ಬೆಂಗಳೂರು(ಜು.23): ‘ಕಾವೇರಿ ಕೂಗು’ ಅಭಿಯಾನ ಯೋಜನೆಯ ಪ್ರಸ್ತಾವನೆಗೆ ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಕಾವೇರಿ ಕೂಗು ಅಭಿಯಾನದ ಮೂಲಕ ಸಾರ್ವಜನಿಕರಿಂದ ಕೋಟ್ಯಂತರ ಹಣ ಸಂಗ್ರಹಿಸಲಾಗುತ್ತಿದೆ ಎಂದು ಪ್ರಶ್ನಿಸಿ ವಕೀಲ ಎ.ವಿ ಅಮರನಾಥನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಸ್ಪಷ್ಟನೆ ನೀಡಿತು.

ಕಾವೇರಿ ಕೂಗು ಹೆಸರಲ್ಲಿ ಎಷ್ಟು ಹಣ ಸಂಗ್ರಹಿಸಿದ್ದೀರಿ? ವಿವರ ಕೊಡಲೇಬೇಕು

ವಿಚಾರಣೆ ವೇಳೆ ರಾಜ್ಯ ಸರ್ಕಾರಿ ವಕೀಲರು, ‘ಕಾವೇರಿ ಕೂಗು ಅಭಿಯಾನದಡಿ ಯೋಜನೆ ರೂಪಿಸಿರುವ ಈಶಾ ಸಂಸ್ಥೆಯವರು ಅನುಮತಿ ಕೇಳಿ ಕಳೆದ 2019ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಯೋಜನಾ ವರದಿ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚಿಸಿ, ಅನುಮತಿ ನಿರಾಕರಿಸಲಾಗಿದೆ’ ಎಂದು ತಿಳಿಸಿದರು.

ಅಲ್ಲದೆ, ‘ಕಾವೇರಿ ನದಿ ತಪ್ಪಲಿನ ಪ್ರದೇಶಗಳಲ್ಲಿ ರೈತರ ಸಹಯೋಗದೊಂದಿಗೆ ಗಿಡ ನೆಡಲು ಅರಣ್ಯ ಇಲಾಖೆ ರೂಪಿಸಿರುವ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ 28 ಕೋಟಿ ಹಣ ಮೀಸಲಿಡಲಾಗಿದೆ. ಇದರಲ್ಲಿ ಈಗಾಗಲೇ ಎಂಟು ಕೋಟಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಜುಲೈ 1ರಂದು ಸಲ್ಲಿಸಲಾದ ಲಿಖಿತ ಆಕ್ಷೇಪಣಾ ಪತ್ರದಲ್ಲಿ ವಿವರಿಸಲಾಗಿದೆ’ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾವೇರಿ ಕೂಗು ಅಭಿಯಾನ ಸರ್ಕಾರದ್ದು ಎಂದು ಈಶಾ ಫೌಂಡೇಷನ್‌ ಹೇಳಿಕೊಳ್ಳುತ್ತಿದೆ. ಅದರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ?’ ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರಿ ವಕೀಲರು, ‘ಯೋಜನೆ ಸರ್ಕಾರದಲ್ಲ ಮತ್ತು ಯೋಜನೆಗೆ ಸರ್ಕಾರ ಒಪ್ಪಿಗೆಯೂ ನೀಡಿಲ್ಲ’ ಎಂದು ತಿಳಿಸಿದರು.

ಕಾವೇರಿ ಕೂಗು ಅಭಿಯಾನಕ್ಕೆ ಟೈಟಾನಿಕ್‌ ಹೀರೋ ಡಿಕ್ಯಾಪ್ರಿಯೋ ಬೆಂಬಲ!

ಫೌಂಡೇಷನ್‌ ಪರ ವಕೀಲರು, ಕಾವೇರಿ ಕೂಗು ಸರ್ಕಾರದ ಯೋಜನೆಯೆಂದು ಫೌಂಡೇಷನ್‌ ಎಲ್ಲೂ ಹೇಳಿಕೊಂಡಿಲ್ಲ. ಅದು ಫೌಂಡೇಷನ್‌ನ ಖಾಸಗಿ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ, ಸರ್ಕಾರ ನೀಡಿರುವ ಮಾಹಿತಿಯಲ್ಲಿ ಹಲವು ಗೊಂದಲಗಳಿವೆ. ಹೀಗಾಗಿ, ಸ್ಪಷ್ಟಮತ್ತು ಸಮಗ್ರ ಆಕ್ಷೇಪಣಾ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತು.