'ಬಿಎಸ್‌ವೈ ಸರಿಸಾಟಿಯಾಗಬಲ್ಲ ನಾಯಕ ಸದ್ಯಕ್ಕೆ ಯಾರೂ ಇಲ್ಲ'
- ಬಿಎಸ್‌ವೈ ಸರಿಸಾಟಿಯಾಗಬಲ್ಲ ನಾಯಕ ಸದ್ಯಕ್ಕೆ ಯಾರೂ ಇಲ್ಲ
- ಮುಂದಿನ ದಿನಗಳಲ್ಲಿ ಕಾಣಬಹುದು ಎಂಬ ನಿರೀಕ್ಷೆ ಇದೆ
- ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿಕೆ
ಬೆಂಗಳೂರು (ಜು.25): ಬಿಎಸ್‌ವೈ ಸರಿಸಾಟಿಯಾಗಬಲ್ಲ ನಾಯಕ ಸದ್ಯಕ್ಕೆ ಯಾರೂ ಇಲ್ಲ, ಮುಂದಿನ ದಿನಗಳಲ್ಲಿ ಕಾಣಬಹುದು ಎಂಬ ನಿರೀಕ್ಷೆ ಇದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಸ್ವಾಮೀಜಿ ಸದ್ಯ ರಾಜ್ಯ ಸಾಕಷ್ಟು ಸಂಕಷ್ಟದಲ್ಲಿದೆ. ಸದ್ಯ ಕೋವಿಡ್ 3ನೇ ಅಲೆ ಬರುತ್ತಿದೆ. ನೆರೆ ಪರಿಸ್ಥಿತಿ ಎದುರಾಗಿದೆ. ಇಂತಹ ವೇಳೆ ನಾಯಕತ್ವ ಬದಲಾವಣೆ ಅವಶ್ಯಕತೆ ಏನಿದೆ? ಬಿಎಸ್‌ವೈ ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ ವಿಶ್ವಾಸಗಳಿಸಿದ್ದರು ಎಂದು ಹೇಳಿದರು.
ಗರಿಗೆದರಿದೆ ಭಾರೀ ಕುತೂಹಲ: ಶ್ರಾವಣಕ್ಕೆ ಹೊಸ ಸಿಎಂ? ದೆಹಲಿ ಸಂದೇಶವೇನು?
ಯಡಿಯೂರಪ್ಪ ಜನಾನುರಾಗಿ ಸಿಎಂ ಆಗಿದ್ದಾರೆ. ಸರ್ಕಾರದ ರಚನೆಯ ಸಂದರ್ಭದಲ್ಲಿ ಅಪಕೀರ್ತಿಗೂ ಒಳಗಾಗಿದ್ದರು. ಅತ್ಯಂತ ದಕ್ಷತೆ ಹಾಗು ಕ್ರೀಯಾಶೀಲರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನೆರೆ ಹಾಗೂ ಬರ ಸಮಸ್ಯೆ, ಎಸ್‌ಎಂ ಕೃಷ್ಣ ಇದ್ದಾಗ ಎದುರಾಗಿತ್ತು. ಅಂದು ಬಿಟ್ಟರೆ ಈಗ ಬಿಎಸ್‌ವೈ ಅವಧಿಯಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಸರಿಯಾಗಿ ನಿಭಾಯಿಸಿದ್ದಾರೆ.
ಬಿಜೆಪಿ ವರಿಷ್ಟರು ವಯಸ್ಸು ಮೀರಿದೆ ಎಂಬ ಕಾರಣಕ್ಕೆ ಬಿಎಸ್‌ವೈ ಕೆಳಗಿಳಿಸುತ್ತಿದ್ದಾರೆ. ಬಿಎಸ್‌ವೈ ಸಹ ಪಕ್ಷವನ್ನು ತಾಯಿಗೆ ಹೋಲಿಸಿದ್ದಾರೆ. ಇತರೆ ಸಮುದಾಯದ ಮಠಾಧೀಶರು ಬಿಎಸ್‌ವೈ ಗೆ ಬೆಂಬಲ ಸೂಚಿಸಿದ್ದಾರೆ. ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಬಿಎಸ್‌ವೈ. ಈ ಕಾರಣದಿಂದಾಗಿ ಅವರನ್ನೇ ಸಿಎಂ ಆಗಿ ಮುಂದುವರೆಸಬೇಕು.
ಬಿಜೆಪಿ ವರಿಷ್ಠರು ಮಠಾಧೀಶರ ಮಾತಿಗೆ ಗೌರವ ಹಾಗು ಮನ್ನಣೆ ನೀಡಬೇಕು. ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ವಯಸ್ಸಿನ ವಿಚಾರ, ಪಕ್ಷದ ವಿಚಾರವನ್ನೂ ನಾನು ಒಪ್ಪುತ್ತೇನೆ. ತಮಿಳುನಾಡಿನಲ್ಲಿ 75 ಮೀರಿದ ವ್ಯಕ್ತಿಯನ್ನು ಸಿಎಂ ಎಂದು ಬಿಂಬಿಸಿ ಚುನಾವಣೆ ಎದುರಿಸಿತ್ತು. ಪಕ್ಷದ ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. 6 ತಿಂಗಳಾದರೂ ಅವರನ್ನು ಮುಂದುವರೆಸಿ. ಮಠಾಧೀಶರ ಮಾತಿಗೆ ಬೆಲೆ ಕೊಡಿ ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳಿ ಎಂದರು.
ಹಸ್ತಕ್ಷೇಪ ರಹಿತ ಹಾಗೂ ಆರೋಪ ರಹಿತ ಉತ್ತಮ ಆಡಳಿತ ನೆರವೇರಿಸಿ ಎಂದು ಸೂಚಿಸಿ, ಮಠಾಧೀಶರ ಮಾತಿಗೆ ಗೌರವ ಕೊಟ್ಟಾಗ ನಿಮಗೂ ಒಳ್ಳೆಯದಾಗುತ್ತದೆ. ಇಲ್ಲವಾದರೆ ವೀರಶೈವ ಲಿಂಗಾಯತರನ್ನೆ ಸಿಎಂ ಆಗಿ ನೇಮಕ ಮಾಡಬೇಕು. ವೀರಶೈವ ಲಿಂಗಾಯತ ಎಂದರೆ ಕೇವಲ ಒಂದು ಜಾತಿಯಲ್ಲ. ಅದು ಸರ್ವಜಾತಿಗಳ ಸಮಕ್ಷಮ ಆದ್ದರಿಂದ ಲಿಂಗಾಯತರಿಗೆ ಅಧಿಕಾರ ನೀಡಬೇಕು. ವಿ.ಸೋಮಣ್ಣ, ನಿರಾಣಿ, ಬೆಲ್ಲದ್, ಮಾದುಸ್ವಾಮಿ, ಬೊಮ್ಮಯಿ ಸೇರಿದಂತೆ ಹಲವಾರು ಜನರಿದ್ದಾರೆ. ಅವರಿಗೆ ಅಧಿಕಾರವನ್ನ ನೀಡಿಸದರೆ ಸೂಕ್ತ ಎಂದರು.
ಯಡಿಯೂರಪ್ಪನವರೇ ಸ್ವಾಮೀಜಿಗಳು ಪ್ರತಿಭಟನೆ ನಡೆಸಬಾರದು ಎಂಬ ವಿಚಾರ : ಯಡಿಯೂರಪ್ಪನವರನ್ನ ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ. ಅದಕ್ಕೆ ಅವರು ಕೆಲವೊಂದು ಒಪ್ಪಂದಗಳನ್ನ ಮಾಡಿಕೊಂಡಿದ್ದಾರೆ. ಆದರೆ ಅವರನ್ನ ಅಧಿಕಾರದಿಂದ ಕೆಳಗಿಳಿಸುವುದು ಸೂಕ್ತವಲ್ಲ. ಬಿಎಸ್ವೈ ಅವರನ್ನ ಅಧಿಕಾರದಿಂದ ಕೆಳಗಿಳಿಸಿದ ನಂತರ ವೀರಶೈವ ಲಿಂಗಾಯತರಿಗೆ ಅಧಿಕಾರ ನೀಡದಿದ್ದರೆ ಬಿಜೆಪಿ ಲಿಂಗಾಯತರ ಮತಗಳನ್ನ ಕಳೆದುಕೊಳ್ಳುತ್ತದೆ. ಬಿಜೆಪಿಯಿಂದ ಲಿಂಗಾಯತರು ದೂರು ಉಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.