ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು[ಜ.06]: ರಾಜ್ಯ ಪೊಲೀಸ್‌ ಮಹಾನಿರ್ದೇಶಕರ (ಡಿಜಿ-ಐಜಿಪಿ) ಸೇವಾವಧಿಯನ್ನು ಎರಡು ವರ್ಷಗಳಿಗೆ ಕಾಯಂಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಸರ್ಕಾರಿ ಸೇವೆಯ 60 ವರ್ಷದ ನಿವೃತ್ತಿ ನಿಯಮವು ಡಿಜಿಪಿಗೆ ಅನ್ವಯವಾಗುವುದಿಲ್ಲ. ಹಾಗಾಗಿ ಒಮ್ಮೆ ನೇಮಕಗೊಂಡರೆ ಎರಡು ವರ್ಷಗಳ ಅಧಿಕಾರವನ್ನು ನಡೆಸಿಯೇ ಅವರು ಹುದ್ದೆಯಿಂದ ನಿರ್ಗಮಿಸಲಿದ್ದಾರೆ.

ಆಡಳಿತಾತ್ಮಕ ದೃಷ್ಟಿಯಿಂದ ಆರು ತಿಂಗಳಿಗಿಂತ ಹೆಚ್ಚು ಸೇವಾವಧಿ ಬಾಕಿ ಇರುವವರನ್ನೇ ರಾಜ್ಯ ಪೊಲೀಸ್‌ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಬೇಕೆಂದೂ, ಅವರಿಗೆ ಕನಿಷ್ಠ ಎರಡು ವರ್ಷಗಳ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದೂ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಅದರನ್ವಯ ದೇಶದ ಇತರೆ 10ಕ್ಕೂ ಹೆಚ್ಚು ರಾಜ್ಯಗಳು ಈಗಾಗಲೇ ಡಿಜಿಪಿ ನೇಮಕಾತಿಯಲ್ಲಿ ಹೊಸ ನಿಯಮ ಜಾರಿಗೊಳಿಸಿವೆ. ಈಗ ಕರ್ನಾಟಕವು ಸಹ ಸುಪ್ರೀಂಕೋರ್ಟ್‌ನ ಆದೇಶ ಪಾಲನೆಗೆ ಮುಂದಾಗಿದೆ ಎನ್ನಲಾಗಿದೆ.

ಸೂದ್‌-ಪ್ರಸಾದ್‌ ನಡುವೆ ಅದೃಷ್ಟ ಯಾರಿಗೆ?:

ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರು ಜನವರಿ 31ರಂದು ನಿವೃತ್ತರಾಗಲಿದ್ದಾರೆ. ಅವರ ಉತ್ತರಾಧಿಕಾರಿ ಆಯ್ಕೆಗೆ ರಾಜ್ಯ ಸರ್ಕಾರ ಕಸರತ್ತು ಆರಂಭಿಸಿದೆ. ಈಗಾಗಲೇ ಕೇಂದ್ರ ಲೋಕಸೇವಾ ಆಯೋಗಕ್ಕೆ ಡಿಜಿ-ಐಜಿಪಿ ಹುದ್ದೆಗೆ ಅರ್ಹತೆ ಹೊಂದಿರುವ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ಹೆಸರು ಕಳುಹಿಸಲಾಗಿದ್ದು, ಜ.30ರಂದು ಹೆಸರು ಅಖೈರುಗೊಳ್ಳಬಹುದು ಎಂದು ತಿಳಿದು ಬಂದಿದೆ.

ಸದ್ಯ ಸೇವಾ ಹಿರಿತನದ ಆಧಾರದ ಮೇರೆಗೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ 1985ನೇ ಬ್ಯಾಚ್‌ನ ಅಶಿತ್‌ ಮೋಹನ್‌ ಪ್ರಸಾದ್‌, ಸಿಐಡಿ ಡಿಜಿಪಿ 1986ನೇ ಸಾಲಿನ ಪ್ರವೀಣ್‌ ಸೂದ್‌ ಹಾಗೂ ನೇಮಕಾತಿ ವಿಭಾಗದ ಡಿಜಿಪಿ 1986ರ ಬ್ಯಾಚ್‌ನ ಪಿ.ಕೆ. ಗರ್ಗ್‌ ಅರ್ಹತೆ ಹೊಂದಿದ್ದಾರೆ. ಈ ಮೂವರ ಪೈಕಿ ಎ.ಎಂ. ಪ್ರಸಾದ್‌ ಅವರು 9 ತಿಂಗಳ ಸೇವಾವಧಿ ಹೊಂದಿದ್ದು, ಇದೇ ವರ್ಷದ ಅಕ್ಟೋಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಸೂದ್‌ ಅವರಿಗೆ ನಾಲ್ಕು ವರ್ಷಗಳ ಸೇವಾವಧಿ ಇದೆ. ಹೀಗಾಗಿ ಡಿಜಿಪಿ ಹುದ್ದೆಗೆ ಈ ಇಬ್ಬರ ಹೆಸರುಗಳು ಮುಂಚೂಣಿಯಲ್ಲಿವೆ.

ಹೊಸ ನಿಯಮವು ಅನುಷ್ಠಾನಗೊಂಡರೆ ಎ.ಎಂ.ಪ್ರಸಾದ್‌ ಅವರು ಎರಡು ವರ್ಷ ಡಿಜಿಪಿ ಹುದ್ದೆಯಲ್ಲಿ ಅಧಿಕಾರ ನಡೆಸಲು ಸಾಧ್ಯವಿದೆ. ಆದರೆ ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಗುಪ್ತದಳ ಮುಖ್ಯಸ್ಥರಾಗಿ ಅವರು ಕೆಲಸ ಮಾಡಿದ್ದರು. ಹಾಗಾಗಿ ಕಾಂಗ್ರೆಸ್‌ ನಾಯಕರಿಗೆ ಆಪ್ತರಾಗಿದ್ದಾರೆ ಎಂಬುದು ಅವರಿಗೆ ಹಿನ್ನಡೆ ತರಬಹುದು. ಹೀಗಿದ್ದರೂ ಪಶ್ಚಿಮ ವಲಯ ಐಜಿಪಿಯಾಗಿ ಕೆಲಸ ಮಾಡಿದ್ದ ಪ್ರಸಾದ್‌ ಅವರು ಆಗಿನ ಕರಾವಳಿ ಭಾಗದ ಸಂಪರ್ಕದ ಮೂಲಕ ಹುದ್ದೆಗೆ ಪ್ರಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಪ್ರವೀಣ್‌ ಸೂದ್‌ ಅವರು ಪೊಲೀಸ್‌ ಇಲಾಖೆಯ ಆಡಳಿತಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಖ್ಯಾತಿ ಹೊಂದಿದ್ದಾರೆ. ಪೊಲೀಸ್‌ ನೇರ ನೇಮಕಾತಿ, ಅಪರಾಧ ಪ್ರಕರಣಗಳ ತನಿಖೆ ಕುರಿತು ಮಾಹಿತಿ ನೀಡುವ ಎಸ್‌ಎಂಎಸ್‌ ಸೇವೆ ಹಾಗೂ ಸೈಬರ್‌ ಪ್ರಕರಣಗಳ ಪತ್ತೆಗೆ ಸೈಬರ್‌ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಹಿಂದೆ ಪ್ರವೀಣ್‌ ಸೂದ್‌ ಅವರ ಶ್ರಮವಿದೆ. ಅಲ್ಲದೆ ನಾಲ್ಕು ವರ್ಷಗಳ ಸೇವಾವಧಿ ಹೊಂದಿರುವ ಕಾರಣ ಡಿಜಿಪಿ ಹುದ್ದೆಯಲ್ಲಿ ಸುದೀರ್ಘಾವಧಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಿದರೆ ಇಲಾಖೆಯ ಸುಧಾರಣೆಗೆ ಅವಕಾಶವಾಗಲಿದೆ ಎಂದು ಅವರು ವಾದ ಮಂಡಿಸಿದ್ದಾರೆ. ಅಲ್ಲದೆ, ಸರ್ಕಾರದ ಮಟ್ಟದಲ್ಲಿರುವ ಸ್ನೇಹ ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನ ನಡೆದಿದೆ ಎನ್ನಲಾಗಿದೆ.

ಏಕೆ ಈ ಚಿಂತನೆ?

- ಡಿಜಿಪಿಯಾದವರಿಗೆ ಕನಿಷ್ಠ 2 ವರ್ಷ ಸೇವೆ ಅವಕಾಶ ಕಲ್ಪಿಸಲು ಸುಪ್ರೀಂಕೋರ್ಟ್‌ ಸೂಚಿಸಿದೆ

- 6 ತಿಂಗಳಿಗಿಂತ ಹೆಚ್ಚು ಸೇವಾವಧಿ ಇರುವವರನ್ನು ನೇಮಿಸಬೇಕು ಎಂದು ನಿರ್ದೇಶನ ನೀಡಿದೆ

- ಡಿಜಿಪಿ ನೇಮಕಾತಿಯಲ್ಲಿ 10ಕ್ಕೂ ಹೆಚ್ಚು ರಾಜ್ಯಗಳು ಈಗಾಗಲೇ ಈ ನಿಯಮ ಪಾಲಿಸುತ್ತಿವೆ

- ಕರ್ನಾಟಕ ಕೂಡ ಇದೀಗ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಪಾಲಿಸಲು ಮುಂದಾಗಿದೆ