ಲಿಂಗಾಯತ ಧರ್ಮ ಬಗ್ಗೆ ಎಲೆಕ್ಷನ್ವರೆಗೆ ಚರ್ಚೆ ಬೇಡ: ಎಂ.ಬಿ.ಪಾಟೀಲ್
* ಚುನಾವಣೆ ಬಳಿಕ ಒಳಿತಾಗುವ ನಿರ್ಧಾರ
* ರಾಜ್ಯದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ
* ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನನಗೆ ಮಾಹಿತಿ ಇಲ್ಲ
ಬಾಗಲಕೋಟೆ(ಮೇ.04): ಲಿಂಗಾಯತ ಸ್ವತಂತ್ರ ಧರ್ಮ(Lingayat Religion) ನಮ್ಮ ಅಸ್ಮಿತೆಯಾದರೂ ಸದ್ಯ ಇದನ್ನು ರಾಜಕೀಯವಾಗಿ ಚರ್ಚೆ ಮಾಡಲು ಹೋಗುವುದಿಲ್ಲ. ಚುನಾವಣೆ ಮುಗಿಯುವವರೆಗೆ ಈ ಕುರಿತು ಚರ್ಚೆ ಬೇಡ ಎಂದು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ನೇತೃತ್ವ ವಹಿಸಿದ್ದ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್(MB Patil) ತಿಳಿಸಿದ್ದಾರೆ.
ಬಾಗಲಕೋಟೆ(Bagalkot) ಜಿಲ್ಲೆಯ ಹುನಗುಂದ(Hunagund) ತಾಲೂಕಿನ ಕೂಡಲಸಂಗಮದಲ್ಲಿ(Kudala Sangama) ಬಸವ ಜಯಂತಿ ನಿಮಿತ್ತ ಮಂಗಳವಾರ ಬಸವಣ್ಣನವರ(Basavanna) ಐಕ್ಯ ಕ್ಷೇತ್ರ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ಎಲ್ಲರೂ ಸೇರಿ ಸಮಾಜಕ್ಕೆ ಒಳಿತಾಗುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
'ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಗೃಹ ಇಲಾಖೆಯ ಅವಾಂತರ ನೋಡಲಿ'
ಇನ್ನು ರಾಜ್ಯದಲ್ಲಿ(Karnataka) ನಾಯಕತ್ವ ಬದಲಾವಣೆ ಕುರಿತು ನನಗೆ ಮಾಹಿತಿ ಇಲ್ಲ. ಮೂರು ಮುಖ್ಯಮಂತ್ರಿಗಳ ಪರಂಪರೆ ಮುಂದುವರೆಯುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು(Siddaramaiah) ಮಾತನಾಡಿದ್ದು ನನಗೆ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಎಲ್ಲವೂ ತತ್ತರಿಸಿ ಹೋಗಿದ್ದು, ಮೂರು ಆದರೂ ಅಷ್ಟೇ, ಹತ್ತು ಮುಖ್ಯಮಂತ್ರಿಗಳನ್ನು ಮಾಡಿದರೂ ಅಷ್ಟೇ ಎಂದು ವ್ಯಂಗ್ಯವಾಡಿದರು.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳು ಸೇರಿದಂತೆ ಇತರರು ಭಾಗಿಯಾಗಿರುವ ವಿಷಯವನ್ನು ಪ್ರಸ್ತಾಪಿಸಿದ ಎಂ.ಬಿ.ಪಾಟೀಲ, ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲದೆ ತನಿಖೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆದರೆ ರಾಜ್ಯದಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ಹೊರಗೆ ತರಲು ಸಾಧ್ಯವಾಗಲಿದೆ. ನ್ಯಾಯಾಧೀಶರ ತನಿಖೆಯಾದರೆ ಅದಕ್ಕೆ ಒಂದು ತೂಕ ಇರಲಿದೆ. ಜೊತೆಗೆ ಭಯವೂ ಇರಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ(Corruption) ಮನೆ ಮಾಡಿದೆ. ಗುತ್ತಿಗೆದಾರರ ಸಂಘವೇ ಶೇ.40ರಷ್ಟುಕಮಿಷನ್ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರಧಾನಿಗೆ ಪತ್ರವನ್ನು ಸಹ ಬರೆದಿದ್ದಾರೆ. ಆದರೆ, ಪ್ರಧಾನಿ ಮೋದಿ(Narendra Modi) ಮತ್ತು ಅಮಿತ್ ಶಾ(Amit Shah) ಅವರು ನಾ ಖಾವುಂಗಾ..ನಾ ಖಾನೆ ದೂಂಗಾ..ಎನ್ನುತ್ತಾರೆ. ಆದರೆ, ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಏಕೆ ಮಾತನಾಡುತ್ತಿಲ್ಲ? ಇದರ ಅರ್ಥ ಮೌನ ಸಮ್ಮತಿ ಲಕ್ಷಣಂ ಎಂದಾಗುವುದಿಲ್ಲವೆ? ಬೇರೆ ಸಂದರ್ಭಗಳಲ್ಲಿ ಅಕ್ರಮ ನಡೆದರೆ ಸಿಬಿಐ, ಇಡಿ, ಐಟಿ ತನಿಖೆ ಮಾಡಿಸುವ ಇವರು ರಾಜ್ಯದಲ್ಲಿ ನಡೆದಿರುವ ಆಕ್ರಮಗಳನ್ನು ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದರು.