ಬೆಂಗಳೂರು(ಜು.25):  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ ದಂಪತಿ ಚಿಕಿತ್ಸೆಗಾಗಿ ನಗರದ ಹಲವು ಆಸ್ಪತ್ರೆಗಳನ್ನು ಸುತ್ತಾಡಿ ಎಲ್ಲಿಯೂ ಚಿಕಿತ್ಸೆ ಲಭ್ಯವಾಗದ ಪರಿಣಾಮ ಅಂತಿಮವಾಗಿ, ಪುತ್ರಿಯೊಂದಿಗೆ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

"

ಕೊರೋನಾ ಸೋಂಕಿನ ಭೀತಿಯಿಂದಾಗಿ ಖಾಸಗಿ ಆಸ್ಪತ್ರೆಗಳು ಇತರೆ ಕೊರೋನೇತರ ರೋಗಿಗಳಿಗೂ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಪರಿಣಾಮ ಹಲವು ಆಸ್ಪತ್ರೆಗಳಿಗೆ ತಿರುಗಿದರೂ, ವೃದ್ಧ ದಂಪತಿಗೆ ಚಿಕಿತ್ಸೆ ಲಭ್ಯವಾಗಿಲ್ಲ. ಪರಿಣಾಮ ತಮ್ಮ ಕುಟುಂಬಸ್ಥರೊಂದಿಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದು, ಪೊಲೀಸರ ನೆರವಿನಿಂದ ನಗರದ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸೇರಿಸಲಾಗಿದೆ.

ಆರೋಗ್ಯಾಧಿಕಾರಿ ಕುಟುಂಬ ಮೂವರು ಸೋಂಕಿಗೆ ಬಲಿ

ಶಾಂತಿನಗರದ ವಿಧಾನಸಭಾ ಕ್ಷೇತ್ರದ ವಿವೇಕನಗರದ ನಿವಾಸಿಯಾಗಿರುವ 75 ವರ್ಷದ ವೃದ್ಧ ಹಾಗೂ ಅವರ 65 ವರ್ಷದ ಪತ್ನಿಗೆ ಶುಕ್ರವಾರ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ನಗರದ ಹಲವು ಆಸ್ಪತ್ರೆಗಳಿಗೂ ಸುತ್ತಾಡಿದ್ದಾರೆ. ಎಲ್ಲಿಯೂ ಚಿಕಿತ್ಸೆ ಲಭ್ಯವಾಗದ ಪರಿಣಾಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದರು.

ಸ್ಥಳಕ್ಕಾಗಮಿಸಿದ ಪೋಲೀಸರು, ದಂಪತಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೆ, ಅವರ ಮಗಳ ಮನವೊಲಿಸಿದ್ದು, ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಕಬ್ಬನ ಪಾರ್ಕ್ ಠಾಣೆ ಪೊಲೀಸ್‌ರು, ರೋಗಿಗಳನ್ನು ನಗರದ ಸೇಂಟ್‌ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು ತಿಳಿಸಿದರು.

ಸುಧಾಕರ್‌ ಸ್ಪಂದನೆ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು, ದಂಪತಿಯ ಪುತ್ರಿಯೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದಾರೆ. ಬಳಿಕ, ‘ಕಬ್ಬನ್‌ ಪಾರ್ಕ್ ಬಳಿ ಕಗ್ಗತ್ತಲಿನಲ್ಲಿ ವ್ಯಥೆ ಪಡುತ್ತಿದ್ದ ದಂಪತಿಯ ಪುತ್ರಿಯೊಂದಿಗೆ ಮಾತನಾಡಿದ್ದೇನೆ. ಅವರನ್ನು ಈ ಕೂಡಲೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಯೊಬ್ಬರಿಗೆ ಸೂಚಿಸಿದ್ದೇನೆ. ಅವರು ಕ್ಷೇಮವಾಗಿ ಆಸ್ಪತ್ರೆ ಸೇರುವವರೆಗೂ ನಾನು ಮಲಗುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.