‘ನನಗೆ ಯಾವುದೇ ಮಾಹಿತಿ ಇಲ್ಲ... ನನ್ನ ಬಾಮೈದ (ಮಲ್ಲಿಕಾರ್ಜುನಸ್ವಾಮಿ) ಜತೆ ಯಾವುದೇ ಹಣಕಾಸು ವ್ಯವಹಾರ ಇಲ್ಲ... ನನ್ನ ಪತ್ನಿಗೆ ನಿವೇಶನ ನೀಡುವಂತೆ ಯಾವುದೇ ಅಧಿಕಾರಿಗಳಿಗೂ ಶಿಫಾರಸ್ಸು ಮಾಡಿಲ್ಲ... ಜಮೀನಿಗೆ ಭೇಟಿ ನೀಡಿಲ್ಲ...!’ 

ಬೆಂಗಳೂರು (ಫೆ.26): ‘ನನಗೆ ಯಾವುದೇ ಮಾಹಿತಿ ಇಲ್ಲ... ನನ್ನ ಬಾಮೈದ (ಮಲ್ಲಿಕಾರ್ಜುನಸ್ವಾಮಿ) ಜತೆ ಯಾವುದೇ ಹಣಕಾಸು ವ್ಯವಹಾರ ಇಲ್ಲ... ನನ್ನ ಪತ್ನಿಗೆ ನಿವೇಶನ ನೀಡುವಂತೆ ಯಾವುದೇ ಅಧಿಕಾರಿಗಳಿಗೂ ಶಿಫಾರಸ್ಸು ಮಾಡಿಲ್ಲ... ಜಮೀನಿಗೆ ಭೇಟಿ ನೀಡಿಲ್ಲ...!’ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ವಿಚಾರದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರ ಕೇಳಿದ 30 ಪ್ರಶ್ನೆಗಳ ಪೈಕಿ ಬಹುತೇಕ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳು ಇದಾಗಿವೆ.

ಲೋಕಾಯುಕ್ತ ಪೊಲೀಸರ ಮುಂದೆ ನೀಡಿರುವ ಹೇಳಿಕೆಯ ಪ್ರತಿ ಲಭ್ಯವಾಗಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂಬ ಉತ್ತರವನ್ನು ನೀಡಿರುವುದು ಗೊತ್ತಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಿರುವ ವಿಚಾರ ನನಗೆ ಗೊತ್ತಿರಲಿಲ್ಲ. 2013ನೇ ಸಾಲಿನ ಮಧ್ಯಭಾಗದಲ್ಲಿ ನನ್ನ ಪತ್ನಿ (ಪಾರ್ವತಿ) ದಾನವಾಗಿ ನೀಡಿರುವ ಬಗ್ಗೆ ನನಗೆ ತಿಳಿಸಿದರು. ಜಮೀನು ಖರೀದಿಸುವ ವೇಳೆ ಹಣಕಾಸಿನ ಸಹಾಯ ಮಾಡಿಲ್ಲ. ಅಲ್ಲದೇ, ಅವರು ಸಹ ಕೇಳಿರಲಿಲ್ಲ. ಜಮೀನಿನ ಮಾಲೀಕತ್ವ ಯಾರಿಂದ ಯಾರ ಹೆಸರಿಗೆ ಬದಲಾಯಿತು ಎಂಬ ವಿಚಾರ ಸಹ ನನಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮರಾಠಿ ಪುಂಡರ ವಿರುದ್ಧ ಕನ್ನಡಿಗರ ಆಕ್ರೋಶ: ಗಡೀಪಾರಿಗೆ ಸರ್ಕಾರಕ್ಕೆ ಕರವೇ ಒತ್ತಾಯ

ಜಮೀನಿನ ಮೂಲ ಮಾಲೀಕ ದೇವರಾಜು ಪರಿಚಯ ಇಲ್ಲ. 1998ರಲ್ಲಿ ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವ ಸಂಬಂಧ ಅರ್ಜಿ ನೀಡಿರುವ ವಿಚಾರದ ಬಗ್ಗೆಯೂ ಮಾಹಿತಿ ಇಲ್ಲ. 2014ನೇ ಸಾಲಿನಲ್ಲಿ ಪತ್ನಿಯು ಜಮೀನನ್ನು ಮುಡಾ ಅಭಿವೃದ್ಧಿ ಪಡಿಸಿರುವ ಮಾಹಿತಿ ನೀಡಿದರು. ಆಗ ಮುಖ್ಯಮಂತ್ರಿಯಾಗಿದ್ದು, ಯಾವುದೇ ಸೂಚನೆಗಳನ್ನು ಪತ್ನಿಗೆ ನೀಡಿರಲಿಲ್ಲ. ಪತ್ನಿಗೆ ಲಭ್ಯವಾದ ಜಮೀನಿಗೆ ಯಾವಾಗಲೂ ಭೇಟಿ ನೀಡಿಲ್ಲ. ಜಮೀನಿಗೆ ಪರಿಹಾರವಾಗಿ ಬದಲಿ ನಿವೇಶನ ನೀಡುವ ಕುರಿತು ಅರ್ಜಿ ಸಲ್ಲಿಕೆ ಬಗ್ಗೆ ನನಗೆ ಗೊತ್ತಿಲ್ಲ. ಪ್ರಕರಣ ಬೆಳಕಿಗೆ ಬರುವವರೆಗೆ ಬಹಳಷ್ಟು ವಿಷಯಗಳು ನನಗೆ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.

ಮುಡಾದಿಂದ ಬದಲಿ ಜಮೀನು ನೀಡುವ ಸಂಬಂಧ ನಿರ್ಣಯ ಕೈಗೊಂಡಿರುವ ವಿಚಾರವನ್ನು ಆಗಿನ ಅಧ್ಯಕ್ಷರಾಗಿದ್ದ ದೃವಕುಮಾರ್ ತಿಳಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದರಿಂದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. 2020ನೇ ಸಾಲಿನಲ್ಲಿ ಪ್ರತಿಪಕ್ಷ ನಾಯಕನಾಗಿದ್ದು, ಆ ವೇಳೆ ನನ್ನ ಮಗ ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿದ್ದರು. ಹೀಗಾಗಿ ಸಹಜವಾಗಿ ಸದಸ್ಯರಾಗಿದ್ದರು. ಈ ನಡುವೆ, 14 ನಿವೇಶನಗಳನ್ನು ಮುಡಾದಿಂದ ಪತ್ನಿಗೆ ನೋಂದಣಿಯಾದ ಬಳಿಕ ಈ ವಿಷಯ ಪತ್ನಿಯಿಂದಲೇ ಗೊತ್ತಾಯಿತು. ನಿವೇಶನಗಳನ್ನು ಯಾವ ಬಡಾವಣೆಯಲ್ಲಿ ನೀಡಲಾಗಿತ್ತು ಎಂಬುದು ಆ ಸಂದರ್ಭದಲ್ಲಿ ನನಗೆ ತಿಳಿದಿರಲಿಲ್ಲ. ನಂತರ ಈ ವಿಚಾರ ತಿಳಿದುಬಂದಿದ್ದು, 14 ನಿವೇಶನಗಳಿಗೆ ಎಂದಿಗೂ ಭೇಟಿ ನೀಡಿಲ್ಲ. ಮುಡಾದ ಯಾವುದೇ ಅಧಿಕಾರಿಗಳು ಸಹ ನನ್ನನ್ನುಸಂಪರ್ಕಿಸಿಲ್ಲ ಎಂದಿದ್ದಾರೆ.

ವರದಿ ಹಿಡಿದು ಅಳ್ಳಾಡಿಸುತ್ತಿದ್ದೀರಾ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್‌

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಜಮೀನನ್ನು ಉಪಯೋಗಿಸಿದ ಪ್ರಕರಣದಲ್ಲಿ 50:50ರ ಅನುಪಾತದಲ್ಲಿ ನಿವೇಶನ ನೀಡುವ ಬಗ್ಗೆ ಕೈಗೊಂಡ ನಿರ್ಣಯವನ್ನು ಸರ್ಕಾರ ರದ್ದು ಮಾಡಿರುವ ನಡಾವಳಿಯನ್ನು ನಗರಾಭಿವೃದ್ಧಿ ಇಲಾಖೆಯವರು ಮಾಡಿರಬಹುದು. ಆದರೆ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇನ್ನು, ಪರಿಹಾರವಾಗಿ ನೀಡಿದ್ದ 14 ನಿವೇಶನಗಳನ್ನು ಹಿಂತಿರುಗಿಸುವ ವಿಚಾರ ನನ್ನ ಪತ್ನಿಯೇ ಕೈಗೊಂಡ ನಿರ್ಣಯವಾಗಿದೆ ಎಂದು ಹೇಳಿಕೆ ನೀಡಲಾಗಿದೆ. ಮುಡಾಕ್ಕೆ ನೀಡಿರುವ ಅರ್ಜಿಯಲ್ಲಿ ವೈಟ್ನರ್‌ ಹಾಕಿರುವ ವಿಚಾರ ಗೊತ್ತಿಲ್ಲ. 14 ನಿವೇಶನಗಳನ್ನು ನೋಂದಣಿ ಮಾಡಿಸಿಕೊಳ್ಳುವ ಸಂಬಂಧ ಖಾಸಗಿ ಹಾಜರಾತಿ ಪಡೆದು ಸರ್ಕಾರ ಅತಿಥಿ ಗೃಹ ಪಡೆದಿರುವ ಬಗ್ಗೆಯೂ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.