Asianet Suvarna News

ಮೃಗಾಲಯಗಳಲ್ಲಿ ಪ್ರಾಣಿಗಳ ಸಾಕಲು ದುಡ್ಡಿಲ್ಲ!

ಮೃಗಾಲಯಗಳಲ್ಲಿ ಪ್ರಾಣಿಗಳ ಸಾಕಲು ದುಡ್ಡಿಲ್ಲ!| ಕೋರಿ​ಕೆ- ರಾಜ್ಯದ ಎಲ್ಲಾ 9 ಮೃಗಾಲಯಗಳಿಗೆ ಪ್ರವಾಸಿಗರಿಲ್ಲದೆ ಆರ್ಥಿಕ ಸಂಕಷ್ಟ| ದೇಣಿಗೆ ನೀಡಲು ಮನವಿ

No Money To Take care of animals which are in zoo in karnataka Economic crisis
Author
Bangalore, First Published May 9, 2020, 10:04 AM IST
  • Facebook
  • Twitter
  • Whatsapp

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಮೇ.09): ಕೊರೋನಾ ಲಾಕ್‌ಡೌನ್‌ ಎಫೆಕ್ಟ್ ಮೃಗಾಲಯಗಳಲ್ಲಿನ ವನ್ಯಜೀವಿಗಳಿಗೂ ತಟ್ಟಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿರುವ ಒಂಬತ್ತು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ ಮತ್ತು ಪೋಷಣೆಗೆ ಆರ್ಥಿಕ ಸಂಕಷ್ಟಎದುರಾಗಿದೆ.

ಕೊರೋನಾ ಸೋಂಕು ಹರಡದಂತೆ ನಿಯಂತ್ರಿಸುವ ಸಲುವಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯ, ಬೆಂಗಳೂರಿನ ಬನ್ನೇರುಘಟ್ಟಜೈವಿಕ ಉದ್ಯಾನವನ ಸೇರಿದಂತೆ ರಾಜ್ಯದ ಮೃಗಾಲಯಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಹೆಚ್ಚೂ ಕಡಮೆ ಕಳೆದ ಎರಡು ತಿಂಗಳಿನಿಂದ ಬರಬೇಕಾಗಿದ್ದ ಆದಾಯಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ಪ್ರತಿ ವರ್ಷ ಮಾಚ್‌ರ್‍ ತಿಂಗಳಿನಿಂದ ಮೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆಯಿರುತ್ತದೆ. ಈ ಸಂದರ್ಭಗಳಲ್ಲಿ ಹೆಚ್ಚು ಜನ ಮೃಗಾಲಯಗಳಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚು ಹಣ ಸಂಗ್ರಹವಾಗುತ್ತಿತ್ತು. ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಮಾಚ್‌ರ್‍ 25ರಿಂದ ಎಲ್ಲ ಮೃಗಾಲಯಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಈವರೆಗೂ ಬರೋಬ್ಬರಿ 18 ಕೋಟಿ ರು. ಆದಾಯ ನಷ್ಟವಾಗಿದೆ. ಇದರಿಂದ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಮೃಗಾಲಯಗಳಲ್ಲಿ ವನ್ಯಜೀವಿಗಳು ಸೇರಿದಂತೆ ಹಲವು ಅಪರೂಪದ ಜಾತಿಯ ಪ್ರಾಣಿ ಪಕ್ಷಿಗಳನ್ನು ಸಂರಕ್ಷಣೆ ಮತ್ತು ಪೋಷಣೆ ಮಾಡಲಾಗುತ್ತಿದೆ. ಅಲ್ಲದೆ, ಅವುಗಳ ಬಗ್ಗೆ ಸಾರ್ವಜನಿಕರಿಗೆ ಪರಿಚಯಿಸಲಾಗುತ್ತಿದ್ದು, ಲಾಕ್‌ಡೌನ್‌ನಿಂದ ಈ ಪ್ರಾಣಿಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ವಿವರಿಸಿದ್ದಾರೆ.

ಸರ್ಕಾರಕ್ಕೆ ಪ್ರಸ್ತಾವನೆ:

2019-20ನೇ ಸಾಲಿನಲ್ಲಿ ಸಂಗ್ರಹಿಸಿದ್ದ ಮೊತ್ತದಲ್ಲಿ ಈವರೆಗಿನ ಎಲ್ಲ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲಾಗುತ್ತಿದೆ. ಇದೀಗ ಹೆಚ್ಚುವರಿ ಅನುದಾನ ಅಗತ್ಯವಿದೆ. ಆದ್ದರಿಂದ ನಷ್ಟದ ಪ್ರಮಾಣವನ್ನು ಭರಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಈ ಬಗ್ಗೆ ಸರ್ಕಾರದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾಹಿತಿ ನೀಡಿದ್ದಾರೆ.

ದತ್ತು ಸ್ವೀಕಾರಕ್ಕೆ ಮನವಿ:

ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದೆ. ಈ ಮೂಲಕ ಸಾರ್ವಜನಿಕರಿಗೆ ಜೀವಿಗಳ ಪೋಷಣೆಗೆ ಮತ್ತು ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ದತ್ತು ಪಡೆದಲ್ಲಿ ಮೃಗಾಲಯಕ್ಕೂ ಸಹಕಾರಿಯಾಗಲಿದೆ ಎಂದರು.

ರಾಜ್ಯದ ಎಲ್ಲ ಮೃಗಾಲಯಗಳಿಂದ ಅಂದಾಜು 18 ಕೋಟಿ ರು.ಗಳವರೆಗೂ ಆದಾಯ ಕುಸಿದಿದೆ. ಕಳೆದ ವರ್ಷ ಸಂಗ್ರಹಿಸಿದ್ದ ಮೊತ್ತದಲ್ಲಿ ಪ್ರಸ್ತುತ ನಿರ್ವಹಣೆ ಮಾಡಲಾಗುತ್ತಿದೆ. ಜೊತೆಗೆ, ಸಾರ್ವಜನಿಕರಿಂದ ದೇಣಿಗೆ ನೀಡುವಂತೆ ಕೋರಲಾಗಿದೆ.

- ಬಿ.ಪಿ.ರವಿ. ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಉಸ್ತುವಾರಿ ಸಚಿವರಿಂದ ದತ್ತು ಸ್ವೀಕಾರ

ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸುಮಾರು 73 ಲಕ್ಷ ರು. ನೀಡಿ ಆನೆ ದತ್ತು ಸ್ವೀಕರಿಸಿದ್ದಾರೆ. ಜೊತೆಗೆ, ಆಪ್ತ ಸಚಿವರಿಂದ ಮೃಗಾಲಯಕ್ಕೆ ದೇಣಿಗೆ ನೀಡಲು ಸಲಹೆ ನೀಡಿದ್ದಾರೆ. ಇದೇ ರೀತಿಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳು, ಸಾರ್ವಜನಿಕರು ಬನ್ನೇರುಘಟ್ಟಜೈವಿಕ ಉದ್ಯಾನವನಕ್ಕೆ ದೇಣಿಗೆ ನೀಡಬೇಕು ಎಂದು ವನ್ಯಜೀವಿ ಪ್ರೇಮಿಗಳು ಆಶಯ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios