ಬೆಂಗಳೂರು (ಆ.19) :  ರಾಜ್ಯದಲ್ಲಿ ಯಾವುದೇ ಸೋಂಕು ಲಕ್ಷಣಗಳಿಲ್ಲದ (ಎಸಿಮ್ಟಮ್ಯಾಟಿಕ್‌) ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಳೆದ ಸುಮಾರು ಒಂದು ತಿಂಗಳಲ್ಲಿ ಎ-ಸಿಮ್ಟಮ್ಯಾಟಿಕ್‌ ಸೋಂಕಿತರ ಪ್ರಮಾಣ ಶೇ.12ರಷ್ಟುಏರಿಕೆಯಾಗಿದೆ. ಕಳೆದ ಜು.16ರಂದು ಶೇ.73ರಷ್ಟಿದ್ದ ಲಕ್ಷಣರಹಿತ ಪ್ರಮಾಣ ಆ.11ರ ವೇಳೆಗೆ ಶೇ.85 ತಲುಪಿದೆ.

ರಾಜ್ಯಕ್ಕೆ ಕೋವಿಡ್‌ ಕಾಲಿಟ್ಟಆರಂಭದ ಕೆಲ ತಿಂಗಳು ಬಹುಪಾಲು ಸೋಂಕಿತರು ಲಕ್ಷಣರ ರಹಿತರಾಗಿದ್ದರು. ಮೇ ತಿಂಗಳ ವರೆಗೆ ಸೋಂಕು ದೃಢಪಟ್ಟವರಲ್ಲಿ ಶೇ.75ರಷ್ಟುಮಂದಿಗೆ ಲಕ್ಷಣಗಳೇ ಇರಲಿಲ್ಲ. ನಂತರ ಜೂನ್‌ ತಿಂಗಳ ಮಧ್ಯಭಾಗದ ವೇಳೆಗೆ ಎಸಿಮ್ಟಮ್ಯಾಟಿಕ್‌ ಸೋಂಕಿತರ ಸಂಖ್ಯೆ ಶೇ.97ರವರೆಗೂ ಏರಿಕೆಯಾದ ಉದಾಹರಣೆಗಳಿವೆ. ಉದಾಹರಣೆಗೆ ಜೂನ್‌ 10ರ ವರೆಗೆ ಸೋಂಕು ದೃಢಪಟ್ಟಿದ್ದ 5,921 ಸೋಂಕಿತರದಲ್ಲಿ 5743 ಮಂದಿಗೆ (ಶೇ.97) ಯಾವುದೇ ಲಕ್ಷಣಗಳಿಲ್ಲ. ಉಳಿದ 178 ಮಂದಿಗೆ ಮಾತ್ರ ಜ್ವರ, ಕೆಮ್ಮು, ಶೀತ ಮತ್ತಿತರ ಲಕ್ಷಣಗಳಿವೆ ಎಂದು ಆರೋಗ್ಯ ಇಲಾಖೆಯೇ ಮಾಹಿತಿ ನೀಡಿತ್ತು.

ಶೀಘ್ರ ಸಾವಿರಾರು ವೈದ್ಯ ವಿದ್ಯಾರ್ಥಿಗಳು ಕೋವಿಡ್ ಕರ್ತವ್ಯಕ್ಕೆ.

ನಂತರ ಜುಲೈ ತಿಂಗಳಾದ್ಯಂತ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾದಾಗ ವಿವಿಧ ಲಕ್ಷಣಗಳಿಂದ ಸೋಂಕು ದೃಢಪಟ್ಟವರ ಸಂಖ್ಯೆಯೂ ಏರಿಕೆಯಾಗತೊಡಗಿತ್ತು. ಜುಲೈ 10ರ ವೇಳೆಗೆ ದಾಖಲಾದ 33,400ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳಲ್ಲಿ ಶೇ.20ಕ್ಕೂ ಹೆಚ್ಚು ಮಂದಿಗೆ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರಿಂದ ಲಕ್ಷಣರಹಿತರ ಪ್ರಮಾಣ ಗರಿಷ್ಠ ಶೇ.80ಕ್ಕೆ ಇಳಿಕೆಯಾಗಿತ್ತು.

ಕೊರೋನಾ ಪರೀಕ್ಷಾ ದರದಲ್ಲಿ ಭಾರಿ ಇಳಿಕೆ : ಸರ್ಕಾರದ ಆದೇಶ...

ನಂತರ ಜು.16ರ ವೇಳೆಗೆ ಶೇ.73ಕ್ಕೆ ಇಳಿಕೆಯಾದ ಎ-ಸಿಮ್ಟಮ್ಯಾಟಿಕ್‌ ಸೋಂಕಿತರ ಸಂಖ್ಯೆ ಬಳಿಕ ನಿರಂತರವಾಗಿ ಏರುಗತಿಯಲ್ಲೇ ಸಾಗಿದೆ. ಜುಲೈ 21ಕ್ಕೆ ಶೇ.76.4, ಜು.28ಕ್ಕೆ ಶೇ.77.7, ಆ.2ಕ್ಕೆ ಶೇ.81.30, ಆ.5ಕ್ಕೆ ಶೇ.83.2, ಆ.6ರ ವೇಳೆಗೆ ಶೇ.84.4, ಆ.11ಕ್ಕೆ ಶೇ.84.20ಕ್ಕೆ ಬಂದು ತಲುಪಿದೆ. ಈ ವೇಳೆಗೆ ಶೇ.16.20ರಷ್ಟುಮಂದಿಗೆ ಮಾತ್ರವೇ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಇತರೆ ಲಕ್ಷಣಗಳು ಕಂಡುಬಂದಿವೆ. ಆ ನಂತರದ ದಿನಗಳ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆಯ ವಾರ್‌ರೂಂ ಇನ್ನೂ ಪರಿಷ್ಕರಿಸಬೇಕಿದೆ.

ಚಿಕ್ಕಬಳ್ಳಾಪುರ ಕನಿಷ್ಠ, ಕೊಪ್ಪಳದಲ್ಲಿ ಗರಿಷ್ಠ

ಜಿಲ್ಲಾವಾರು ಸೋಂಕಿತರ ಪೈಕಿ ಜು.11ರ ವೇಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತೀ ಕಡಿಮೆ ಎಂದರೆ ಶೇ.1.6 ರಷ್ಟುಮಂದಿಗೆ ಮಾತ್ರ ಲಕ್ಷಣಗಳು ಕಂಡು ಬಂದಿವೆ. ಉಳಿದ ಶೇ.98.4 ಸೋಂಕಿತರಿಗೆ ಯಾವುದೇ ಲಕ್ಷಣಗಳಿಲ್ಲ. ಅದೇ ರೀತಿ ಅತೀ ಕೊಪ್ಪಳ ಜಿಲ್ಲೆಯಲ್ಲಿ ಗರಿಷ್ಠ ಶೇ.34.7 ಸೋಂಕಿತರಿಗೆ ಲಕ್ಷಣಗಳು ಕಂಡು ಬಂದರೆ, ಉಳಿದ ಶೇ.65.3 ಮಂದಿಗೆ ಲಕ್ಷಣಗಳಿಲ್ಲ.

ಇತರೆ ಜಿಲ್ಲೆಗಳ ಪೈಕಿ ಚಾಮರಾಜನಗರ, ಮಂಡ್ಯ, ಬೀದರ್‌, ಉತ್ತರ ಕನ್ನಡ, ವಿಜಯಪುರದಲ್ಲಿ ಶೇ.10ಕ್ಕಿಂತ ಕಡಿಮೆ, ಉಳಿದ ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಬಾಗಲಕೋಟೆ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಉಡುಪಿಯಲ್ಲಿ ಶೇ.20 ಕ್ಕಿಂತ ಕಡಿಮೆ, ಕೊಡಗು, ಯಾದಗಿರಿ, ತುಮಕೂರು, ರಾಯಚೂರು, ಗದಗ, ರಾಮನಗರ, ಬೆಳಗಾವಿ, ಹಾವೇರಿ, ಶಿವಮೊಗ್ಗ, ಮೈಸೂರು, ಕಲಬುರಗಿಯಲ್ಲಿ ಶೇ.30 ಕ್ಕಿಂತ ಕಡಿಮೆ, ಧಾರವಾಡ, ಚಿತ್ರದುರ್ಗ ಜಿಲ್ಲೆಗಳಲ್ಲಿ ಲಕ್ಷಣಗಳಿಲ್ಲದವರ ಪ್ರಮಾಣ ಶೇ.30ಕ್ಕಿಂತ ಹೆಚ್ಚು ಮಂದಿ ಎ-ಸಿಮ್ಟಮ್ಯಾಟಿಕ್‌ ಸೋಂಕಿತರಿದ್ದಾರೆ ಎಂದು ವಾರ್‌ ರೂಂ ಅಂಕಿ ಅಂಶಗಳು ದಾಖಲಾಗಿವೆ.