*   ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೊರರೋಗಿಗಳ ಸೇವೆ ಬಹಿಷ್ಕಾರ*  ಸಂಭಾವ್ಯ ವ್ಯತ್ಯಯ ಸರಿಪಡಿಸಲು ಅಗತ್ಯ ಕ್ರಮ *  ಕೊರೋನಾ ಸೋಂಕಿತರನ್ನು ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸಿಸುತ್ತಿರುವ ವೈದ್ಯರು

ಬೆಂಗಳೂರು(ಅ.07): ಕೊರೋನಾ(Coronavirus) ಅಪಾಯ ಭತ್ಯೆ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಆಸ್ಪತ್ರೆಗಳ ಸ್ಥಾನಿಕ ವೈದ್ಯರು (ರೆಸಿಡೆಂಟ್‌ ಡಾಕ್ಟರ್‌) ಇಂದು(ಗುರುವಾರ) ಹೊರ ರೋಗಿ ಸೇವೆ ಬಹಿಷ್ಕರಿಸುವುದಾಗಿ ಘೋಷಿಸಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗಳ(Government Hospital) ಹೊರ ರೋಗಿ ಸೇವೆಯಲ್ಲಿ ತುಸು ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ಥಾನಿಕ ವೈದ್ಯರು (ನಿವಾಸಿ ವೈದ್ಯರು) ಹಾಗೂ ಇಂಟರ್ನಿ ವೈದ್ಯರು(Doctors) ಮಾತ್ರ ಸೇವೆ ಬಹಿಷ್ಕರಿಸುತ್ತಿದ್ದಾರೆ. ಹೀಗಾಗಿ ತುರ್ತು ಚಿಕಿತ್ಸೆ, ತೀವ್ರ ನಿಗಾ ಘಟಕ ಸೇವೆ ಹಾಗೂ ಕೊರೋನಾ ಚಿಕಿತ್ಸೆಯ ಮೇಲೆ ಸೇವಾ ಬಹಿಷ್ಕಾರ ಪರಿಣಾಮ ಬೀರದು. ಈ ಸೇವೆಯಲ್ಲಿರುವವರು ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಕರ್ನಾಟಕ ಸ್ಥಾನಿಕ ವೈದ್ಯರ ಸಂಘ ಸ್ಪಷ್ಟಪಡಿಸಿದೆ.

ಸ್ಥಾನಿಕ ವೈದ್ಯರ ಪೈಕಿ ಖಾಯಂ ಹಾಗೂ ಹಿರಿಯ ವೈದ್ಯರು ಪ್ರತಿಭಟನೆಯಲ್ಲಿ(Strike) ಭಾಗವಹಿಸುವುದಿಲ್ಲ. ಕಿರಿಯ ಸ್ಥಾನಿಕ ವೈದ್ಯರು ಮಾತ್ರ ಭಾಗವಹಿಸಲಿದ್ದಾರೆ. ಹೀಗಾಗಿ ಹೊರ ರೋಗಿ ಸೇವೆಗಳಲ್ಲಿ ಹೆಚ್ಚು ಸಮಸ್ಯೆಯಾಗುವುದಿಲ್ಲ. ಸಂಭಾವ್ಯ ವ್ಯತ್ಯಯ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯರ ಗಮನಕ್ಕೂ ಬಾರದ ರೋಗಗಳಿವು.... ಲಕ್ಷಣಗಳ ಬಗ್ಗೆ ಎಚ್ಚರವಾಗಿರಿ

ಸಮಸ್ಯೆಗೆ ಸ್ಪಂದಿಸುತ್ತಿಲ್ಲ:

ಕೊರೋನಾ ಎರಡನೇ ಅಲೆಯಿಂದಾಗಿ ಹಲವಾರು ಜನರು ಸಮಸ್ಯೆ ಎದುರಿಸಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ವೈದ್ಯರಿಗೂ ಸವಾಲಾಗಿತ್ತು. ಈ ಅವಧಿಯಲ್ಲಿ ಸೋಂಕಿತರನ್ನು ಉಳಿಸಿಕೊಳ್ಳಲು ನಮ್ಮ ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ. ನಮ್ಮ ಸೇವೆಗೆ ಸರ್ಕಾರವು ಕೊರೋನಾ ಅಪಾಯ ಭತ್ಯೆ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘದ ಅಧ್ಯಕ್ಷೆ ಡಾ. ನಮ್ರತಾ ಸಿ. ಬೇಸರ ತೋಡಿಕೊಂಡಿದ್ದಾರೆ.

ಕೊರೋನಾ ಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ, ಸಾವಿನ ಪ್ರಮಾಣ ತಗ್ಗಿಸುವಲ್ಲಿ ಸ್ಥಾನಿಕ ವೈದ್ಯರ ಕೊಡುಗೆ ಹಿರಿದಿದೆ. ಆದರೂ ನಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಸರ್ಕಾರ ಕೂಡಲೇ ಕೊರೋನಾ ಅಪಾಯ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯ ಮಾಡಿದರು.