ಬೆಂಗಳೂರು :  ಪ್ಯಾನಿಕ್‌ ಬಟನ್‌ ಮತ್ತು ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಉಪಕರಣ ಅಳವಡಿಸದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹೊಸ ವಾಹನಗಳ ನೋಂದಣಿಯನ್ನು ಸಾರಿಗೆ ಇಲಾಖೆ ತಡೆ ಹಿಡಿದಿದೆ. ಇದು ವಾಹನ ಮಾಲಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2019ರ ಜ.1ರಿಂದ ದೇಶಾದ್ಯಂತ ನೋಂದಣಿಯಾಗುವ ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಲ್ಲಿ ಈ ಎರಡು ಉಪಕರಣ ಅಳವಡಿಕೆ ಕಡ್ಡಾಯಗೊಳಿಸಿದೆ. ಇದರ ಅನ್ವಯ ಸಾರಿಗೆ ಇಲಾಖೆಯು ರಾಜ್ಯದ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ಪ್ಯಾನಿಕ್‌ ಬಟನ್‌ ಮತ್ತು ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಅಳವಡಿಸದ ಸುಮಾರು ಒಂದು ಸಾವಿರ ಹೊಸ ವಾಹನಗಳ ನೋಂದಣಿ ತಡೆ ಹಿಡಿದಿದೆ.

ಯಾವುದೇ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದರೆ ಕೊಂಚ ಕಾಲಾವಕಾಶ ಬೇಕಾಗುತ್ತದೆ. ಸಾರಿಗೆ ಇಲಾಖೆ ತರಾತುರಿಯಲ್ಲಿ ಕೇಂದ್ರದ ಅಧಿಸೂಚನೆ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ. ಕೇಂದ್ರದ ಈ ಅಧಿಸೂಚನೆಯನ್ನು ದೇಶದ 12 ರಾಜ್ಯಗಳು ಮಾತ್ರ ಒಪ್ಪಿವೆ. ಕೇಂದ್ರದ ಯಾವುದೇ ನಿಯಮ, ನೀತಿಗಳು ಇಡೀ ದೇಶಕ್ಕೆ ಅನ್ವಯವಾಗಬೇಕು. ಹೀಗಿರುವಾಗ ರಾಜ್ಯ ಸಾರಿಗೆ ಇಲಾಖೆ ಅಧಿಸೂಚನೆಯ ಅನುಷ್ಠಾನಕ್ಕೆ ಆತುರ ಬೀಳುವುದು ಸರಿಯಲ್ಲ. 

ಅಲ್ಲದೆ, ಪ್ಯಾನಿಕ್‌ ಬಟನ್‌ ಮತ್ತು ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ನಿರ್ವಹಣೆಗೆ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯಗಳಿಲ್ಲ. ನಿರ್ವಹಣೆಗೆ ಬಿಎಸ್‌ಎನ್‌ಎಲ್‌ ಹೊಸ ವೆಬ್‌ಪೋರ್ಟಲ್‌ ಸಿದ್ಧಪಡಿಸಿದೆಯಾದರೂ ನೆಟ್‌ವರ್ಕ್ ಸಮಸ್ಯೆಯಿದೆ. ಹೀಗಿರುವಾಗ ಹೊಸ ವಾಹನಗಳ ನೋಂದಣಿ ತಡೆ ಹಿಡಿಯುವುದು ಸರಿಯಲ್ಲ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದರು.

ಕೇಂದ್ರದ ಅಧಿಸೂಚನೆಯನ್ನು ಕಾನೂನಾತ್ಮಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಯಾನಿಕ್‌ ಬಟನ್‌ ಮತ್ತು ಟ್ರ್ಯಾಕಿಂಗ್‌ ಸಿಸ್ಟಂ ಅಳವಡಿಸದ ಹೊಸ ವಾಹನಗಳ ನೋಂದಣಿ ತಡೆಹಿಡಿಯಲಾಗಿದೆ. ವಾಹನ ಮಾಲಿಕರ ಸಂಘಟನೆಗಳು ಉಪಕರಣ ಅಳವಡಿಕೆಗೆ ಕಾಲಾವಕಾಶಕ್ಕೆ ಮನವಿ ಮಾಡಿವೆ. ಈ ಸಂಬಂಧ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.