುವೆ. ಸಿ.ಸಿ.ಪಾಟೀಲ್ ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಸಂಬಂಧ ಸ್ಪಷ್ಟತೆ ಕೊಡುವ ಕೆಲಸ ಸರ್ಕಾರ ಮಾಡಬೇಕಿತ್ತು.ಸಿಎಂ ಯಾವ ರೀತಿ ಅಧಿಸೂಚನೆ ಹೊರಡಿಸುತ್ತಾರೆ ಕಾದು ನೋಡಬೇಕು‌.‌ಸಿಎಂ ಮೇಲೆ ಒತ್ತಡ ತರಲು ಒಂದು ದಿನ ಸಾಂಕೇತಿಕ ಹೋರಾಟಕ್ಕೆ ತೀರ್ಮಾನ ಮಾಡಿದ್ದೆವೆ' ಎಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಪ್ರವಾಸ:
ಇನ್ನು ಹರಿಹರ ಪಂಚಮಸಾಲಿ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌.ಪಿ.ನಡ್ಡಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, 'ರಾಷ್ಟ್ರೀಯ ಅಧ್ಯಕ್ಷರಾಗಿ ಜೆ‌.ಪಿ.ನಡ್ಡಾ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಆಯಾ ಜಿಲ್ಲೆಗಳ ಮಠಕ್ಕೆ ಹೋಗೋದು ಸಹಜ ಹಾಗೇ ಅಲ್ಲಿ ಹೋಗಿದ್ದಾರೆ. ಬಾಗಲಕೋಟ ಜಿಲ್ಲೆಗೆ ಬಂದಾಗ ನಮ್ಮ ಮಠಕ್ಕೂ ಭೇಟಿ ನೀಡ್ತಾರೆ. ಮಠಗಳಿಗೆ ರಾಜಕಾರಣಿಗಳು ಬರೋದ್ರಿಂದನೇ ಸಮಾಜಕ್ಕೆ ಒಳ್ಳೆಯದಾಗೋದು ಆಗಿದ್ರೆ ಎಲ್ಲರೂ ಬಂದು ಹೋಗ್ತಾರಲ್ಲ‌. ಮಠಗಳಿಗೆ ಬರೋದ್ರಿಂದ ಸಮಾಜಕ್ಕೆ ಸಂಪೂರ್ಣವಾಗಿ ಒಳಿತಾಗಲ್ಲ. ಮಠಗಳಿಗೆ ಬಂದು ಆಶೀರ್ವಾದ ಪಡೆಯೋದು ಅವರ ಸಂಸ್ಕೃತಿ. ರಾಜಕಾರಣಿಗಳು ಮಠಗಳಿಗೆ ಬರೋದಿಂದರೇನೆ ಸಮಾಜಕ್ಕೆ ಒಳಿತಾಗಬೇಕು ಅಂತಾ ಬಯಸಲ್ಲ. ಸರ್ಕಾರದಿಂದ ನಮ್ಮ ಮಕ್ಕಳಿಗೆ ನ್ಯಾಯ ಸಿಕ್ಕರೆ ಸಮಾಜಕ್ಕೆ ಒಳಿತಾಗುತ್ತೆ' ಎಂದು ತಿಳಿಸಿದ್ದಾರೆ.

ಹೊಸದಾಗಿ ಶಾಸಕರಾದವರಿಗೆ ತಳ ಬುಡ ಗೊತ್ತಿರಲ್ಲ:
ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ವಿಚಾರವಾಗಿ ಸಿಎಂ ವಿರುದ್ಧ ಬಸವ ಜಯಮೃತ್ಯುಂಜಯ ಸ್ಚಾಮೀಜಿ ವಿರುದ್ಧ ರಾಣೆಬೆನ್ನೂರು ಶಾಸಕ ಅರುಣಕುಮಾರ್ ಅಸಮಾಧಾನ ಕುರಿತು ಮಾತನಾಡಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, 'ಸಿಎಂ ತವರು ಜಿಲ್ಲೆಯವರು ಅಂತಾ ಅನಿವಾರ್ಯವಾಗಿ ಮಾತನಾಡಿರಬಹುದು. ಶಾಸಕ ಅರುಣ್‌ಕುಮಾರ್ ಕರೆಯಿಸಿ ನಾನು ಮಾತನಾಡುತ್ತೇನೆ. ಮೀಸಲಾತಿ ಹೋರಾಟದಲ್ಲಿ ಯಾರೂ ಸಕ್ರಿಯವಾಗಿ ಭಾಗವಹಿಸುತ್ತಾರೆ, ಯಾರಿಗೆ ಕಷ್ಟ ಸುಖ ಗೊತ್ತಿದೆ ಅಂತವರಿಗೆ ಹೆಚ್ಚಿನ ಮಾಹಿತಿ ಗೊತ್ತಿರುತ್ತೆ‌. ಹೊಸದಾಗಿ ಶಾಸಕರಾದವರಿಗೆ ತಳ ಬುಡ ಗೊತ್ತಿರಲ್ಲ ಹೀಗಾಗಿ ಮಾತನಾಡ್ತಾರೆ. ಸಮಾಜದ ಪರ ಗಟ್ಟಿಯಾಗಿ ನಿಲ್ಲಲು ಅವರಿಗೆ ಕಿವಿಮಾತು ಹೇಳುವೆ. ಸಿಎಂ ಮನೆ ಎದುರು ಪ್ರತಿಭಟಿಸಿದ್ರೆ ಶ್ರೀಗಳ ವಿರುದ್ಧ ಪ್ರತಿಭಟಿಸುವುದಾಗಿ ಶಾಸಕ ಅರುಣ್ ಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಗಳು, 'ಪ್ರತಿಭಟನೆ ಮಾಡಲಿ ತಪ್ಪೇನಿಲ್ಲ.ನಾವು ಸಮಾಜಕ್ಕೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡ್ತಿದೀವಿ. ಅವರು ಸಮಾಜದ ವಿರುದ್ಧ ಹೋರಾಟ ಮಾಡ್ತೀವಿ ಅಂದ್ರೆ ಅದನ್ನೂ ಸ್ವಾಗತ ಮಾಡ್ತೀವಿ' ಎಂದಿದ್ದಾರೆ‌.

'ಕೆಲವು ಧರ್ಮಗುರುಗಳಲ್ಲಿ ಈ ಅಸೂಯೆ ಕಾಡುತ್ತಿರೋದು ಸಹಜ':
ಇನ್ನು ಪಂಚಮಸಾಲಿ ಮೀಸಲಾತಿಗೆ ಕೆಲ ಸ್ವಾಮೀಜಿಗಳ ಪರೋಕ್ಷ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 'ಎಲ್ಲರಿಗೂ ಹೊಟ್ಟೆಕಿಚ್ಚು ಇದ್ದೇ ಇರುತ್ತೆ. ನಾನು ಪ್ರಬಲ ಸ್ವಾಮೀಜಿ ಆಗಬೇಕೆಂಬ ಆಕಾಂಕ್ಷೆ ಇಟ್ಟು ಹೋರಾಟ ಮಾಡುತ್ತಿಲ್ಲ. ನಾನು ಈ ಸಮಾಜದಲ್ಲಿ ಹುಟ್ಟಿದ್ದೇನೆ. ಸಮಾಜದ ಋಣ ತೀರಿಸಬೇಕೆಂದು ಹೋರಾಟ ಮಾಡುತ್ತಿದ್ದೇನೆ. ನನಗೆ ಬೇಡಿ ಅಭ್ಯಾಸ ಇಲ್ಲ, ನನಗೆ ಬೇಡೋಕು ಬರಲ್ಲ. ದೇವರು ಕೊಟ್ಟ ಶಕ್ತಿ, ಹೋರಾಟ ಗುಣದಿಂದ ಸಮಾಜಕ್ಕೆ ಒಳ್ಳೆಯದಾಗಲಿ ಅಂತಾ ಹೋರಾಟ ಮಾಡುತ್ತಿರುವೆ. ಪ್ರಬಲ ಆಗೋದು, ದುರ್ಬಲ ಆಗೋದು ಭಗವಂತ ಬಳಿ ಇರುವಂತದ್ದು' ಎಂದಿದ್ದಾರೆ.

2ಡಿ ಮೀಸಲು ತಿರಸ್ಕರಿಸಿದ ಪಂಚಮಸಾಲಿಗಳು, 2ಎಗೆ ಪಟ್ಟು: ಸರ್ಕಾರಕ್ಕೆ 24 ಗಂಟೆಗಳ ಗಡುವು

ನೀವು ಪ್ರಬಲ ಆಗ್ತೀರಿ ಅಂತಾ ಕೆಲ ಸ್ವಾಮೀಜಿಗಳಿಗೆ ಭಯ ಕಾಡ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 'ಎಲ್ಲರಿಗೂ ಆ ಭಯ ಕಾಡುತ್ತಿದೆ.ಎಲ್ಲರಿಗೂ ಏನಾಗಿದೆ ಅಂದ್ರೆ ಇಷ್ಟು ದಿನ ಪಂಚಮಸಾಲಿ ಸಮಾಜಕ್ಕೆ ಚೆನ್ನಾಗಿ ಶೋಷಣೆ ಮಾಡ್ತಾ ಬಂದಿದ್ವಿ. ಈ ಜನಕ್ಕೆ ಪೂಜೆ, ಧರ್ಮ, ಪ್ರವಚನ, ಉತ್ಸವ ಮೂಲಕ ಈ ಜನಾಂಗ ಶೋಷಣೆ ಮಾಡ್ತಾ ಬಂದ್ವಿ. ಏನಪ್ಪ ಪಂಚಮಸಾಲಿ ಶ್ರೀಗಳು ಬಂದು ಜನರ ಜಾಗೃತಿ ಉಂಟು ಮಾಡಿದ್ರು.‌ಈ ಜನ ಮತ್ತೆ ಜಾಗೃತಿ ಆದ್ರು, ಬುದ್ದಿವಂತರಾದ್ರು, ಪ್ರಶ್ನೆ ಮಾಡಲು ಶುರುಮಾಡಿದ್ರು ಅಂತಾ ಕೆಲವು ಧರ್ಮಗುರುಗಳಲ್ಲಿ ಈ ಅಸೂಯೆ ಕಾಡುತ್ತಿರೋದು ಸಹಜ. ನಮ್ಮನ್ನ ಅಂಧಕಾರ, ಅಜ್ಞಾನದಲ್ಲಿ ಶತಮಾನಗಳ ಕಾಲ ಶೋಷಣೆಗೆ ಒಳಪಡಿಸಿದರು‌.

ಮೀಸಲಾತಿ ಒದಗಿಸಲು ಸಿಎಂ ದೃಢ ಹೆಜ್ಜೆ: ಕೇಂದ್ರ ಸಚಿವ ಜೋಶಿ

ಈ ಸಮಾಜ ಅದರಿಂದ ಹೊರಬಂದಿದ್ದು ಕೆಲವರಿಗೆ ಕಾಡ್ತಿದೆ. ಶೇಕಡ 90ರಷ್ಟು ಮಠಾಧೀಶರು ನಮ್ಮ ಪರ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ. ಇನ್ನು ಕೆಲವರದ್ದು ಸಹಜವಾಗಿ ಬಸವಣ್ಣನವರ ಕಾಲದಿಂದ ಇದ್ದೇ ಇದೆ. ಸುಧಾರಣೆ ಬಯಸುವ ಸಂದರ್ಭದಲ್ಲಿ ಅಸೂಯೆಗೊಳ್ಳುವುದು ಸಹಜ. ಯಾವತ್ತೂ ಈ ಜನ ಹಿಂಬಾಲಕರಾಗಿಬೇಕು, ಧಾರ್ಮಿಕ ಗುಲಾಮರಾಗಬೇಕು ಅಂತಾ ಅವರು ಬಯಸುತ್ತಾರೆ. ಈ ಜನಾಂಗದವರು ನಾಯಕರಾಗಿ ಬೆಳೆಯಬಾರದು ಅಂತಾ ಇದ್ದೇ ಇರುತ್ತೆ‌. ನಾವು ಮಾಡುವ ಒಳ್ಳೆಯ ಕಾರ್ಯ ಮೇಲೆ ಅದು ಅವಲಂಬಿತ ಆಗುತ್ತೆ' ಎಂದು ತಿಳಿಸಿದ್ದಾರೆ.