ಮೈಸೂರು, (ಜುಲೈ.19): ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಆದರೆ ಇದೇ ಕೊನೆಯ ಲಾಕ್ ಡೌನ್. ಇನ್ನು ಮುಂದೆ ರಾಜ್ಯದಲ್ಲಿ ಎಲ್ಲಿಯೂ ಲಾಕ್‌ಡೌನ್ ಮಾಡುವುದಿಲ್ಲ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಇಂದು (ಭಾನುವಾರ) ಮೈಸೂರಿನಲ್ಲಿ ಮಾತನಾಡಿದ ಅವರು, ಇನ್ನು ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯು ಲಾಕ್‌ಡೌನ್ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಮನೆ ಮಾತ್ರ ಸೀಲ್‌ಡೌನ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕವಾಗಿ ಆಚರಿಸಲ್ಪಡುವ ಹಬ್ಬಗಳಿಗೆ ರಾಜ್ಯ ಸರ್ಕಾರ ಕಡಿವಾಣ ..?

ಒಟ್ಟಿಗೆ ಎರಡು ಮೂರು ಮನೆಯವರಿಗೆ ಪಾಸಿಟಿವ್ ಬಂದರೆ ರಸ್ತೆ ಸೀಲ್‌ಡೌನ್ ಆಗಲಿದೆ‌. ಅಲ್ಲಿ ಮಾತ್ರ ಸೀಲ್‌ಡೌನ್ ಇರುತ್ತದೆ, ಆದರೆ ಲಾಕ್‌ಡೌನ್ ಇರೋದಿಲ್ಲ ಎಂದರು.

ಮೈಸೂರಿನಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ವೈರಸ್ ನ್ನು ನಿಯಂತ್ರಣ ಮಾಡಲು ಜನಪ್ರತಿನಿಧಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ತಂಡ‌ ರಚನೆ ಮಾಡಲಾಗಿದೆ. ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕ ಎಸ್‌. ಎ. ರಾಮದಾಸ್, ಚಾಮರಾಜ ಕ್ಷೇತ್ರದಲ್ಲಿ ಶಾಸಕ ಎಲ್. ನಾಗೇಂದ್ರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ‌ ಟಿ ದೇವೇಗೌಡ ಟಾಸ್ಕ್ ಫೋರ್ಸ್ ತಂಡದ ನೇತೃತ್ವ ವಹಿಸಲಿದ್ದಾರೆ. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದ ಅಲ್ಲಿನ ನೇತೃತ್ವವನ್ನು ಸಂಸದ ಪ್ರತಾಪ್ ಸಿಂಹ ವಹಿಸಲಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.