ಬೆಂಗಳೂರು (ನ.24):  ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕೋಟ್ಯಂತರ ರು. ಲಂಚ ಪಡೆದ ಆರೋಪದ ಮೇಲೆ ಸಿಬಿಐನಿಂದ ಬಂಧನವಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌ ಈಗ ಕಾಂಗ್ರೆಸ್‌, ಬಿಜೆಪಿ ಯಾರಿಗೂ ಬೇಡವಾಗಿದ್ದಾರೆ. ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ, ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದರೆ, ಬಿಜೆಪಿ ಸಚಿವರು ಬೇಗ್‌ ಬಂಧನ ಕಾನೂನು ಪ್ರಕ್ರಿಯೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿ, ಬೇಗ್‌ ಬಂಧನ ಕಾನೂನಾತ್ಮಕವಾಗಿ ನಡೆದಿದೆ. ಸತ್ಯವನ್ನು ಬೆಳಕಿಗೆ ತರುವ ಪ್ರಯತ್ನ ನಡೆದಿದ್ದು ಸತ್ಯಾಸತ್ಯತೆ ನೋಡಿ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರೋಷನ್ ಬೇಗ್ ನಿವಾಸದ ಮೇಲೆ ಇಂದು ಬೆಳಿಗ್ಗೆ ಸಿಬಿಐ ದಾಳಿ ...

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಬೇಗ್‌ ಬಂಧನ ಕಾನೂನು ಪ್ರಕ್ರಿಯೆ. ಇಡಿ, ಸಿಬಿಐ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಬಂಧನ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಿಲ್ಲ. ಇದು ಕಾನೂನು ಪ್ರಕ್ರಿಯೆಯಾಗಿದೆ. ತನಿಖೆ ನಡೆಯುತ್ತಿದೆ. ಆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಬೇಗ್‌ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ. ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಅವರು ಹಗರಣದಲ್ಲಿ ಭಾಗಿಯಾದ ಬಗ್ಗೆ ನನಗೆ ತಿಳಿದಿಲ್ಲ. ತನಿಖೆ ಎದುರಿಸಲಿ, ನಿರಪರಾಧಿಯಾಗಿದ್ದರೆ ತನಿಖೆ ವೇಳೆ ತಿಳಿದು ಬರಲಿದೆ ಎಂದು ತಿಳಿಸಿದರು.