Asianet Suvarna News Asianet Suvarna News

'ಮೋದಿಯನ್ನು ವಿರೋಧಿಸಿದರೆ ದೇಶವನ್ನೇ ವಿರೋಧಿಸಿದಂತೆ'

ಮೋದಿಯನ್ನು ವಿರೋಧಿಸಿದರೆ ದೇಶವನ್ನೇ ವಿರೋಧಿಸಿದಂತೆ| ಕಾಂಗ್ರೆಸ್‌, ಪಾಕಿಸ್ತಾನದ್ದು ಒಂದೇ ಭಾಷೆ: ಜೋಶಿ

Opposing Modi Is Like Opposing The Nation Says Central Minister Pralhad Joshi
Author
Bangalore, First Published Jan 13, 2020, 8:08 AM IST

ರಾಯಚೂರು[ಜ.13]: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದು ಇಡೀ ದೇಶವನ್ನೇ ವಿರೋಧಿಸಿದಂತೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೂ ಪಾಕಿಸ್ತಾನದ್ದು ಒಂದೇ ಭಾಷೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ.

ಯರಮರಸ್‌ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ವಿರೋಧ ಪಕ್ಷಗಳು ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನೇ ವಿರೋಧಿಸುತ್ತಿವೆ. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್‌ ಪೌರತ್ವ ತಿದ್ದುಪಡಿ ಕಾಯಿದೆ ವಿಷಯವನ್ನು ಮುಂದಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಹೋರಾಟ ನಡೆಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯನ್ನು ದೇಶದಲ್ಲಿ ಅನುಷ್ಠಾನಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ ಹಾಗೂ ವಿಪಕ್ಷಗಳು ದುರುದ್ದೇಶಕಪೂರ್ವಕವಾಗಿ ಅದನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಸುಮಾರು ವರ್ಷಗಳಿಂದ ಲಕ್ಷಾಂತರ ಮಂದಿ ದೇಶದೊಳಗೆ ಅಕ್ರಮವಾಗಿ ನುಸುಳಿದ್ದಾರೆ. ಇಂತಹದ್ದರ ವಿರುದ್ಧ ಧ್ವನಿ ಎತ್ತಬೇಕಾದಂತಹ ವಿರೋಧ ಪಕ್ಷಗಳು ಮೌನವಹಿಸಿವೆ. ಸದಾ ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್‌ ಸಿಎಎ ವಿಚಾರದಲ್ಲಿ ಅವರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿವೆ. ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಯು.ಟಿ.ಖಾದರ್‌ ಅವರಿಗೆ ಏನಾದರೂ ಸಮಸ್ಯೆಯಾಗಿದೆಯೇ? ಇಷ್ಟಕ್ಕೂ ಪೌರತ್ವ ಕುರಿತು ನಿಮ್ಮ ಮೂಲ ಉದ್ದೇಶವಾದರೂ ಏನು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಹೇಳಿದರು.

ಕೊಪ್ಪಳದ ಜಾತ್ರೆಯಲ್ಲಿಯೂ ಮೋದಿ ಮೋದಿ, ಹೌದು ಹುಲಿಯಾದ್ದೇ ಹವಾ!

ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲ, ಎನ್‌ಡಿಎ ಸೇರಿ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸಮಗ್ರ ಚರ್ಚೆ ನಡೆಸಿದ ಬಳಿಕವೇ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಇಷ್ಟುವರ್ಷಗಳ ಕಾಲ ಕಾಂಗ್ರೆಸ್‌ ಮಾಡಲು ಆಗದ ಕಾರ್ಯವನ್ನು ಬಿಜೆಪಿ ಮಾಡಿದ್ದು ಅದಕ್ಕೇ ಯಾಕೆ ವಿರೋಧಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಉಗ್ರ ಹೋರಾಟಗಳನ್ನು ಮಾಡುತ್ತಿರುವುದು ಎಲ್ಲರಿಗೆ ಗೊತ್ತಿರುವ ವಿಷಯವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಿಟ್‌ ಅಂಡ್‌ ರನ್‌ ಮಾತುಗಳನ್ನಾಡುತ್ತಾರೆ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಅವರ ಬಿಡುಗಡೆ ಮಾಡಿರುವ ಸಿಡಿಯೂ ಸುಳ್ಳಾಗಿದ್ದು, ಯಾರ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ. ಈ ಕುರಿತು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್‌ನ ಎಲ್ಲ ಶಾಸಕರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ ಅದನ್ನು ಸಹಿಸಿಕೊಳ್ಳಲಾಗದ ಕುಮಾರಸ್ವಾಮಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು ಅದಕ್ಕೆ ಆದೇಶ ನೀಡಿದವರ ಮೇಲೆಯೇ ಆರೋಪ ಮಾಡುವುದು ಮಾಜಿ ಸಿಎಂ ಆದವರಿಗೆ ತರವಲ್ಲ ಎಂದರು.

Follow Us:
Download App:
  • android
  • ios