ಶೀಘ್ರದಲ್ಲೆ ಈರುಳ್ಳಿ ದುಬಾರಿಯಾಗುವ ಸಾಧ್ಯತೆ ಹೆಚ್ಚಳವಾಗಲಿದೆ. ಮತ್ತೆ ಜನರ ಕಣ್ಣಲ್ಲಿ ನೀರು ತರಿಸಲು ಮತ್ತೆ ಸಜ್ಜಾಗಿದೆ. 

ಬೆಂಗಳೂರು (ಆ.24) : ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ರೋಗಗಳ ಬಾಧೆಗೆ ಬೆಳೆ ನಾಶವಾಗುತ್ತಿರುವುದರಿಂದ ಪೂರೈಕೆ ಕೊರತೆಯುಂಟಾಗಿ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗುವ ಸಂಭವವಿದೆ.

ರಾಜ್ಯದಲ್ಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದ ಏಪ್ರಿಲ…- ಮೇ ತಿಂಗಳಲ್ಲಿ ಸಂಗ್ರಹಿಸಿಟ್ಟಿರುವ ಈರುಳ್ಳಿ ಒಣಗುವ ಬದಲು ಬಣ್ಣ ಕಳೆದುಕೊಂಡು ಕೊಳೆಯುತ್ತಿವೆ. ಇನ್ನೊಂದೆಡೆ ಬೇಡಿಕೆಯೂ ಕುಸಿದಿದೆ. ನವೆಂಬರ್‌ಗೆ ಹೊಸ ಬೆಳೆ ಬರುತ್ತದೆ. ಆದರೆ ಮಳೆ ನಿರಂತರವಾಗಿ ಸುರಿದರೆ ಇನ್ನಷ್ಟುಬೆಳೆ ಹಾನಿಯಾಗಿ ಒಂದು ಕೆ.ಜಿ.ಗೆ 50ರಿಂದ 60ರು. ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಒಳಗೊಂಡಂತೆ ವಿವಿಧ ಪ್ರದೇಶಗಳಲ್ಲಿ 1 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಮುಂಗಾರು ಬೆಳೆಯ ನಿರೀಕ್ಷೆಯಲ್ಲಿದ್ದವರಿಗೆ ಮಳೆ, ಕೊಳೆ ರೋಗ, ಮಜ್ಜಿಗೆ ರೋಗಗಳು ನಿರಾಸೆ ಉಂಟುಮಾಡಿವೆ.

ಮಳೆಯಿಂದ ಈರುಳ್ಳಿ ಬೆಳೆಗೆ ಅಪಾರ ಹಾನಿಯಾಗಿದೆ. ಕೆಲವೆಡೆ ರೋಗದ ಕಾಟ, ಬಿತ್ತನೆಗೆ ಮಾಡಿದ ಖರ್ಚು ಕೈಗೆಟುಕದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ದೊರೆಯುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ 120-150 ಲಾರಿ, ಮಿನಿ ಲಾರಿಗಳಲ್ಲಿ ಸರಬರಾಜಾಗುತ್ತಿದ್ದ ಈರುಳ್ಳಿ ಈಗಾಗಲೇ 100 ಲಾರಿಗೆ ಇಳಿಕೆಯಾಗಿದೆ. ನಗರದಲ್ಲಿ 100 ರು.ಗೆ 7 ಕೆ.ಜಿ. ಈರುಳ್ಳಿ, ಸಾಧಾರಣ ಮಟ್ಟದ್ದು 5-6 ಕೆ.ಜಿ. ಖರೀದಿಯಾಗುತ್ತಿದೆ. ಮಳೆ ಮುಂದುವರೆದರೆ ಮುಂಗಾರು ಬೆಳೆ ನಾಶವಾಗಿ ಬೆಲೆ ಹೆಚ್ಚಳವಾಗಲಿದೆ ಎನ್ನುತ್ತಾರೆ ವರ್ತಕರು.

ಈ ಕಾರಣಕ್ಕಾಗಿ ಈರುಳ್ಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ..!

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ತಾಲೂಕುಗಳಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ. ಪ್ರತಿ ವರ್ಷ ಅಂದಾಜು 25 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ವರ್ಷ ಬೆಲೆ ಇದ್ದಿದ್ದರಿಂದ ಕಡಿಮೆ ಬಿತ್ತನೆಯಾಗಿತ್ತು. ಆದರೆ, ಮಳೆಗೆ ಬೆಳೆ ನಾಶವಾಗಿದೆ. ಒಂದು ಎಕರೆಗೆ 30 ಸಾವಿರದಿಂದ 50 ಸಾವಿರ ರು. ವೆಚ್ಚ ಮಾಡಿದವರಿಗೆ ನಷ್ಟವುಂಟಾಗಿದೆ. ಬೇಸಿಗೆ ಈರುಳ್ಳಿ ಚೆನ್ನಾಗಿ ಇಳುವರಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲದೆ ಗದ್ದೆಯಲ್ಲೇ ಕೊಳೆತುಹೋಗಿದೆ. ಗದಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲೂ ಮಳೆಗೆ ಸಾಕಷ್ಟುಹಾನಿಯಾಗಿದೆ ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ಎಂ. ಸಿದ್ದೇಶ್‌ ತಿಳಿಸಿದರು.

ಎಲ್ಲೆಲ್ಲಿಂದ ಈರುಳ್ಳಿ ಆಗಮನ:

ಇಡೀ ದೇಶ ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಮಧ್ಯಪ್ರದೇಶದ ಈರುಳ್ಳಿ ಮೇಲೆ ಅವಲಂಬಿತವಾಗಿದೆ. ಈಗ ಹಳೆಯ ದಾಸ್ತಾನು ಈರುಳ್ಳಿ ಪೂರೈಕೆಯಾಗುತ್ತಿದೆ. ಹೀಗಾಗಿ ಬೆಲೆಯಲ್ಲೂ ಏರಿಳಿತವಾಗುತ್ತಿದೆ. ಕಳೆದ ವಾರ ಗುಣಮಟ್ಟದ ಈರುಳ್ಳಿಗೆ ಯಶವಂತಪುರ ಎಪಿಎಂಸಿಯ ಸಗಟು ದರ ಕೆ.ಜಿ.ಗೆ 10 ರು. ಇದ್ದುದು ಇದೀಗ ದುಪ್ಪಟ್ಟಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ರೈತ: ಈರುಳ್ಳಿ ಖರೀದಿಸಿ ಮಾನವೀಯತೆ ಮೆರೆದ ತಾಲೂಕಾಡಳಿತ

ಶುಕ್ರವಾರ ಯಶವಂತಪುರ ಎಪಿಎಂಸಿ ಯಾರ್ಡ್‌ಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಚಳ್ಳಕೆರೆ, ಚಿತ್ರದುರ್ಗ ಭಾಗಗಳಿಂದ 43946 (190 ಟ್ರಕ್‌) ಚೀಲಗಳು, ದಾಸನಪುರ ಉಪಮಾರುಕಟ್ಟೆಗೆ 15525 (65 ಟ್ರಕ್‌) ಚೀಲಗಳು ಪೂರೈಕೆಯಾಗಿವೆ. ಮಳೆಗೆ ಪೂರೈಕೆ ಕೊರತೆಯುಂಟಾಗಿ ದಿನಕ್ಕೊಂದು ಬೆಲೆ ನಿಗದಿಯಾಗುತ್ತಿದೆ. ಒಂದು ಕ್ವಿಂಟಲ್‌ಗೆ ಕನಿಷ್ಠ 400 ರು.ನಿಂದ 1300 ರು., ಉತ್ತಮ ಗುಣಮಟ್ಟದ್ದು 1700-1800 ರು.ಗೆ ಖರೀದಿಯಾಗುತ್ತಿದೆ. ಈ ಹಿಂದಿನಂತೆ ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರದಲ್ಲೂ ಮಳೆ ಇರುವುದರಿಂದ ಬೆಳೆ ಇಲ್ಲ. ಇಳುವರಿ ಕಡಿಮೆಯಾದರೆ ಬೆಲೆ ಹೆಚ್ಚಾಗಲಿದೆ ಎಂದು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ್‌ ಶಂಕರ್‌ ಹೇಳಿದರು.