Asianet Suvarna News Asianet Suvarna News

ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮಂಗಳೂರು ಆಸ್ಪತ್ರೆಗೆ ದಾಖಲು!

* ನಾಲ್ಕು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮಗೌಡ

* ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮಂಗಳೂರು ಆಸ್ಪತ್ರೆಗೆ ದಾಖಲು

 

Padma Shri Sukri Bommagowda Admitted To Hospital pod
Author
Bangalore, First Published May 8, 2022, 6:50 AM IST

ಮಂಗಳೂರು(ಮೇ.08): ಹಾಲಕ್ಕಿ ಬುಡಕಟ್ಟು ಸಮುದಾಯದ ಹೋರಾಟಗಾರ್ತಿ, ಹಿರಿಯ ಜಾನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಅವರು ಉಸಿರಾಟದ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ.

86 ವರ್ಷ ಪ್ರಾಯದ ಸುಕ್ರಿ ಬೊಮ್ಮಗೌಡ ಅವರು ಕಳೆದ 4 ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ನಾಲ್ಕು ದಿನಗಳಿಂದ ಈಚೆಗೆ ತಲೆಸುತ್ತು ಬರುತ್ತಿದ್ದುದರಿಂದ ಅವರ ಮನೆಯವರು ಮಂಗಳೂರಿನ ಸಾಮಾಜಿಕ ಹೋರಾಟಗಾರ ದಿನೇಶ್‌ ಹೊಳ್ಳ ಅವರನ್ನು ಸಂಪರ್ಕಿಸಿದ್ದರು. ಬಳಿಕ ವೈದ್ಯರ ಸಲಹೆಯ ಮೇರೆಗೆ ಶನಿವಾರ ಮಧ್ಯಾಹ್ನ 12.30 ಗಂಟೆಗೆ ಹುಟ್ಟೂರು ಅಂಕೋಲಾದಿಂದ ಕರೆತಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇದೀಗ ಸುಕ್ರಿ ಬೊಮ್ಮಗೌಡ ಅವರಿಗೆ ಉಸಿರಾಟಕ್ಕೆ ತಾತ್ಕಾಲಿಕ ಕೃತಕ ವ್ಯವಸ್ಥೆ ಕಲ್ಪಿಸಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಪರೀಕ್ಷೆಯ ವೇಳೆ ಸುಕ್ರಿ ಬೊಮ್ಮಗೌಡ ಅವರಿಗೆ ಅಲ್ಪ ಪ್ರಮಾಣದ ಹೃದಯ ಸಮಸ್ಯೆ ಇರುವುದು ಕಂಡು ಬಂದಿದ್ದು, ವೈದ್ಯರ ಸಲಹೆಯ ಮೇರೆಗೆ ಮುಂದಿನ ಚಿಕಿತ್ಸೆ ನಡೆಯಲಿದೆ ಎಂದು ದಿನೇಶ್‌ ಹೊಳ್ಳ ತಿಳಿಸಿದ್ದಾರೆ. ಸುಕ್ರಿ ಬೊಮ್ಮಾಗೌಡ ಅವರಿಗೆ 2017ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪದ್ಮಶ್ರೀ ಪ್ರಶಸ್ತಿ ಮರಳಿಸಲು ಮುಂದಾದ ಸುಕ್ರಿ ಬೊಮ್ಮುಗೌಡ

 

ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದಲ್ಲಿ ಕಂಡು ಬರುವ ವಿಶಿಷ್ಟ ಬುಡಕಟ್ಟು ಜನಾಂಗವಾಗಿದ್ದು, ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ತಮ್ಮ ವೇಷಭೂಷಣದಲ್ಲಿಯೇ, ಅದರಲ್ಲೂ ಮಗ್ಗದ ಚೌಕುಳಿ ಸೀರೆಯನ್ನು ಮೊಣಕಾಲಿನವರೆಗೆ ನೆರಿಗೆ ಮಾಡಿ ಇಳಿಬಿಟ್ಟು ಎಡ ಬಾಜುವಿಗೆ ಸೆರಗನ್ನು ತಂದು ಗಂಟು ಕಟ್ಟಿ ಉಡುವ, ಕುಪ್ಪಸವಿಲ್ಲದ ಭುಜಗಳ ತುಂಬ ಕರಿಮಣಿ ಸರಗಳನ್ನು ಧರಿಸುವ ಮಹಿಳೆಯರನ್ನು ನೋಡಿಯೇ ಹೇಳಬಹುದು ಇವರು ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂದು. ಆದರೆ ಈ ಜನಾಂಗ ಹಲವಾರು ವರ್ಷಗಳಿಂದ ಸರ್ಕಾರಗಳ ನಿರ್ಲಕ್ಷಕ್ಕೆ ತುತ್ತಾಗಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಇಂದಿಗೂ ನ್ಯಾಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಇದೇ ಸಮುದಾಯಕ್ಕೆ ಸೇರಿದ ಅಂಕೋಲಾ ತಾಲೂಕಿನ ಬಡಗೇರಿಯ, ಜಾನಪದ ಕೋಗಿಲೆ ಖ್ಯಾತಿಯ, ನಾಡೋಜ, ಪದ್ಮಶ್ರೀ ಸುಕ್ರಿ ಬೊಮ್ಮುಗೌಡ ಇದೀಗ ಹೋರಾಟಕ್ಕೆ ಕೈಜೋಡಿಸಿದ್ದಾರೆ

ಸಮುದಾಯದ ಕಡೆಗಣನೆ

ಸುಮಾರು 1.5 ಲಕ್ಷ ಜನಸಂಖ್ಯೆ ಇರುವ ಹಾಲಕ್ಕಿ ಒಕ್ಕಲಿಗ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಜಿಲ್ಲೆಯ ಜನಾಂಗದವರ ಬಹುದೊಡ್ಡ ಬೇಡಿಕೆ. ಈ ನಿಟ್ಟಿನಲ್ಲಿ ಕಳೆದ 2000ನೇ ಇಸವಿಯಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದು ಇಂದಿಗೂ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಮಾತ್ರ ಸೇರಿಸಿಲ್ಲ. ಈ ನಿಟ್ಟಿನಲ್ಲಿ ತಮ್ಮ ಸಮುದಾಯದ ಒಳಿತಿಗಾಗಿ ಮುಂದಾಗಿರುವ ಜಾನಪದ ಕೋಗಿಲೆ ಸುಕ್ರಿ ಬೊಮ್ಮುಗೌಡ ತಮ್ಮ ಜನಾಂಗವನ್ನ ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಸರ್ಕಾರದ ಸೌಲಭ್ಯದಿಂದ ಜನಾಂಗ ವಂಚಿತವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಒಂದಿಷ್ಟು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಸುಕ್ರಜ್ಜಿ, ತಮ್ಮ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತನ್ನ ಕಲೆಯನ್ನ ಗುರುತಿಸಿ ಕೇಂದ್ರ ಸರ್ಕಾರ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನ ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ.

Follow Us:
Download App:
  • android
  • ios