Asianet Suvarna News Asianet Suvarna News

Omicron ಆತಂಕ, ರಾಜ್ಯದಲ್ಲಿ ಲಾಕ್‌ಡೌನ್ ಇರುತ್ತಾ? ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ!

* ಲಾಕ್‌ಡೌನ್‌ ಪ್ರಸ್ತಾಪ ಇಲ್ಲ - ಬೊಮ್ಮಾಯಿ, ಸುಧಾಕರ್‌ ಸ್ಪಷ್ಟನೆ

* ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ

* ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ, ತೀವ್ರ ನಿಗಾ ವಹಿಸಿದ್ದೇವೆ: ಸರ್ಕಾರದ ಅಭಯ

* ಸರ್ಕಾರದಿಂದ ಇಂದು ಸಭೆ:ನಿರ್ಬಂಧ ಬಗ್ಗೆ ನಿರ್ಧಾರ?

No proposal to impose lockdown says Karnataka CM Bommai amid Omicron threat pod
Author
Bangalore, First Published Nov 30, 2021, 6:39 AM IST
  • Facebook
  • Twitter
  • Whatsapp

ತುಮಕೂರು(ನ.30): ಕೋವಿಡ್‌ ಮೂರನೇ ಅಲೆ (Third Covid Wave) ಮತ್ತು ಒಮಿಕ್ರೋನ್‌ ರೂಪಾಂತರಿ ವೈರಸ್‌ (Omicron Mutant Virus) ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ (Lockdown) ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavarj Bommai) ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ. ಸುಮ್ಮನೆ ಜನರಲ್ಲಿ ಗೊಂದಲ ಮೂಡಿಸಬಾರದು. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ತಪ್ಪು ದಾರಿಗೆ ಎಳೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ (Dr K Sudhakar) ಎಚ್ಚರಿಸಿದ್ದಾರೆ.

ಸೋಮವಾರ ತುಮಕೂರು ಮತ್ತು ದಾವಣಗೆರೆ ನಗರಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಒಮಿಕ್ರೋನ್‌ ರೂಪಾಂತರಿ ವೈರಸ್‌ (Mmicron Mutant Virus) ಬಗ್ಗೆ ಗಾಬರಿ ಬೇಡ. ತೀವ್ರ ನಿಗಾ ವಹಿಸಿದ್ದು, ಕಂಟೈನ್ಮೆಂಟ್‌ ಜೋನ್‌ ಮಾಡುವ ಮೂಲಕ ನಿಯಂತ್ರಣದಲ್ಲಿಡಲು ಯತ್ನಿಸಲಾಗುವುದು ಎಂದರು.

ಜನರು ಹೆಚ್ಚು ಹೆಚ್ಚಾಗಿ ಗುಂಪು ಸೇರುವುದನ್ನು ತಡೆಯಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಸರ್ಕಾರ ನಿರಂತರವಾಗಿ ತಜ್ಞರು, ಕೇಂದ್ರ ಸರ್ಕಾರದ ಸಂಪರ್ಕದಲ್ಲಿದೆ. ಕಾಲ ಕಾಲಕ್ಕೆ ಕೇಂದ್ರ ಸರ್ಕಾರವು ನೀಡುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು. ಒಮಿಕ್ರೋನ್‌ ಬಗ್ಗೆ ಜನತೆ ಗಾಬರಿಪಡದೆ, ಭಯಪಡದೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಕಡ್ಡಾಯ ಪಾಲಿಸಬೇಕು ಎಂದು ಸೂಚಿಸಿದರು.

ಮುಂಜಾಗ್ರತಾ ಕ್ರಮ:

ಕೊರೋನಾ ವೈರಸ್‌ನ ಹೊಸ ರೂಪಾಂತರ ತಳಿಯ ಬಗ್ಗೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನಗಳಂತೆ ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಒಮಿಕ್ರೋನ್‌ ಕಂಡುಬಂದ ದೇಶಗಳಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ಅಂತಹವರ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷಿಸಲಾಗುತ್ತಿದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲೂ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಲಾಗುತ್ತಿದೆ. ನೆಗೆಟಿವ್‌ ವರದಿ ಇದ್ದರೂ, ಮತ್ತೊಮ್ಮೆ ತಪಾಸಣೆ ಮಾಡಿ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಅಗತ್ಯಬಿದ್ದರೆ ಅಂತಹವರ ಕ್ವಾರಂಟೈನ್‌ಗೂ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಇನ್ನು ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ವಿಭಿನ್ನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆಂದು ಐಸಿಎಂಆರ್‌ಗೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಯಾವ ತಳಿ ಎಂಬುದು ಸ್ಪಷ್ಟವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆತಂಕ ಬೇಕಿಲ್ಲ-ಸುಧಾಕರ್‌:

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್‌, ರಾಜ್ಯದಲ್ಲಿ ಹೊಸ ತಳಿಯ ಸೋಂಕು ಪತ್ತೆಯಾಗಿಲ್ಲ. ಸೋಂಕಿನ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿಲ್ಲ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರೀತಿಯ ಎಚ್ಚರಿಕೆ ವಹಿಸುತ್ತಿದ್ದೇವೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಈಗಾಗಲೇ ಕೊರೋನಾದಿಂದ ಜನರು ನೊಂದಿದ್ದು, ಬಹಳ ನಷ್ಟಅನುಭವಿಸಿದ್ದಾರೆ. ಆದ್ದರಿಂದ ಜನರು ಆತಂಕಕ್ಕೆ ಒಳಗಾಗುವಂತೆ ಮಾಡಬಾರದು. ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಬಾರದು. ಲಾಕ್‌ಡೌನ್‌ ಹೆಸರಿನಲ್ಲಿ ಹೆದರಿಸುವ ಕೆಲಸ ಆಗಬಾರದು. ಆದರೆ ವೈರಾಣು ಕುರಿತು ಜಾಗೃತಿ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಎಂದರು.

ಶಾಲೆ-ಕಾಲೇಜು ಮುಚ್ಚಲು ತಿಳಿಸಿಲ್ಲ: ಸಿಎಂ

ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದ್ದು, ಯಾವುದೇ ಶಾಲಾ-ಕಾಲೇಜು ಮುಚ್ಚಲು ತಿಳಿಸಿಲ್ಲ ಎಂದೂ ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಕೇರಳ ವಿದ್ಯಾರ್ಥಿಗಳು ಹಾಗೂ ಇತರೆ ಜನರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. ಬಂದ 7 ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಿಸಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಈಗ ತಮಿಳುನಾಡು, ಗೋವಾ ಗಡಿಯಲ್ಲೂ ತೀವ್ರ ಕಟ್ಟೆಚ್ಚರ

ಬೆಂಗಳೂರು: ಒಮಿಕ್ರೋನ್‌ ರೂಪಾಂತರಿ ಹಿನ್ನೆಲೆಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ಸಾರಿರುವ ಸರ್ಕಾರ ಇದೀಗ ಅದನ್ನು ತಮಿಳುನಾಡು ಹಾಗೂ ಗೋವಾ ಗಡಿಗೂ ವಿಸ್ತರಣೆ ಮಾಡಿದೆ. ನೆರೆ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದ್ದು, ಕೋವಿಡ್‌ ನೆಗೆಟಿವ್‌ ವರದಿ ಇದ್ದವರನ್ನು ಮಾತ್ರ ರಾಜ್ಯ ಪ್ರವೇಶಿಸಲು ಬಿಡಲಾಗುತ್ತಿದೆ. ಪ್ರಯಾಣಿಕರ ಪ್ರತಿ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.

2ನೇ ಅಲೆ ರೀತಿ ನಿರ್ಲಕ್ಷ್ಯ ಬೇಡ

ಕೊರೋನಾ 2ನೇ ಅಲೆ ನಿರ್ಲಕ್ಷಿಸಿದ ಪರಿಣಾಮ ಅನೇಕ ಸಾವು ಸಂಭವಿಸಿದವು. ರಾಜ್ಯಕ್ಕೆ 3ನೇ ಅಲೆ ಸದ್ಯ ಬಂದಿಲ್ಲ. ಅದು ಬಾರದಂತೆ ಈಗಲೇ ಎಚ್ಚರಿಕೆ ವಹಿಸಬೇಕಾಗಿರುವುದು ಸರ್ಕಾರದ ಕರ್ತವ್ಯ.

- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಎಚ್ಚರ ತಪ್ಪುವುದು ಬೇಡ

ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ, ಬದುಕುಳಿಯಲು ಪ್ರಾಣವಾಯುವೂ ಸಿಗದೆ ಉಸಿರು ಚೆಲ್ಲಿದ ಜೀವಗಳನ್ನು ನೆನೆಸಿಕೊಂಡರೆ ಕಣ್ಣುಗಳು ಕಟ್ಟೆಯೊಡೆಯುತ್ತವೆ. ಅಂತಹ ಸಾವಿನ ಮೆರವಣಿಗೆ ಮತ್ತೆ ಬೇಡ. ಯಾರೂ ಎಚ್ಚರ ತಪ್ಪುವುದು ಬೇಡ.

- ಎಚ್‌.ಡಿ.ಕುಮಾರಸ್ವಾಮಿ ಮಾಜಿ ಸಿಎಂ

Follow Us:
Download App:
  • android
  • ios