ಚಿಕ್ಕಮಗಳೂರು, (ಜೂನ್.02): ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಬ್ಯಾಂಕ್ ಗಳ ವ್ಯವಸ್ಥೆಯನ್ನು ಒಂದೇ ಸಾಫ್ಟ್‌ವೇರ್ ಅಡಿ ತರಲಾಗುವುದು. ಇದರಿಂದ ಯಾವುದೇ ಅವ್ಯವಹಾರ ಆಗುವುದನ್ನು ತಡೆಯಬಹುದಾಗಿದೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸಹಕಾರ ಇಲಾಖೆ ಅಡಿಯಲ್ಲಿ ಬರುವ ಬ್ಯಾಂಕ್‌ಗಳ ವಹಿವಾಟುಗಳು ಒಂದೇ ವ್ಯವಸ್ಥೆಯಡಿ ತರುವ ಕೆಲಸ ಇದುವರೆಗೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಒಂದೇ ಸಾಫ್ಟ್‌ವೇರ್ ಅಡಿಯಲ್ಲಿ ಎಲ್ಲ ಬ್ಯಾಂಕ್‌ಗಳ ವಹಿವಾಟನ್ನು ತರುವ ಕೆಲಸವನ್ನು ಶೀಘ್ರದಲ್ಲಿ ತರಲಾಗುವುದು ಎಂದು ತಿಳಿಸಿದರು. 

ಸಹಕಾರ ಇಲಾಖೆ ಬಲಗೊಳಿಸಲು ಸಚಿವ ಎಸ್.ಟಿ.ಸೋಮಶೇಖರ್ ಮಹತ್ವದ ನಿರ್ಧಾರ

ಜೊತೆಗೆ ಯಾರಿಗೆ ಎಷ್ಟು ಸಾಲ ಕೊಡಲಾಗಿದೆ? ಒಬ್ಬರಿಗೇ ಹೆಚ್ಚು ಸಾಲ ಸಿಕ್ಕಿದೆಯೇ? ಬಡ್ಡಿ ಸೇರಿದಂತೆ ಸಾಲ ವಸೂಲಾತಿ ಎಷ್ಟಿದೆ? ಬ್ಯಾಂಕ್‌ಗಳ ಸ್ಥಿತಿಗತಿ ಏನು? ಎಂಬ ನಿಟ್ಟಿನಲ್ಲಿ ತಿಳಿಯಬಹುದು ಎಂದು ಸ್ಪಷ್ಟಪಡಿಸಿದರು.

ಸಹಕಾರ ವಲಯದಲ್ಲಿ ಹೊಸತನ ತರುವ  ನಿಟ್ಟಿನಲ್ಲಿ ನಾನು ಹಲವು ಯೋಜನೆ ಹಾಕಿಕೊಂಡಿದ್ದೇನೆ. ಮೊದಲಿಗೆ ಎಲ್ಲ 21 ಡಿಸಿಸಿ ಬ್ಯಾಂಕ್‌ಗಳ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಅಡಚಣೆಗಳು ಕಂಡುಬಂದರೂ ಸರಿಪಡಿಸಲಾಗುವುದು. ಜೊತೆಗೆ ಅವುಗಳ ಸ್ಥಿತಿಗತಿಗಳನ್ನು ನಾವೂ ಅರಿಯಬಹುದಾಗಿದೆ ಎಂದರು.

ರೈತರಿಗೇ ಹೆಚ್ಚು ಸಾಲ ನೀಡಿ

ಡಿಸಿಸಿ ಬ್ಯಾಂಕ್ ಇರುವುದು ಸ್ವಲ್ಪ ಲಾಭಾಂಶದ ಜೊತೆಗೆ ರೈತರಿಗೆ ಅನುಕೂಲ ಮಾಡಿಕೊಡುವುದಾಗಿದೆ. ಆದರೆ, ಹಲವಾರು ಬ್ಯಾಂಕ್‌ಗಳು ರೈತರಿಗೆ ಅಲ್ಪ ಪ್ರಮಾಣದಲ್ಲಿ ಸಾಲ ವಿತರಣೆ ಮಾಡುತ್ತಿವೆ. ಬದಲಾಗಿ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಸಾಲ ಕೊಟ್ಟಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಅವರಿಂದ ಒಂದು ರೂಪಾಯಿ ಸಾಲ ವಸೂಲಾಗಿಲ್ಲ. ಸಕ್ಕರೆ ಫ್ಯಾಕ್ಟರಿಗಳಿಗೆ ಈವರೆಗೆ ನೀಡಿದ ಸುಮಾರು 700-800 ಕೋಟಿ ಹಣ ಇನ್ನೂ ವಾಪಸ್ ಆಗಿಲ್ಲ. ಕೇವಲ ಎರಡ್ಮೂರು ಕಾರ್ಖಾನೆಗಳು ಮಾತ್ರ ಮರುಪಾವತಿ ಮಾಡಿವೆ. ಹೀಗಾಗಿ ರೈತರಿಗೇ ಸಾಲ ವಿತರಣೆ ಮಾಡುವ ಕೆಲಸ ಆಗಬೇಕು ಎಂದು ತಿಳಿಸಿದರು.

ಸ್ತ್ರೀಶಕ್ತಿಗಳ ಮಾದರಿ ಆಶಾ ಕಾರ್ಯಕರ್ತೆಯರಿಗೆ ಸಾಲ 
ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳಂತೆ ಆಶಾ ಕಾರ್ಯಕರ್ತೆಯರಿಗೆ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡದರು.