ಕೊರೋನಾ ಮಹಾಮಾರಿ ರುಪಾಂತರವಾಗಿ ತೀವ್ರ ಆತಂಕ ಸೃಷ್ಟಿಸಿತ್ತು. ಬ್ರಿಟನ್ ವೈರಸ್ ಎನ್ನಲಾಗುತ್ತಿದ್ದ ಈ ವೈರಸ್ ಮಾರಕವಾಗಿತ್ತು. ಆದರೆ ಇನ್ಮುಂದೆ ರಾಜ್ಯಕ್ಕಿಲ್ಲ ಇದರ ಭಯ

ಬೆಂಗಳೂರು (ಜ.25): ರಾಜ್ಯದಲ್ಲಿ 20 ದಿನಗಳ ಹಿಂದೆ ಭಾರಿ ಸದ್ದು ಮಾಡಿದ್ದ ಕೊರೋನಾ ವೈರಸ್‌ನ ಬ್ರಿಟನ್‌ ಪ್ರಭೇದದ ಆತಂಕ ನಿಧಾನವಾಗಿ ಮರೆಯಾಗುತ್ತಾ ಸಾಗಿದೆ.

ಡಿ.25ರಿಂದ ಜ.24 (ಶನಿವಾರ)ರವರೆಗೆ ಬ್ರಿಟನ್‌ನಿಂದ 7308 ಮಂದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಪೈಕಿ 50 ಮಂದಿಗೆ ಕೋವಿಡ್‌ ಸೋಂಕು ಕಂಡು ಬಂದಿದ್ದು, ಅದರಲ್ಲಿ 14 ಮಂದಿ ಮಾತ್ರ ರೂಪಾಂತರಿ ಸೋಂಕು ಹೊಂದಿದ್ದರು. ಇವರೆಲ್ಲರೂ ಈಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ 50 ಮಂದಿ ಸೋಂಕಿತರ ಸಂಪರ್ಕದಿಂದ 26 ಮಂದಿ ಪ್ರಾಥಮಿಕ ಸೋಂಕಿತರಿಗೂ ಸೋಂಕು ಕಾಣಿಸಿಕೊಂಡಿತ್ತು. ಈ ಪೈಕಿ ಮೂರ್ನಾಲ್ಕು ಮಂದಿ ಮಾತ್ರ ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗುಣಮುಖರಾಗಿದ್ದಾರೆ.

2 ದಿನದಲ್ಲಿ 2ನೇ ಹಂತದ ಕೊರೋನಾ ಲಸಿಕೆ ಪಡೆವರ ಪಟ್ಟಿ ಸಿದ್ಧ

ಈ ಬಗ್ಗೆ ಮಾತನಾಡಿದ ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನ ನೋಡಲ್‌ ಅಧಿಕಾರಿ ಡಾ. ಸುಷ್ಮಾ, ಬ್ರಿಟನ್‌ನ ರೂಪಾಂತರಿ ವೈರಸ್‌ ಸೋಂಕಿಗೆ ತುತ್ತಾಗಿದ್ದವರು ಈಗ ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಆಗಿದ್ದಾರೆ. ಅವರಿಗೆ ಯಾವುದೇ ಗಂಭೀರ ಪ್ರಕರಣಗಳಿರಲಿಲ್ಲ. ಬಹುತೇಕರು ಸೋಂಕು ಲಕ್ಷಣರಹಿತರಾಗಿದ್ದರು ಎಂದು ಹೇಳುತ್ತಾರೆ.

ಬ್ರಿಟನ್‌ ರೂಪಾಂತರಿ ಕೊರೋನಾ ಡಿಸೆಂಬರ್‌ ಕೊನೆಯ ವಾರದ ಹೊತ್ತಿಗೆ ಭಾರತ ಪ್ರವೇಶಿಸಿರುವುದು ಖಚಿತವಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸುವುದು, ಬ್ರಿಟನ್‌ನಿಂದ ಬಂದವರ ಶೋಧ ಕಾರ್ಯಾಚರಣೆ ನಡೆಸಿ ಕೋವಿಡ್‌ ಪರೀಕ್ಷೆ ನಡೆಸಿ, ಕ್ವಾರಂಟೈನ್‌ ನಡೆಸುವುದು, ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆ ನಡೆಸಿ ಐಸೋಲೇಷನ್‌ ಮಾಡುವುದು, ಬ್ರಿಟನ್‌ ಕೊರೋನಾ ವೈರಾಣು ಪತ್ತೆಯಾದರೆ ಅಂತಹ ಅಪಾರ್ಟ್‌ಮೆಂಟ್‌ಗಳನ್ನೇ ಸೀಲ್‌ ಡೌನ್‌ ಮಾಡುವುದು ಮುಂತಾದ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ರಾಜ್ಯ ಕೈಗೊಂಡಿತ್ತು. ಇದೆಲ್ಲದರ ಪರಿಣಾಮವಾಗಿ ಬ್ರಿಟನ್‌ನ ಕೊರೋನಾ ವೈರಸ್‌ ಸೋಂಕು ಹದ್ದುಮೀರಿ ಹಬ್ಬದಂತೆ ತಡೆಯುವಲ್ಲಿ ರಾಜ್ಯ ಸದ್ಯಕ್ಕೆ ಯಶಸ್ವಿಯಾಗಿದೆ.

ಯಶಸ್ವಿಯಾಗಿದ್ದೇವೆ ಎಂಬ ಕಾರಣಕ್ಕೆ ಮತ್ತೆ ನಿರ್ಲಕ್ಷ್ಯ ವಹಿಸಬಾರದು. ಬ್ರಿಟನ್‌ನಲ್ಲಿ ಕೊರೋನಾ ಸೋಂಕು ದೊಡ್ಡ ಪ್ರಮಾಣದಲ್ಲಿ ಹಬ್ಬಿರುವುದರಿಂದ ಅಲ್ಲಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲೇ ಪರೀಕ್ಷಿಸಿ ವರದಿ ಕೈ ಸೇರಿದ ಬಳಿಕವೇ ಅವರನ್ನು ನಿಲ್ದಾಣದಿಂದ ಹೊರ ಬಿಡುತ್ತಿರುವ ಕ್ರಮವನ್ನು ಮುಂದುವರಿಸಬೇಕು. ಹಾಗೆಯೇ ಈ ವ್ಯವಸ್ಥೆಯನ್ನು ಇನ್ನಿತರ ದೇಶಗಳಿಂದ ಬರುವವರಿಗೂ ವಿಸ್ತರಿಸಿದರೆ ಒಳ್ಳೆಯದು. ತೀವ್ರವಾಗಿ ಹಬ್ಬುವ ಸಾಮರ್ಥ್ಯ ಇರುವ ಬ್ರಿಟನ್‌ ಪ್ರಭೇದದ ವೈರಸ್‌ ಒಂದು ವೇಳೆ ಸಣ್ಣ ನಿರ್ಲಕ್ಷದಿಂದ ಜನ ಸಮುದಾಯವನ್ನು ತಲುಪಿದರೆ ಶ್ರಮವೆಲ್ಲ ವ್ಯರ್ಥವಾಗುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.