ನೈತಿಕತೆ ಬಗ್ಗೆ ಮಾತು ಸಾಲದು, ನೈಸ್ ಸದನ ಸಮಿತಿ ವರದಿ ಬಗ್ಗೆ ಕ್ರಮ ಏಕಿಲ್ಲ? ಸಿದ್ದುಗೆ ದೇವೇಗೌಡ ಚಾಟಿ
ನೈತಿಕತೆ ಕುರಿತು ಪತ್ರಕರ್ತರಿಗೆ ಬೋಧನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈಸ್ ಸದನ ಸಮಿತಿ ವರದಿ ಕುರಿತು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರು (ಜು.25) : ನೈತಿಕತೆ ಕುರಿತು ಪತ್ರಕರ್ತರಿಗೆ ಬೋಧನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈಸ್ ಸದನ ಸಮಿತಿ ವರದಿ ಕುರಿತು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ(Siddaramaiah) ಅವರು ನೈತಿಕತೆ ಪಾಲನೆ ಮಾಡುವ ಬಗ್ಗೆ ಪತ್ರಕರ್ತರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಆದರೆ, ಅವರ ಪಕ್ಷದ ಮುಖಂಡ ಟಿ.ಬಿ.ಜಯಚಂದ್ರ ನೀಡಿರುವ ನೈಸ್ ಸಂಸ್ಥೆಯ ರಸ್ತೆ ಯೋಜನೆ ಕುರಿತ ವರದಿ ಮೇಲೆ ಯಾಕೆ ದೃಢ ನಿಲುವು ಹೇಳುತ್ತಿಲ್ಲ. ಸುಮಾರು 11 ಸಾವಿರ ಎಕರೆಯಷ್ಟುಭೂಮಿ ಸರ್ಕಾರದ ವಶವಾಗಬೇಕಿದೆ. ಇದರಿಂದ ಬರುವ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಬಹುದು. ನೈತಿಕತೆಯ ಮಾತುಗಳು ಹೃದಯದ ಅಂತರಾಳದಿಂದ ಬರಬೇಕು’ ಎಂದು ತೀಕ್ಷ$್ಣವಾಗಿ ಹೇಳಿದರು.
ನೈಸ್ ಅಕ್ರಮ: ಸರಣಿ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು!
ಜಿಟಿಡಿ ನೇತೃತ್ವದಲ್ಲಿ ಸಮಿತಿ ರಚನೆ:
ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಶಾಸಕರೂ ಆಗಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಇದೇ ವೇಳೆ ಗೌಡರು ತಿಳಿಸಿದರು.
ಮುಂದೆ ತಾಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ, ಲೋಕಸಭೆ ಚುನಾವಣೆ ಬರಲಿವೆ. ಇದಕ್ಕಾಗಿ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಪಕ್ಷವನ್ನು ಸದೃಢಗೊಳಿಸಲಾಗುವುದು. ಸಮಿತಿಯು ಪಕ್ಷವನ್ನು ಬಲಗೊಳಿಸಲುವಲ್ಲಿ ರೂಪುರೇಷೆ ರೂಪಿಸಲಿದೆ. ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನೈಸ್ ವಿರುದ್ಧ ತನಿಖೆ ನಡೆಸದಂತೆ ಎಚ್‌ಡಿಕೆಗೆ ಯಾರೂ ಕೈ ಕಟ್ಟಿರಲಿಲ್ಲ: ಸಿಎಂ