ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ, ಹೆತ್ತ ತಾಯಿಯೊಬ್ಬಳು ತನ್ನ ಒಂದು ದಿನದ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದಿದ್ದಾಳೆ. ನಾಯಿಗಳು ಮಗುವನ್ನು ಎಳೆದಾಡಿ ಕೊಂದಿದ್ದು, ಈ ಅಮಾನುಷ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯಪುರ (ಮಾ.28): ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಹೆತ್ತ ತಾಯಿಯೇ ತನ್ನ ನವಜಾತ ಶಿಶುವನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋದ ಅಮಾನುಷ ಘಟನೆ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಲಿಂಗಾಯತ ಕೈಲಾಸಧಾಮದ ಬಳಿ ಈ ಘಟನೆ ನಡೆದಿದೆ. ಜನಿಸಿ ಕೇವಲ ಒಂದು ದಿನವಾಗಿದ್ದ ಹಸುಗೂಸನ್ನು ಪಾಪಿ ತಾಯಿಯೊಬ್ಬಳು ಕಸದ ತೊಟ್ಟಿಯ ಬಳಿ ಬಿಸಾಡಿ ಹೋಗಿದ್ದಾಳೆ. ದುರದೃಷ್ಟವಶಾತ್, ಅಲ್ಲಿಗೆ ಬಂದ ನಾಯಿಗಳು ಶಿಶುವನ್ನು ಎಳೆದಾಡಿ ಕಚ್ಚಿ ಕೊಂದಿವೆ. ಬೆಳಿಗ್ಗೆ ಕಸದ ತೊಟ್ಟಿಯ ಬಳಿ ಶಿಶುವಿನ ಶವ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ನಾಯಿ ದಾಳಿಯಿಂದ ಛಿದ್ರವಾದ ದೇಹ

ಮಗು ಜನಿಸಿದ ತಕ್ಷಣವೇ ಅಥವಾ ಒಂದು ದಿನದ ಬಳಿಕ ಇಲ್ಲಿ ತಂದು ಎಸೆದಿರಬಹುದು ಎಂದು ಶಂಕಿಸಲಾಗಿದೆ. ನಾಯಿಗಳ ದಾಳಿಯಿಂದಾಗಿ ಮಗುವಿನ ದೇಹ ಛಿದ್ರಗೊಂಡಿದ್ದು, ಸ್ಥಳದಲ್ಲಿ ಭೀಬತ್ಸ ದೃಶ್ಯ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ತಾಳಿಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಎಸೆದು ಹೋದವರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆ ಪಟ್ಟಣದ ಜನರಲ್ಲಿ ತೀವ್ರ ಆಕ್ರೋಶ ಮತ್ತು ವಿಷಾದಕ್ಕೆ ಕಾರಣವಾಗಿದೆ.