Asianet Suvarna News Asianet Suvarna News

ಅಡಿಕೆಗೆ ಹೆಚ್ಚು ಕಾಲ ಭವಿಷ್ಯವಿಲ್ಲ: ಗೃಹ ಸಚಿವ ಆರಗ ಆತಂಕ

5-10 ವರ್ಷಗಳಲ್ಲಿ ಅಡಿಕೆಗೆ ಭವಿಷ್ಯ ಇಲ್ಲದಾಗಬಹುದು. ನಂತರ ಅಡಿಕೆ ಮರಗಳನ್ನು ಕಡಿದು ಮತ್ತೆ ಸಾಂಪ್ರದಾಯಿಕ ಕೃಷಿಗೆ ಮರಳಬೇಕಾಗಬಹುದು ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ 

Nuts Do Not Have Long Term Future Says Home Minister Araga Jnanendra grg
Author
First Published Dec 29, 2022, 10:30 AM IST

ವಿಧಾನಸಭೆ(ಡಿ.29): ರಾಜ್ಯವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಅಡಿಕೆ ಕೃಷಿ ಮಿತಿ ಮೀರಿ ವಿಸ್ತರಣೆಯಾಗುತ್ತಿರುವುದನ್ನು ನೋಡಿದರೆ ಅಡಿಕೆಗೆ ಹೆಚ್ಚು ಕಾಲ ಭವಿಷ್ಯವಿಲ್ಲ ಎನಿಸುತ್ತಿದೆ. 5-10 ವರ್ಷದಲ್ಲಿ ಅಡಿಕೆ ಬೆಲೆ ಕುಸಿದು ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ನಿಯಮ 69ರಡಿ ಮಾತನಾಡಿದ ಅವರು, ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳು ಮತ್ತು ಬಯಲು ಸೀಮೆಯ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದ್ದ ಅಡಿಕೆ ಬೆಳೆ ಅನೇಕ ಜಿಲ್ಲೆಗಳಿಗೆ ವಿಸ್ತರಣೆಯಾಗುತ್ತಿದೆ. ಭತ್ತ, ರಾಗಿ, ಕಬ್ಬು ಮತ್ತಿತರ ಬೆಳೆ ಬೆಳೆಯುತ್ತಿದ್ದ ರೈತರೂ ಅಡಿಕೆ ತೋಟ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಒಂದರಲ್ಲೇ 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಬರುತ್ತಿದೆ. ಅಡಿಕೆಗೆ ಉತ್ತಮ ಬೆಲೆ ಇದೆ ಎಂದು ಎಲ್ಲ ರೈತರು ಅದನ್ನೇ ಬೆಳೆಯಲು ಮುಂದಾದರೆ ಮುಂದೆ ಮಾರಕವಾಗಲಿದೆ. 5-10 ವರ್ಷಗಳಲ್ಲಿ ಅಡಿಕೆಗೆ ಭವಿಷ್ಯ ಇಲ್ಲದಾಗಬಹುದು. ನಂತರ ಅಡಿಕೆ ಮರಗಳನ್ನು ಕಡಿದು ಮತ್ತೆ ಸಾಂಪ್ರದಾಯಿಕ ಕೃಷಿಗೆ ಮರಳಬೇಕಾಗಬಹುದು ಎಂದರು.

ಅಡಿಕೆ ಬೆಳೆಗಾರರ ಪರ ಧ್ವನಿ ಎತ್ತಿದ ಸಂಸದ ಬಿ.ವೈ. ರಾಘವೇಂದ್ರ

ಆದರೆ, ಈ ಮಾತನ್ನು ಒಪ್ಪದ ಜೆಡಿಎಸ್‌ನ ಅನ್ನದಾನಿ ಸೇರಿದಂತೆ ಕೆಲ ಶಾಸಕರು, ದೇಶ ವಿದೇಶಗಳಲ್ಲೂ ಅಡಿಕೆ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಡಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಡಿಕೆ ಬೆಳೆ ವಿಸ್ತರಣೆಯಾದರೇನು, ನೀವು ಕೇಂದ್ರ ಸರ್ಕಾರಕ್ಕೆ ಹೇಳಿ ವಿದೇಶಗಳಿಂದ ಅಡಿಮೆ ಆಮದು ನಿಲ್ಲಿಸಿ ಎಂದು ಆಗ್ರಹಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಬೆಲೆ ಇದೆ ಎಂದು ಎಲ್ಲ ರೈತರೂ ಒಂದೇ ಬೆಳೆಗೆ ಒತ್ತು ನೀಡಿದರೆ ಮುಂದೆ ಸಮಸ್ಯೆಯಾಗಬಹುದು ಎಂಬುದಷ್ಟೆ ಸಚಿವರ ಕಳಕಳಿ ಎಂದರು.

Follow Us:
Download App:
  • android
  • ios