ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಅ.24]:  ದೇಶದ ಆಂತರಿಕ ಭದ್ರತೆಗೆ ಕಂಟಕವಾಗುತ್ತಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸುತ್ತಿದ್ದರೂ ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಇದುವರೆಗೆ ನಿಖರವಾದ ಅಂಕಿ-ಅಂಶಗಳು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿಲ್ಲ.

ಆರಂಭದಲ್ಲಿ ಚಿಂದಿ ಆಯುವವರಂತೆ ರಾಜ್ಯಕ್ಕೆ ಬಂದ ಬಾಂಗ್ಲಾ ಪ್ರಜೆಗಳು, ಈಗ ರಾಜ್ಯದ ಖಾಸಗಿ ವಲಯ ಮತ್ತು ಕೃಷಿ ಕ್ಷೇತ್ರದ ಕೆಳಸ್ತರದ ಕಾಯಕಗಳನ್ನು ಆವರಿಸಿಕೊಂಡಿದ್ದಾರೆ. ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳೂ ಸಹ ಆಗಿದ್ದಾರೆ. ಆದರೆ ಪೊಲೀಸ್‌ ಸೇರಿದಂತೆ ಸರ್ಕಾರದ ಯಾವುದೇ ಇಲಾಖೆಯ ದಾಖಲೆಗಳಲ್ಲಿ ಮಾತ್ರ ವಲಸಿಗರ ವಾಸ್ತವ ದತ್ತಾಂಶ ಇಲ್ಲ ಎನ್ನುವುದು ವಿಚಿತ್ರವೆನಿಸಿದರೂ ಕಟು ವಾಸ್ತವ.

ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ), ಗುಪ್ತಚರ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಪೊಲೀಸರು ಹೀಗೆ ವಲಸಿಗರ ಮೇಲೆ ನಿಗಾ ವಹಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಇದುವರೆಗೆ ರಾಜ್ಯದ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಅಧಿಕೃತವಾಗಿ ಮಾಹಿತಿ ಕಲೆಹಾಕಿಲ್ಲ ಎನ್ನಲಾಗಿದೆ.

ಹಾಗಂತ ಈ ಸಂಸ್ಥೆಗಳಿಗೆ ವಲಸಿಗರ ವಿಚಾರ ಗೊತ್ತಿಲ್ಲ ಎನ್ನುವಂತಿಲ್ಲ. ಸತ್ಯ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿವೆ. ಒಮ್ಮೆ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅಕ್ರಮ ವಲಸಿಗ ಎಂದು ಉಲ್ಲೇಖವಾದರೆ ಸದರಿ ವ್ಯಕ್ತಿಯನ್ನು ರಾಜ್ಯದಿಂದ ಗಡೀಪಾರು ಮಾಡಬೇಕಾಗುತ್ತದೆ. ಇದೊಂದು ಸುದೀರ್ಘ ಪ್ರಕ್ರಿಯೆ. ಹೀಗಾಗಿ ಪೊಲೀಸರು ಮಾನವ ಸಂಪನ್ಮೂಲ ಕೊರತೆ ಮತ್ತು ಕಾರ್ಯದೊತ್ತಡದ ಕಾರಣಗಳನ್ನು ಮುಂದೊಡ್ಡಿ ಅಕ್ರಮ ವಲಸಿಗರ ಪತ್ತೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳಿವೆ.

ಇತ್ತೀಚೆಗೆ ದೇಶದೆಲ್ಲೆಡೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಭಿಯಾನದ ಕೂಗು ಕೇಳಿ ಬಂದಾಗ ಎಚ್ಚೆತ್ತ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಕರ್ನಾಟಕದಲ್ಲಿ ಸಹ ಬಾಂಗ್ಲಾ ವಲಸಿಗರ ಮೇಲೆ ಕಣ್ಣಿರಿಸಿದ್ದರು. ಆದರೆ ವಲಸಿಗರ ಜಾಲ ವಿಸ್ತಾರವಾದ ಕಾರಣ ಅವುಗಳು ಅಂದಾಜಿನ ವರದಿ ತಯಾರಿಸಿ ಕೈಚೆಲ್ಲಿವೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಹಿಂದೆ 2011ರಲ್ಲಿ ಈಶಾನ್ಯ ಭಾರತೀಯರ ಮೇಲೆ ಜನಾಂಗೀಯ ದಾಳಿಗಳು ಸಂಭವಿಸಿದಾಗ ಆಗಿನ ರಾಜ್ಯ ಬಿಜೆಪಿ ಸರ್ಕಾರವು ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಹೊರಹಾಕುವ ಮಾತುಗಳನ್ನಾಡಿತ್ತು. ಇದಕ್ಕಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ಪುನರ್‌ ವಸತಿ ಕೇಂದ್ರ’ ಸ್ಥಾಪಿಸಲಾಗುತ್ತದೆ ಎಂದು ಹೇಳಿತ್ತು. ಆದರೆ ನಂತರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಪ್ರಯತ್ನ ನಡೆಯಲಿಲ್ಲ.

3 ವರ್ಷದ ಹಿಂದೆ ಅಕ್ರಮ ವಲಸಿಗರ ಸಂಖ್ಯೆ 270:

ಖಾಸಗಿ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ರಾಜ್ಯದಲ್ಲಿ ಸುಮಾರು 80 ಸಾವಿರದಿಂದ ಎರಡು ಲಕ್ಷದವರೆಗೆ ಅಕ್ರಮ ಬಾಂಗ್ಲಾ ವಲಸಿಗರು ಬೀಡು ಬಿಟ್ಟಿದ್ದಾರೆ ಎಂಬ ಆಘಾತಕಾರಿ ವಾದ ಮಂಡಿಸುತ್ತಾರೆ. ಆದರೆ ಸರ್ಕಾರಿ ಸಂಸ್ಥೆಗಳು ಮಾತ್ರ ನಿಖರವಾದ ಅಂಕಿ-ಅಂಶ ಪ್ರಕಟಿಸದೆ ಊಹಾತ್ಮಕ ವರದಿ ಮಂಡನೆ ಮಾಡುತ್ತಿವೆ.

ಅದರಂತೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಪ್ರಕಾರ ರಾಜ್ಯದಲ್ಲಿ 60, ಗುಪ್ತದಳದ ಲೆಕ್ಕದಲ್ಲಿ 15ರಿಂದ 20 ಸಾವಿರ ಅಕ್ರಮ ವಲಸಿಗರು ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಈ ವರದಿಗಳ ಹೊರತಾಗಿಯೂ 2016ರ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂದಿನ ಗೃಹ ಸಚಿವ ಡಾ

ಜಿ.ಪರಮೇಶ್ವರ್‌ ಅವರು ರಾಜ್ಯದಲ್ಲಿ ಕೇವಲ 270 ಮಂದಿ ಮಾತ್ರ ಅಕ್ರಮ ವಲಸಿಗರಿದ್ದಾರೆ ಎಂದು ಅಧಿಕೃತ ಹೇಳಿಕೆ ನೀಡಿದ್ದರು.

ಪರಮೇಶ್ವರ್‌ ಅಂದು ಅಕ್ರಮ ಬಾಂಗ್ಲಾ ವಲಸಿಗರ ಕುರಿತು ನೀಡಿದ್ದ ಹೇಳಿಕೆ ಅನ್ವಯ, ರಾಜ್ಯದಲ್ಲಿ 748 ಮಂದಿ ಬಾಂಗ್ಲಾ ದೇಶದ ಪ್ರಜೆಗಳಿದ್ದರು. ಈ ಪೈಕಿ 270 ಮಂದಿ ಅಕ್ರಮ ವಲಸಿಗರು. ಅವರಲ್ಲಿ 56 ಮಂದಿಯನ್ನು ಪತ್ತೆಹಚ್ಚಿ ಗಡೀಪಾರು ಮಾಡಲಾಗಿದ್ದು, 50 ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ಇದಾದ ನಂತರ ಮತ್ತೆ ಅಕ್ರಮ ವಲಸಿಗರ ಕುರಿತು ಸರ್ಕಾರ ಅಧಿಕೃತ ಮಾಹಿತಿ ಹೊರಹಾಕಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸುಧೀರ್‌ ಶೆಟ್ಟಿ.

ರಾಜ್ಯದಲ್ಲಿ 186 ದೇಶಗಳ ಸುಮಾರು 31 ಸಾವಿರ ಪ್ರಜೆಗಳು ನೆಲೆಸಿದ್ದಾರೆ. ಇದರಲ್ಲಿ ಸುಮಾರು 850 ಮಂದಿ ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ವಿದೇಶೀಯರ ಪ್ರಾದೇಶಿಕ ನೊಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಅಧಿಕಾರಿಗಳು ಹೇಳುತ್ತಾರೆ.

ಆದರೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಹೊಂದಿ ನೆಲೆಸಿರುವ ಅಕ್ರಮ ವಲಸಿಗರ ಬಗ್ಗೆ ಲೆಕ್ಕ ಸಿಕ್ಕಿಲ್ಲ. ರಾಜ್ಯದಲ್ಲಿ 32 ಕಡೆ ಬಾಂಗ್ಲಾ ವಲಸಿಗರ ಕ್ಯಾಂಪ್‌ಗಳಿವೆ. ಈ ಕ್ಯಾಂಪ್‌ಗಳಲ್ಲಿ ಬೇರೂರಿರುವ ವ್ಯಕ್ತಿಗಳ ಹಿನ್ನಲೆ ಕೆದಕಿದರೆ ವಲಸಿಗರ ಮುಖವಾಡ ಕಳಚಿ ಬೀಳುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಎನ್‌ಜಿಓ ಸೋಗಿನಲ್ಲಿ ಸಮೀಕ್ಷೆ

ಇತ್ತೀಚೆಗೆ ಎಫ್‌ಆರ್‌ಆರ್‌ಓ ಅಧಿಕಾರಿಗಳು ಅಕ್ರಮ ಬಾಂಗ್ಲಾ ವಲಸಿಗರ ವಾಸಸ್ಥಳಗಳ ಜೋಪಡಿಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸೋಗಿನಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ತಮ್ಮದೇ ಕೋಟೆ ನಿರ್ಮಿಸಿಕೊಂಡು ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆ. ಅಲ್ಲಿ ಪೊಲೀಸರೆಂದು ಹೇಳಿದರೆ ಮಾಹಿತಿ ಸಿಗುವುದಿಲ್ಲ. ಹಾಗಾಗಿ ನಿಮಗೆ ಸಹಾಯ ಮಾಡುವ ಎನ್‌ಜಿಓ ಕಾರ್ಯಕರ್ತರು ನಾವು ಎಂದು ಹೇಳಿ ನಿವಾಸಿಗಳನ್ನು ವಿಚಾರಣೆ ನಡೆಸಲಾಯಿತು. ಬೆಂಗಳೂರಿನ ಮಹದೇವಪುರ, ಕಾಡುಬೀಸನಹಳ್ಳಿ, ವೈಟ್‌ ಫೀಲ್ಡ್‌ ಹಾಗೂ ಕೆ.ಆರ್‌.ಪುರ ಸೇರಿದಂತೆ ಕೆಲವು ಕಡೆ ಈ ಸಮೀಕ್ಷೆ ನಡೆಯಿತು. ಆದರೆ ಅವರ ಜೀವನ ಶೈಲಿ ಹಾಗೂ ಸರ್ಕಾರಿ ದಾಖಲೆಗಳ ಪರಿಶೀಲನೆ ಬಳಿಕ ಸಮೀಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು ಎಂದು ಮೂಲಗಳು ಹೇಳಿವೆ.

ವಲಸಿಗರು ಗುಟ್ಟು ಬಿಟ್ಟುಕೊಡೋದಿಲ್ಲ

ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೂ ಅಕ್ರಮ ಬಾಂಗ್ಲಾ ವಲಸಿಗರು ಎಂದು ಎಲ್ಲೂ ಉಲ್ಲೇಖವಾಗುತ್ತಿಲ್ಲ. ಏಕೆಂದರೆ ಹೀಗೆ ಸಿಕ್ಕಿಬೀಳುವ ಬಾಂಗ್ಲಾ ವಲಸಿಗರು ಅಸ್ಸಾಂ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಪ್ರಜೆಗಳು ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಪೂರಕವಾಗಿ ನಕಲಿ ದಾಖಲೆ ನೀಡಿ ಪಡೆದ ಆಧಾರ್‌ ಕಾರ್ಡ್‌ ಹಾಗೂ ಮತದಾರರ ಗುರುತಿನ ಚೀಟಿಯನ್ನು ಸಲ್ಲಿಸುತ್ತಾರೆ. ಹೀಗಾಗಿ ವಲಸಿಗ ಎಂದು ಹೇಳಿದರೆ ಮತ್ತೆ ತನಿಖೆ ವಿಸ್ತಾರವಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಅಕ್ರಮ ವಲಸಿಗ ಎಂದೂ ಗೊತ್ತಿದ್ದರೂ ಉಲ್ಲೇಖಿಸುವುದಿಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಸರ್ಕಾರ 3 ವರ್ಷದ ಹಿಂದೆ ನೀಡಿದ್ದ ಲೆಕ್ಕ

ಜಿಲ್ಲೆ ಎಷ್ಟುಅಕ್ರಮ ವಲಸಿಗರು

ಬೆಂಗಳೂರು ನಗರ 197

ಮೈಸೂರು ನಗರ 25

ಚಿಕ್ಕಮಗಳೂರು 1

ಬೆಂಗಳೂರು ಗ್ರಾಮಾಂತರ 14

ಶಿವಮೊಗ್ಗ 2

ಮಂಡ್ಯ 16

ದಕ್ಷಿಣ ಕನ್ನಡ 1

ಕೆಜಿಎಫ್‌ 3

ರಾಮನಗರ 11

ಒಟ್ಟು 270

ಪ್ರತಿ ವರ್ಷ ರಾಜ್ಯಕ್ಕೆ ಹಿಂಡು ಹಿಂಡು ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಈ ವಲಸೆ ತಡೆಗಟ್ಟುವಿಕೆಗೆ ಸರ್ಕಾರ ಕ್ರಮ ಜರುಗಿಸುತ್ತಿಲ್ಲ. ಹೀಗಾಗಿ ಅಕ್ರಮ ವಲಸಿಗರ ಪತ್ತೆ ಸಂಬಂಧ ಎನ್‌ಐಎ ತನಿಖೆಗೆ ಒತ್ತಾಯಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿದೆ.

- ಗಿರೀಶ್‌ ಭಾರದ್ವಾಜ್‌, ಹಿಂದೂ ಪರ ಸಂಘಟನೆ ಕಾರ್ಯಕರ್ತ