Asianet Suvarna News Asianet Suvarna News

ರಾಜ್ಯದಲ್ಲಿ ಪ್ರತಿ 5 ನಿಮಿಷಕ್ಕೆ ಒಬ್ಬರ ಪ್ರಾಣ ಹರಣ : ಮರಣ ದಾಖಲೆ

ಗುರುವಾರ ಕೊರೋನಾ ಸೋಂಕಿನಿಂದ ದಾಖಲೆಯ 270 ಮಂದಿ ಮರಣವನ್ನಪ್ಪಿದ್ದಾರೆ. ಇದು ರಾಜ್ಯದಲ್ಲಿ ಒಂದೇ ದಿನದಲ್ಲಿ ಕೋವಿಡ್‌-19ರಿಂದ ಸಂಭವಿಸಿದ ಗರಿಷ್ಠ ಸಾವನ ಪ್ರಮಾಣವಾಗಿದೆ. 

One Covid death for Every 5 minutes in karnataka snr
Author
Bengaluru, First Published Apr 30, 2021, 7:22 AM IST

ಬೆಂಗಳೂರು (ಏ.30):  ರಾಜ್ಯದಲ್ಲಿ ಗುರುವಾರ ಕೊರೋನಾ ಸೋಂಕಿನಿಂದ ದಾಖಲೆಯ 270 ಮಂದಿ ಮರಣವನ್ನಪ್ಪಿದ್ದಾರೆ. ಇದು ರಾಜ್ಯದಲ್ಲಿ ಒಂದೇ ದಿನದಲ್ಲಿ ಕೋವಿಡ್‌-19ರಿಂದ ಸಂಭವಿಸಿದ ಗರಿಷ್ಠ ಸಾವು. ಇದೇ ವೇಳೆ 35,024 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ದಾಖಲೆಯ 14,142 ಮಂದಿ ಗುಣಮುಖರಾಗಿದ್ದಾರೆ.

ಬುಧವಾರ ರಾಜ್ಯದಲ್ಲಿ 229 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿ ನಿರ್ಮಾಣವಾಗಿದ್ದ ದಾಖಲೆ ಮರುದಿನವೇ ಪತನ ಕಂಡಿದೆ. ಕಳೆದೆರಡು ದಿನಗಳಲ್ಲಿ ಒಟ್ಟು 499 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಪ್ರತಿ 5 ನಿಮಿಷಕ್ಕೆ ಒಬ್ಬರ ಪ್ರಾಣವನ್ನು ಕೋವಿಡ್‌ ಮಹಾಮಾರಿ ಕಸಿದುಕೊಳ್ಳುತ್ತಿದೆ. ಮೃತರಲ್ಲಿ 72 ಮಂದಿ 50 ವರ್ಷದೊಳಗಿನವರು. ಕಳೆದೆರಡು ದಿನಗಳಲ್ಲಿ 150ಕ್ಕಿಂತ ಹೆಚ್ಚು ಯುವಕರು ಕೋವಿಡ್‌ನಿಂದ ಮೃತರಾಗಿದ್ದಾರೆ.

ಬುಧವಾರ (39,047)ಕ್ಕಿಂತ ಕೋವಿಡ್‌ ಹೊಸ ಪ್ರಕರಣಗಳ ಅಬ್ಬರ ತುಸು ಕಡಿಮೆಯಾಗಿದೆ. ಆದರೆ ಕಳೆದ ಮೂರು ದಿನಗಳಿಂದ 30 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ರಾಜ್ಯದ ಕೋವಿಡ್‌ ಲೆಕ್ಕಕ್ಕೆ ಕಳೆದ ಮೂರು ದಿನಗಳಲ್ಲೇ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣ ಸೇರ್ಪಡೆಯಾಗಿದೆ. ಗುರುವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನೂರಕ್ಕಿಂತ ಹೆಚ್ಚು ಹೊಸ ಪ್ರಕರಣ ಪತ್ತೆಯಾಗಿದೆ.

ಕೋವಿಡ್‌ನ ಸಾವು ನೋವುಗಳ ಸುದ್ದಿಯ ಮಧ್ಯೆಯೂ 14,142 ಮಂದಿ ಸೋಂಕಿನಿಂದ ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆ. ಕಳೆದ ನಾಲ್ಕು ದಿನದಿಂದ 10 ಸಾವಿರಕ್ಕಿಂತ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ ಅಕ್ಟೋಬರ್‌ 22ರಂದು 13,350 ಮಂದಿ ಗುಣಮುಖರಾಗಿದ್ದ ದಾಖಲೆ ಇನ್ನಷ್ಟುಉತ್ತಮಗೊಂಡಿದೆ.

ಮುಂದೆ ಕಾದಿದೆ ದೊಡ್ಡ ಗಂಡಾಂತರ : 5 ಲಕ್ಷ ಐಸಿಯು ಬೇಕು! ...

ಸದ್ಯ ರಾಜ್ಯದಲ್ಲಿ 3.49 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 2,431 ಮಂದಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ 1.75 ಲಕ್ಷ ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವಿಟಿ ದರ ಶೇ.19.92 ರಷ್ಟಿದೆ. ಈವರೆಗೆ ಒಟ್ಟು 2.54 ಕೋಟಿ ಕೋವಿಡ್‌ ಪರೀಕ್ಷೆ ರಾಜ್ಯದಲ್ಲಿ ನಡೆದಿದೆ.

ಬೆಂಗಳೂರು ನಗರದಲ್ಲಿ 143 ಮೃತರಾಗಿದ್ದಾರೆ. ಬಳ್ಳಾರಿ 16, ಮೈಸೂರು 12, ಕಲಬುರಗಿ 11, ತುಮಕೂರು, ಮಂಡ್ಯ ಮತ್ತು ಹಾಸನ ತಲಾ 9, ಯಾದಗಿರಿ 8, ಚಾಮರಾಜನಗರ 7, ಧಾರವಾಡ 5, ಬೆಂಗಳೂರು ಗ್ರಾಮಾಂತರ, ವಿಜಯಪುರ, ಉತ್ತರ ಕನ್ನಡ, ರಾಮನಗರ ತಲಾ 4, ಶಿವಮೊಗ್ಗ, ಚಿಕ್ಕಬಳ್ಳಾಪುರ ತಲಾ 3, ಚಿತ್ರದುರ್ಗ, ಉಡುಪಿ ತಲಾ 2, ಬಾಗಲಕೋಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೋಲಾರ ತಲಾ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ. ರಾಜ್ಯದ 25 ಜಿಲ್ಲೆಗಳಲ್ಲಿ ಸಾವು ವರದಿಯಾಗಿದೆ.

ಬೆಂಗಳೂರು ನಗರ 19,637, ಮೈಸೂರು 1,219, ತುಮಕೂರು 1,195, ದಕ್ಷಿಣ ಕನ್ನಡ 1,175, ಬೆಂಗಳೂರು ಗ್ರಾಮಾಂತರ 1,129, ಕಲಬುರಗಿ 957, ಮಂಡ್ಯ 939, ಬಳ್ಳಾರಿ 896, ಉಡುಪಿ 568, ಹಾಸನ 624, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ ತಲಾ 545, ಕೊಡಗು 537, ಕೋಲಾರ 536 ಪ್ರಕರಣ ವರದಿಯಾಗಿದೆ.

ರಾಜ್ಯದಲ್ಲಿ ಈವರೆಗೆ 14.74 ಲಕ್ಷ ಮಂದಿ ಕೋವಿಡ್‌ನಿಂದ ಬಾಧಿತರಾಗಿದ್ದು ಈ ಪೈಕಿ 11.10 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 15,306 ಮಂದಿ ಮೃತರಾಗಿದ್ದಾರೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಗುರುವಾರ 225 ಲಸಿಕಾ ಕೇಂದ್ರದಲ್ಲಿ ಒಟ್ಟು 74,742 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ಈವರೆಗೆ ಒಟ್ಟು 93.63 ಲಕ್ಷ ಡೋಸ್‌ ವಿತರಿಸಲಾಗಿದೆ. 44 ವರ್ಷದಿಂದ 59 ವರ್ಷದೊಳಗಿನ 37,019 ಮಂದಿ, 60 ವರ್ಷ ಮೀರಿದ 30,861 ಮಂದಿ, ಮುಂಚೂಣಿ ಕಾರ್ಯಕರ್ತರು 4,560 ಮಂದಿ, ಆರೋಗ್ಯ ಕಾರ್ಯಕರ್ತರು 2,302 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios