ಸುಬ್ರಹ್ಮಣ್ಯ :  ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರ ದೇವತೆ ಕುಕ್ಕೆನಾಥನ ದರ್ಶನಕ್ಕಾಗಿ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಮಾಡಿದರು. ಇದೇ ವೇಳೆ ದಾಖಲೆಯ ತುಲಾಭಾರ ಸೇವೆ ನೆರವೇರಿತು. 122 ಮಂದಿ ತುಲಾಭಾರ ಸೇವೆ ನೆರವೇರಿಸುವ ಮೂಲಕ ದೇವರಿಗೆ ತಾವು ತೂಗಿದ ದವಸ- ಧಾನ್ಯಗಳನ್ನು ಅರ್ಪಿಸಿದರು.

2017ರ ಮೇ 1ರಂದು 118 ಸೇವೆ ನೆರವೇರಿದ್ದು ಈ ತನಕದ ದಾಖಲೆಯಾಗಿತ್ತು. ಉಳಿದಂತೆ 1,013 ಆಶ್ಲೇಷ ಬಲಿ, ನಾಗಪ್ರತಿಷ್ಠೆ 172, 515 ಶೇಷ ಸೇವೆ ನೆರವೇರಿದವು. ಉಳಿದಂತೆ ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ ಮತ್ತಿತರ ಸೇವೆಗಳು ಅಧಿಕವಾಗಿ ನಡೆದವು. ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು.

ಅಕ್ಷರಾ ವಸತಿ ಗೃಹದ ಹಿಂಭಾಗದಲ್ಲಿನ ಪಾರ್ಕಿಂಗ್‌ ಸ್ಥಳ, ಬಿಲ ದ್ವಾರದ ಬಳಿ, ಸವಾರಿ ಮಂಟಪದ ಬಳಿಯಲ್ಲಿ ಪಾರ್ಕಿಂಗ್‌ ಸ್ಥಳಗಳು ಸಂಪೂರ್ಣವಾಗಿ ವಾಹನಗಳಿಂದ ತುಂಬಿ ಹೋಗಿದ್ದವು. ಆದರೂ ಜನಸಂಖ್ಯೆಯೊಂದಿಗೆ ಜನರನ್ನು ಕರೆತಂದ ವಾಹನದ ಸಂಖ್ಯೆ ಅಧಿಕವಾಗಿದ್ದರಿಂದ ಸ್ಥಳಾವಕಾಶ ಕಡಿಮೆಯಾಗಿ ರಸ್ತೆ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿನಿಂತಿದ್ದವು. ವಾಹನದಟ್ಟಣೆ ನಿಯಂತ್ರಿಸುವಲ್ಲಿ ಸುಬ್ರಹ್ಮಣ್ಯ ಪೊಲೀಸ್‌ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದವರು ಶ್ರಮಿಸಿದರು.

ವಾರದಿಂದ ದೀಪಾವಳಿ ನಿಮಿತ್ತ ರಜೆ ಇತ್ತು. ಹಬ್ಬ ಮುಗಿದ ನಂತರ ಎರಡನೇ ಶನಿವಾರದ ರಜೆ ಇತ್ತು. ನಿರಂತರ ರಜಾ ಸರಣಿ ಬಂದುದರಿಂದ ಕ್ಷೇತ್ರದತ್ತ ಭಕ್ತರ ಆಗಮನ ಅಧಿಕವಿತ್ತು. ಭಾನುವಾರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು.