Asianet Suvarna News Asianet Suvarna News

ರಸ್ತೆಬದಿಯಲ್ಲೇ ವ್ಯಕ್ತಿ ಕೊನೆಯುಸಿರು: ನಾಲ್ವರು ಅಧಿಕಾರಿಗಳಿಗೆ ನೋಟಿಸ್‌

ಆ್ಯಂಬುಲೆನ್ಸ್‌ ಆಗಮಿಸುವುದು ತಡವಾಗಿ ಕಳೆದ ಶುಕ್ರವಾರ ಹನುಮಂತನಗರದಲ್ಲಿ 65 ವರ್ಷದ ವ್ಯಕ್ತಿ ರಸ್ತೆಯಲ್ಲೇ ಮೃತಪಟ್ಟಪ್ರಕರಣ ಸಂಬಂಧ ಬಿಬಿಎಂಪಿಯ ತನಿಖಾ ತಂಡ ವರದಿ ನೀಡಿದ್ದು, ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ತಿಳಿಸಿದೆ. ಘಟನೆ ಸಂಬಂಧ ನಾಲ್ವರು ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ.

Notice issued to 4 officers regarding death of man at roadside in Bangalore
Author
Bangalore, First Published Jul 10, 2020, 9:40 AM IST

ಬೆಂಗಳೂರು(ಜು.10): ಆ್ಯಂಬುಲೆನ್ಸ್‌ ಆಗಮಿಸುವುದು ತಡವಾಗಿ ಕಳೆದ ಶುಕ್ರವಾರ ಹನುಮಂತನಗರದಲ್ಲಿ 65 ವರ್ಷದ ವ್ಯಕ್ತಿ ರಸ್ತೆಯಲ್ಲೇ ಮೃತಪಟ್ಟಪ್ರಕರಣ ಸಂಬಂಧ ಬಿಬಿಎಂಪಿಯ ತನಿಖಾ ತಂಡ ವರದಿ ನೀಡಿದ್ದು, ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ತಿಳಿಸಿದೆ. ಘಟನೆ ಸಂಬಂಧ ನಾಲ್ವರು ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ.

ಘಟನೆ ಕುರಿತು ತನಿಖೆ ನಡೆಸಲು ಬಿಬಿಎಂಪಿ ಆಯುಕ್ತರು ರಚಿಸಿದ್ದ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಲಿಂಗಮೂರ್ತಿ ಅವರ ನೇತೃತ್ವದ ತನಿಖಾ ತಂಡ ಸಲ್ಲಿಸಿರುವ ವರದಿಯಲ್ಲಿ, ಸೋಂಕಿತ ವ್ಯಕ್ತಿ ಬಿಬಿಎಂಪಿಗೆ ಕರೆ ಮಾಡಿದಾಗ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಯಲ್ಲಿತ್ತು. ಆ್ಯಂಬುಲೆನ್ಸ್‌ ಸ್ಥಳಕ್ಕೆ ತೆರಳುವ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಬಂದ ಆ್ಯಂಬುಲೆನ್ಸ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಇರಲಿಲ್ಲ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ಶವ ಸಾಗಿಸಲು ಚಾಲಕ ನಿರಾಕರಿಸಿದ್ದಾನೆ. ಜತೆಗೆ ಶವ ಸಾಗಿಸುವ ಸಿಬ್ಬಂದಿ ಹಾಗೂ ಶ್ರದ್ಧಾಂಜಲಿ ವಾಹನವೂ ಅಲಭ್ಯತೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಹೀಗಾಗಿ, ಸೋಂಕಿತ ವ್ಯಕ್ತಿಯ ಶವ ಮೂರು ಗಂಟೆಗೂ ಅಧಿಕ ಕಾಲ ಮಳೆಯಲ್ಲಿಯೇ ಬಿದ್ದಿದೆ. ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಂದ ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಾಲ್ವರು ಅಧಿಕಾರಿಗಳಿಗೆ ನೋಟಿಸ್‌:

ಘಟನೆಗೆ ಸಂಬಂಧಿಸಿದಂತೆ ಹನುಮಂತನಗರದ ಆರೋಗ್ಯಾಧಿಕಾರಿ ಡಾ.ಮಧುಸೂಧನ್‌, ಕ್ಲಿನಿಕ್‌ ವೈದ್ಯಧಿಕಾರಿ ಡಾ.ಜಯಶ್ರೀ, ಹಿರಿಯ ಆರೋಗ್ಯಾಧಿಕಾರಿ ನಟರಾಜ್‌ ಹಾಗೂ ಕಿರಿಯ ಆರೋಗ್ಯಾಧಿಕಾರಿ ಮೀನಾ ಅವರಿಗೆ ಆಯುಕ್ತರು ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಏನಿದು ಘಟನೆ?

ಜು.3ರಂದು ಹನುಮಂತ ನಗರದ ರಾಮಾಂಜನಯ ರಸ್ತೆಯ 7ನೇ ಕ್ರಾಸ್‌ ಬಳಿ ಕೊರೋನಾ ಸೋಂಕು ದೃಢಪಟ್ಟ65 ವರ್ಷ ವ್ಯಕ್ತಿಯು ಸಕಾಲಕ್ಕೆ ಆಸ್ಪತ್ರೆ ದಾಖಲಿಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಮೃತದೇಹ ಸುಮಾರು ಮೂರು ಗಂಟೆಗೂ ಅಧಿಕ ಕಾಲ ಮಳೆಯಲ್ಲಿಯೇ ಬಿದ್ದಿತ್ತು. ಬಿಬಿಎಂಪಿ ಅಧಿಕಾರಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಮರುದಿನ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರು ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಕೈ ಮುಗಿದು ಕ್ಷಮೆಯಾಚಿಸಿದ್ದರು.

Follow Us:
Download App:
  • android
  • ios