ಬೆಂಗಳೂರು (ಸೆ.01):  ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ದರ ಬಸ್‌ ಪಾಸ್‌ ಸೇರಿದಂತೆ ಯಾವುದೇ ರೀತಿಯ ಬಸ್‌ ಪಾಸ್‌ಗೆ ಸಹಾಯಧನ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸ್ಪಷ್ಟಡಿಸಿದೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ವೇತನ ಪಾವತಿಗೆ 423.065 ಕೋಟಿ ರು. ಅನುದಾನ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲಾ-ಕಾಲೇಜುಗಳು ತೆರೆದು, ವಿದ್ಯಾರ್ಥಿಗಳಿಗೆ ಉಚಿತ ಅಥವಾ ರಿಯಾಯಿತಿ ದರದ ಬಸ್‌ ಪಾಸ್‌ ನೀಡಿದರೆ, ಪಾಸ್‌ ವೆಚ್ಚವನ್ನು ಆಯಾಯ ಸಾರಿಗೆ ನಿಗಮ ಹಾಗೂ ವಿದ್ಯಾರ್ಥಿಗಳೇ ಭರಿಸಬೇಕು. ಅಂತೆಯೆ ಇತರೆ ರಿಯಾಯಿತಿ ದರದ ಬಸ್‌ ಪಾಸ್‌ಗಳಿಗೂ ಸಹ ಯಾವುದೇ ಅನುದಾನ ನೀಡುವುದಿಲ್ಲ ಎಂಬ ಷರತ್ತು ವಿಧಿಸಿ ಸಾರಿಗೆ ನಿಗಮಗಳಿಗೆ ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳ ರಿಯಾಯಿತಿ ದರ ಬಸ್‌ ಪಾಸ್‌ಗೆ ಆಯಾಯ ನಿಗಮ ಹಾಗೂ ವಿದ್ಯಾರ್ಥಿ ಶೇ.25ರಷ್ಟುಭರಿಸಿದ್ದರು. ಉಳಿದ ಶೇ.50ರಷ್ಟನ್ನು ಸರ್ಕಾರವೇ ನಿಗಮಗಳಿಗೆ ಭರಿಸುತ್ತಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ತನ್ನ ಪಾಲಿನ ಸಹಾಯ ಧನವನ್ನು ನೀಡುವುದಿಲ್ಲ ಎಂದು ಹೇಳಿದೆ.

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಬಸ್​ನಲ್ಲಿ ಉಚಿತ ಪ್ರಯಾಣ, ಕಂಡಿಷನ್ ಅಪ್ಲೈ...

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಾಗಿ ಆದಾಯ ಇಲ್ಲದೆ ನಷ್ಟದಲ್ಲಿರುವ ಸಾರಿಗೆ ನಿಗಮಗಳು, 1.30 ಲಕ್ಷ ನೌಕರರಿಗೆ ವೇತನ ಪಾವತಿಸಲು ಆರ್ಥಿಕ ನೆರವು ಕೋರಿ ಸರ್ಕಾರದ ಮೊರೆ ಹೋಗಿದ್ದವು. ಇದಕ್ಕೆ ಸ್ಪಂದಿಸಿದ್ದ ಏಪ್ರಿಲ್‌ನಿಂದ ಜುಲೈವರೆಗೂ ನೌಕರರ ವೇತನ ಪಾವತಿಗೆ 10,75 ಕೋಟಿ ರು. ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ವೇತನ ಪಾವತಿಗೆ 423.065 ಕೋಟಿ ರು ಅನುದಾನ ನೀಡಿದೆ.

ಹೊಸ ಬಸ್‌ ಖರೀದಿಗೆ ಬ್ರೇಕ್‌:

ಈ ಅನುದಾನವನ್ನು ವೇತನ ಪಾವತಿಗೆ ಮಾತ್ರ ಬಳಸಿಕೊಳ್ಳಬೇಕು. ನೌಕರರಿಗೆ ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆ ಹೆಚ್ಚಳ, ಹೆಚ್ಚುವರಿ ಅವಧಿ ಕೆಲಸದ ಭತ್ಯೆ ಸೇರಿ ಇನ್ನಿತರ ಭತ್ಯೆಯನ್ನು ನೀಡಬಾರದು ಎಂದು ಸೂಚಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಬಸ್‌ ಖರೀದಿ ಮಾಡಬಾರದು. ಬಸ್‌ಗಳ ನಿರ್ವಹಣೆ, ಬಿಡಿ ಭಾಗಗಳಿಗೆ ಕನಿಷ್ಠ ವೆಚ್ಚ ಮಾಡಬೇಕು. ನಿಗಮಗಳಲ್ಲಿ ಅನವಶ್ಯಕ ಹುದ್ದೆಗಳನ್ನು ಕಡಿತಗೊಳಿಸಿ, ಪುನರ್‌ ರಚಿಸಬೇಕು. ಸರ್ಕಾರದ ಹಾಗೂ ನಿಗಮಗಳ ಸ್ವಂತ ಹಣದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಸರ್ಕಾರ ಷರತ್ತು ವಿಧಿಸಿದೆ.