ಸಿಎಂ ಪತ್ನಿ ಪಡೆದ ನಿವೇಶನ ಶೇ.100 ಕಾನೂನುಬದ್ಧ: ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಎಂಡಿಎ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಮೈಸೂರು (ಜು.8): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಎಂಡಿಎ) ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ. ಪಾರ್ವತಿ ಅವರದು ಶೇ.100 ಲೀಗಲ್ ಆಸ್ತಿ ಎಂದು ಸ್ಪಷ್ಟಪಡಿಸಿದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ಈ ವಿಚಾರದಲ್ಲಿ ರಾಜಕೀಯ ತಪ್ಪು ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರು ಪಡೆದಿರುವ ನಿವೇಶನಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ, ಯಾವುದೇ ದುರುಪಯೋಗ ನಡೆದಿಲ್ಲ. ತಪ್ಪು ಮಾಡಿಲ್ಲ. ದಾಖಲಾತಿಗಳು ಕ್ರಮಬದ್ಧವಾಗಿದೆ. ನಿಯಮವನ್ನೂ ಮೀರಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲೇಜು ಹುಡುಗಿಯರ ಮುಂದೆ ಪ್ಯಾಂಟ್ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿದ ಕಾಮುಕನ ವೀಡಿಯೋ ವೈರಲ್!
ಕೆಸರೆ 464 ಸರ್ವೇ ನಂಬರ್‌ನಲ್ಲಿ 3 ಎಕರೆ 16 ಕುಂಟೆ ಜಮೀನು ಅನ್ನು ಕಾನೂನುಬಾಹಿರವಾಗಿ ವಶ ಪಡೆದಿರುವುದನ್ನು ತಪ್ಪೊಪ್ಪಿಕೊಂಡಿರುವ ಎಂಡಿಎ ಅಧಿಕಾರಿಗಳು ಕೌನ್ಸಿಲ್‌ನಲ್ಲಿ ಚರ್ಚಿಸಿ ತೀರ್ಮಾನ ಮಾಡಿ ಪರ್ಯಾಯವಾಗಿ ವಿಜಯನಗರದಲ್ಲಿ ನಿವೇಶನ ಕೊಟ್ಟಿದ್ದಾರೆ. ಆದರೆ, ಈ ಪ್ರಕರಣದಲ್ಲಿ ರಾಜಕೀಯವಾಗಿ ತಪ್ಪು ಹುಡುಕಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಕಳಂಕ ಮತ್ತು ಭ್ರಷ್ಟಾಚಾರ ರಹಿತವಾಗಿರುವ ಬದ್ಧತೆಯ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಕೆಲವರು ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಹರಾಜಿನಲ್ಲಿ ಖರೀದಿಸಿದ ಭೂಮಿ: ಕೆಸರೆಯಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಖರೀದಿಸಿರುವುದು ದಲಿತರ ಭೂಮಿಯಲ್ಲ. ನಿಂಗ ಬಿನ್ ಜವರ ಅವರು 1985ರಲ್ಲಿ ಜಿಲ್ಲಾಧಿಕಾರಿ ನಡೆಸಿದ ಬಹಿರಂಗ ಹರಾಜಿನ ಮೂಲಕ 100 ರು. ಖರೀದಿಸಿದ್ದಾರೆ. ಇದು ಹೇಗೆ ಪಿಟಿಷನ್ ಜಮೀನು ಆಗುತ್ತದೆ. ಇದರ ಬಗ್ಗೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ ಆದರೂ ಮಾತನಾಡುತ್ತಿದ್ದಾರೆ. ಈ ಹಿಂದೆ ಇದೆಕ್ಕೆಲ್ಲ ತಲೆನೇ ಕೆಡಿಸಿಕೊಳ್ಳದವರೂ ಈಗ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಮುಡಾ ಅವ್ಯವಹಾರ ನನ್ನ ಗಮನಕ್ಕೆ ಬಂದಿತ್ತು, ನಾನು ಸೈಟು ಪಡೆದಿದ್ದರೆ ರಾಜೀನಾಮೆ: ಎಸ್.ಟಿ. ಸೋಮಶೇಖರ್
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪಿಟಿಸಿಎಲ್ ಕಾಯಿದೆಯನ್ನೇ ರದ್ದು ಮಾಡಿತ್ತು. ಆಗ ಆರ್.ಆಶೋಕ್ ಅವರೇ ಕಂದಾಯ ಸಚಿವರಾಗಿದ್ದರು. ಈಗ ಅವರೂ ದಲಿತರ ಜಮೀನು ಎಂದು ಮಾತನಾಡುತ್ತಿದ್ದಾರೆ. ಎಸ್ಸಿ, ಎಸ್ಟಿ ಜಮೀನುಗಳನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರ್ಕಾರ ಯಾವಾಗಲೂ ಬದ್ಧವಾಗಿದೆ. ಅದಕ್ಕಾಗಿ ಪಿಟಿಸಿಎಲ್ ಕಾಯಿದೆಯನ್ನು ಮರುಸ್ಥಾಪನೆ ಮಾಡಿದ್ದೇವೆ. ಈ ಕಾಯಿದೆಯ ಪ್ರಕಾರ ಜಮೀನು ರಕ್ಷಣೆಗಾಗಿ ಉಪ ವಿಭಾಗಾಧಿಕಾರಿಯಿಂದ ಹಿಡಿದು ಸುಪ್ರೀಂಕೋರ್ಟ್ ವರೆಗೂ ಅಪೀಲು ಹೋಗುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಕೆ. ಮಹೇಶ್ ಇದ್ದರು.
ಎಂಡಿಎ ಹಗರಣ- ವರದಿ ಬಂದ ಮೇಲೆ ಕ್ರಮ: ಎಂಡಿಎ ಹಗರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ವರದಿ ಬಂದ ಬಳಿಕ ರಾಜಕಾರಣಿಗಳ ಸಹಿತವಾಗಿ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.
ಇಲಿ, ಕೋತಿ, ನಾಯಿ ಹೋದದ್ದಕ್ಕೆಲ್ಲಾ ಸಿಬಿಐಗೆ ಕೊಡುವಂತೆ ಒತ್ತಾಯಿಸುತ್ತಾರೆ. ಹಿಂದೆ ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದರು?, ಈಗ ಯಾಕೇ ಸಿಬಿಐ ಮೇಲೆ ವಿಶೇಷ ಒಲವು ಬಂದಿದೆ. ನಮ್ಮ ರಾಜ್ಯದ ಪೊಲೀಸರಿಗೆ ದಕ್ಷತೆ ಇದೆ, ಹಲವಾರು ಪ್ರಕರಣಗಳಿಗೆ ತಾರ್ಕಿಕ ಅಂತ್ಯವಾಡಿ, ನ್ಯಾಯಕೊಡಿಸಿದ್ದಾರೆ ಎನ್ನುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ನೇಮಕ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದೇನೆ. ಹಿಂದೆ ಎಡಿಎಯಲ್ಲಿ ಮೂವರು ಮಾತ್ರ ಸದಸ್ಯರಿದ್ದರು. ಅದೇ ಮಾದರಿಯನ್ನು ಮುಂದುವರಿಸುವಂತೆ ಕೋರಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ