Asianet Suvarna News Asianet Suvarna News

ಅಧಿವೇಶನದಲ್ಲೂ ಪಂಚಮಸಾಲಿ ಹೋರಾಟ

ಸರ್ಕಾರದ ಜತೆ ಮಾತುಕತೆ ನಡೆಸಲು ಹಿರಿಯರ ಸಲಹಾ ಸಮಿತಿ| ಮಾ.4ರಂದು ಸಿಎಂ ಮೀಸಲು ಘೋಷಿಸಿದರೆ ಧರಣಿ ವಾಪಸ್‌| ಹಾರಿಕೆ ಉತ್ತರ ನೀಡಿದರೆ ಮುಂದಿನ ಹೋರಾಟ ಬಗ್ಗೆ ನಿರ್ಧಾರ| ಪಂಚಮಸಾಲಿ ಮುಖಂಡರ ದುಂಡು ಮೇಜಿನ ಸಭೆ ತೀರ್ಮಾನ| 

Panchamasali Reservation Struggle Continue in Session grg
Author
Bengaluru, First Published Feb 26, 2021, 9:03 AM IST

ಬೆಂಗಳೂರು(ಫೆ.26): ಪ್ರವರ್ಗ 2ಎ’ ಮೀಸಲಾತಿಗಾಗಿ ನಡೆಸಿರುವ ಧರಣಿ ಕೈಬಿಟ್ಟು ಮಾತುಕತೆಗೆ ಬರುವಂತೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲು ಸಮುದಾಯದ ಹಿರಿಯರ ಸಲಹಾ ಸಮಿತಿ ರಚಿಸಲು ಪಂಚಮಸಾಲಿ ಸಮುದಾಯದ ಮುಖಂಡರ ದುಂಡು ಮೇಜಿನ ಸಭೆ ನಿರ್ಧರಿಸಿದೆ. ಅಲ್ಲದೆ, ಮಾ. 4 ರಿಂದ ಆರಂಭವಾಗುವ ಅಧಿವೇಶನದಲ್ಲಿ ತಮ್ಮ ಸಮುದಾಯದ ಶಾಸಕರ ಮೂಲಕ ಧ್ವನಿಯೆತ್ತಲು ಸಭೆ ತೀರ್ಮಾನಿಸಿದೆ.

ಸಭೆಯ ನಂತರ ಸುದ್ದಿಗಾರರಿಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಈ ವಿಷಯ ತಿಳಿಸಿದರು. ಸಮುದಾಯದ ಹಿರಿಯರ ಸಲಹಾ ಸಮಿತಿಯ ಮೂಲಕ ಸರ್ಕಾರದೊಂದಿಗೆ ಮಾತುಕತೆ ನಡೆಸುವುದು. ಮಾ.4ರ ಸಂಜೆ 4 ಗಂಟೆಯೊಳಗೆ ಮುಖ್ಯಮಂತ್ರಿ ಅವರು ಅಧಿವೇಶನದಲ್ಲೇ ಪಂಚಮಸಾಲಿಗೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಸ್ಪಷ್ಟ ಭರವಸೆ ನೀಡುವಂತೆ ಬೇಡಿಕೆ ಇಡುವುದು. ಸರ್ಕಾರ ಭರವಸೆ ನೀಡಿದರೆ ಧರಣಿ ಕೈಬಿಡುವುದು. ಹಾರಿಕೆಯ ಉತ್ತರ ನೀಡಿದರೆ ಮತ್ತೆ ಸಲಹಾ ಸಮಿತಿ ಸಭೆ ನಡೆಸಿ ಧರಣಿ ಸತ್ಯಾಗ್ರಹ ಮುಂದುವರೆಸುವುದೋ ಅಥವಾ ಉಪವಾಸ ಸತ್ಯಾಗ್ರಹ ಆರಂಭಿಸುವುದೋ ಎಂಬುದನ್ನು ನಿರ್ಧರಿಸೋಣ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

2A ಮೀಸಲಾತಿಗೆ ಪಂಚಮಸಾಲಿ ಬಿಗಿಪಟ್ಟು, ರಾಜ್ಯ ಸರ್ಕಾರಕ್ಕೆ ಡೆಡ್‌ ಲೈನ್

ಯಶಸ್ವಿ ಪಾದಯಾತ್ರೆ ಬಳಿಕ ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಇದುವರೆಗೂ ಎಲ್ಲವೂ ಸಮುದಾಯದ ನಿರ್ಧಾರದಂತೆ ನಡೆದಿದೆ. ಅದರಂತೆ ಮುಂದಿನ ಹೋರಾಟದ ಬಗ್ಗೆಯೂ ಸಮುದಾಯದ ಮುಖಂಡರ ಸಭೆ ನಡೆಸಲಾಯಿತು. ದುಂಡುಮೇಜಿನ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಸದನದಲ್ಲಿ ದನಿ ಎತ್ತಲು ಶಾಸಕರಿಗೆ ಪತ್ರ:

ಮಾ.4ರಿಂದ ಆರಂಭವಾಗುವ ಬಜೆಟ್‌ ಅಧಿವೇಶನದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಒಕ್ಕೊರಲಿನಿಂದ ದನಿ ಎತ್ತಲು ಸಮುದಾಯದ ಎಲ್ಲಾ ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುತ್ತೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ತಿಳಿಸಿದರು.

ಉಪವಾಸ ಸತ್ಯಾಗ್ರಹ ಬೇಡ ಸಲಹೆ:

ಈ ಮಧ್ಯೆ, ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸದ್ಯಕ್ಕೆ ಉಪವಾಸ ಸತ್ಯಾಗ್ರಹ ನಿರ್ಧಾರ ಕೈಬಿಟ್ಟು ಮಾ.4ರ ನಂತರ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸ್ವಾಮೀಜಿ ಅವರಿಗೆ ಕೆಲ ಮುಖಂಡರು ಸಲಹೆ ನೀಡಿದರು. ಇದಕ್ಕೆ ಶ್ರೀಗಳು ಸರ್ಕಾರದ ಭರವಸೆ ನೋಡಿಕೊಂಡು ನಿರ್ಧರಿಸೋಣ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಸಚಿವರಾದ ಮುರುಗೇಶ ನಿರಾಣಿ ಮತ್ತು ಸಿ.ಸಿ. ಪಾಟೀಲ್‌ ಅವರು ತಮ್ಮ ವಿರುದ್ಧ ಆಡಿರುವ ಮಾತುಗಳಿಗೆ ಸಭೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ನನ್ನ ಸಮಾಜಕ್ಕಾಗಿ ನಾನು ನಡೆಸಿದ ಹೋರಾಟದ ಬಗ್ಗೆ ನಮ್ಮ ಸಮುದಾಯದ ಸಚಿವರೇ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಆದರೆ, ಅವರು ಹೇಳಿದಂತೆ ನಾನು ಯಾರ ಕಪಿಮುಷ್ಟಿಯಲ್ಲೂ ಇಲ್ಲ. ನನ್ನ ದೃಷ್ಟಿಯಲ್ಲಿ ಇಡೀ ಸಮಾಜದ ಎಲ್ಲ ಮುಖಂಡರೂ ಸಮಾನರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೆಂಬುದು ನ್ಯಾಯಯುತ ಬೇಡಿಕೆ. ಇದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌, ಶಾಸಕರಾದ ಅರವಿಂದ ಬೆಲ್ಲದ, ಸಿದ್ದು ಸವದಿ, ವಕೀಲ ಶಿವಲಿಂಗಪ್ಪ, ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರು, ಮಾಜಿ ಸಚಿವ ಶಶಿಕಾಂತ್‌ ನಾಯಕ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
 

Follow Us:
Download App:
  • android
  • ios