Asianet Suvarna News Asianet Suvarna News

ಪಾಕಿಸ್ತಾನ ಜಿಂದಾಬಾದ್‌ ಪೋಸ್ಟ್‌: ಆರೋಪಿ ಮೇಲಿನ ಕ್ರಿಮಿನಲ್‌ ಕೇಸ್‌ ರದ್ದು ಮಾಡಿದ ಹೈಕೋರ್ಟ್‌

ಸೆಕ್ಷನ್ 505 ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗೆ ಅಪರಾಧದ ಕೇಸ್‌ ಬಗ್ಗೆ ವಿವರ ನೀಡುವ ಮೊದಲು ಅಂತಹ ಪೂರ್ವ ಮಂಜೂರಾತಿ ಅಗತ್ಯ ಎಂದು ನ್ಯಾಯಾಲಯವು ಹೇಳಿದೆ.

pakistan zindabad facebook post karnataka high court quashes criminal case against man over procedural irregularities ash
Author
First Published Jan 28, 2023, 2:55 PM IST

ಬೆಂಗಳೂರು (ಜನವರಿ 28, 2023): ಪಾಕಿಸ್ತಾನ ಜಿಂದಾಬಾದ್‌ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಪ್ರಕರಣದ ದಾಖಲಾತಿಯಲ್ಲಿ ಕಾರ್ಯವಿಧಾನದ ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಆದೇಶ ಹೊರಡಿಸಿದ್ದಾರೆ. 

"ಹರ್ ದಿಲ್ ಕಿ ಆವಾಜ್ ಪಾಕಿಸ್ತಾನ್ ಜಿಂದಾಬಾದ್" ಎಂಬ ಪದಗಳನ್ನು ಹೊಂದಿರುವ ಫೇಸ್‌ಬುಕ್ ಪೋಸ್ಟ್‌ಗೆ  (Facebook Post) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ (Karnataka High Court) ಈ ತೀರ್ಪು ನೀಡಿದೆ. ಅರ್ಜಿದಾರರಾದ ಕೆ.ಎಂ.ಬಾಷಾ ಅವರು ಫೇಸ್‌ಬುಕ್‌ನಲ್ಲಿ (Facebook) ಪಾಕಿಸ್ತಾನಿ ಸೈನಿಕನೊಬ್ಬ (Pakistan Soldier) ಮಹಿಳೆಯೊಂದಿಗೆ ಮಾತನಾಡುತ್ತಿರುವಂತೆ ಮತ್ತು "ಹರ್ ದಿಲ್ ಕಿ ಆವಾಜ್ ಪಾಕಿಸ್ತಾನ್ ಜಿಂದಾಬಾದ್" ಎಂಬ ಪದಗಳನ್ನು ಹೊಂದಿರುವ ಸಂದೇಶವನ್ನು (Message) ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ನಂತರ, ಅವರು ಈ ಪೋಸ್ಟ್ ಅನ್ನು ಒಂದು ದಿನದ ನಂತರ ಡಿಲೀಟ್‌ ಮಾಡಿದ್ದಾರೆ.

ಇದನ್ನು ಓದಿ: 'ದೇಶದ್ರೋಹಿ ಅಮೂಲ್ಯ ಎನ್‌ಕೌಂಟರ್ ಮಾಡಿದ್ರೆ 10 ಲಕ್ಷ ಬಹುಮಾನ'

ಆದರೆ, ಇಂತಹ ಸಂದೇಶಗಳನ್ನು ಹಂಚಿಕೊಳ್ಳುವುದು ಭಾರತೀಯ ಸೈನಿಕರನ್ನು (Indian Army) ಅವಮಾನಿಸುತ್ತದೆ, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ ಮತ್ತು ಸಮಾಜದ ಶಾಂತಿಯನ್ನು ಕದಡುತ್ತದೆ ಎಂಬ ಕಾರಣಕ್ಕಾಗಿ ಸಾರ್ವಜನಿಕ ಕಿಡಿಗೇಡಿತನದ ಬಗ್ಗೆ ವ್ಯವಹರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 ಅನ್ನು ಉಲ್ಲೇಖಿಸಿ ಪೊಲೀಸರು ಫೇಸ್‌ಬುಕ್‌ ಪೋಸ್ಟ್‌ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಹಾಗೂ, ಮ್ಯಾಜಿಸ್ಟ್ರೇಟ್ ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್‌ಗೆ ಪ್ರಕರಣದ ಬಗ್ಗೆ ತಿಳಿಸುವ ಮೊದಲು ಅಪರಾಧ ಪ್ರಕ್ರಿಯೆ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 196 ಅಡಿಯಲ್ಲಿ ಅಗತ್ಯವಿರುವಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿಯನ್ನು ಪಡೆದಿಲ್ಲ ಎಂದು ಬಾಷಾ ಪ್ರತಿಪಾದಿಸಿದ್ದರು. ಅಲ್ಲದೆ, ಈ ಪ್ರಕರಣವನ್ನು ಪರಿಶೀಲಿಸಿದ ನಂತರ, ಹೈಕೋರ್ಟ್‌ಗೆ ಇದು ಸರಿ ಎನ್ನಿಸಿದೆ.

ಇದನ್ನೂ ಓದಿ: ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

ಸಿಆರ್‌ಪಿಸಿಯ ಸೆಕ್ಷನ್ 196 ಅಡಿಯಲ್ಲಿ, ಸೆಕ್ಷನ್ 505 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ಮುಂದುವರಿಸಲು ಪೂರ್ವಾನುಮತಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯ ಪಟ್ಟಿತು. ಅಲ್ಲದೆ, ಈ ಪ್ರಕರಣದಲ್ಲಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವರದಿಯನ್ನು ಸರಿಯಾಗಿ ದಾಖಲಿಸಿಲ್ಲ ಮತ್ತು ಸಿಆರ್‌ಪಿಸಿಯ ಸೆಕ್ಷನ್ 196 ಅನ್ನು ಪಾಲಿಸಿಲ್ಲ ಎಂದೂ ನ್ಯಾಯಾಲಯವು ಕಂಡುಕೊಂಡಿದೆ.

ಸೆಕ್ಷನ್ 505 ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗೆ ಅಪರಾಧದ ಕೇಸ್‌ ಬಗ್ಗೆ ವಿವರ ನೀಡುವ ಮೊದಲು ಅಂತಹ ಪೂರ್ವ ಮಂಜೂರಾತಿ ಅಗತ್ಯ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಮೇಲಾಗಿ, ಅಂತಹ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ನ್ಯಾಯಾಲಯವು ಸೂಚಿಸಿದೆ. ಆದರೆ, ಈ ಪ್ರಕರಣದಲ್ಲಿ ದಾಖಲೆಯಲ್ಲಿರುವ ವಸ್ತುಗಳನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ಅನುಸರಣೆಯನ್ನು ಮಾಡಲಾಗಿಲ್ಲ ಎಂದು ರಾಜ್ಯ ಹೈಕೋರ್ಟ್‌ ಗಮನಿಸಿದೆ.

ಆದ್ದರಿಂದ ನ್ಯಾಯಾಧೀಶರು ಬಾಷಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದರು. ಆದರೂ, ಸಿಆರ್‌ಪಿಸಿಯ ಸೆಕ್ಷನ್ 196 ಅನ್ನು ಅನುಸರಿಸಿದ ನಂತರ ತನಿಖಾ ಸಂಸ್ಥೆಯು ಹೊಸ ತನಿಖೆ ನಡೆಸುವುದನ್ನು ತನ್ನ ಆದೇಶವು ತಡೆಯುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗೂ, ಅಂತಹ ತನಿಖೆಯಲ್ಲಿ ಸಾಕಷ್ಟು ಅಂಶಗಳು ಕಂಡುಬಂದರೆ, ತನಿಖಾ ಸಂಸ್ಥೆಯು ಚಾರ್ಜ್ ಶೀಟ್ ಸಲ್ಲಿಸಲು ಮತ್ತು ಕಾನೂನಿನ ಪ್ರಕಾರ ಪ್ರಕರಣವನ್ನು ಮುಂದುವರಿಸಲು ಸ್ವತಂತ್ರವಾಗಿದೆ ಎಂದೂ ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಅರ್ಜಿದಾರರ ಪರ ವಕೀಲ ಅರುಣಕುಮಾರ ಅಮರಗುಂಡಪ್ಪ ವಾದ ಮಾಡಿದರೆ, ರಾಜ್ಯ ಸರ್ಕಾರದ ಪರ ಮಾಯಾ ಟಿ.ಆರ್. ಎಂಬುವರು ಪ್ರತಿವಾದ ಮಂಡಿಸಿದ್ದರು. 

Follow Us:
Download App:
  • android
  • ios