ಕನ್ನಡ, ಕನ್ನಡಿಗರ ಹಿತ ರಕ್ಷಣೆಗೆ ಹೊಸ ಕಾಯ್ದೆ - ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಒತ್ತು ನೆಲ, ಜಲ, ಭಾಷೆಗೆ ರಾಜಿಯಿಲ್ಲ ಇದೇ ಅಧಿವೇಶನದಲ್ಲಿ ಕನ್ನಡ ಕಡ್ಡಾಯ ಮಸೂದೆ ಮಂಡನೆ: ಬೊಮ್ಮಾಯಿ

ಬೆಂಗಳೂರು (ಸೆ.15) : ರಾಜ್ಯದಲ್ಲಿ ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಕನ್ನಡ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಕಾನೂನಾತ್ಮಕವಾಗಿ ಕನ್ನಡ ಕಡ್ಡಾಯಗೊಳಿಸಲು ಸೂಕ್ತ ಕಾನೂನು ರೂಪಿಸಲು ಅನುವಾಗುವಂತಹ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕನ್ನಡ ಭಾಷೆಯ ರಕ್ಷಣೆ ಜತೆಗೆ, ಕನ್ನಡ ಭಾಷಿಕರಿಗೂ ಕನ್ನಡ ಕಡ್ಡಾಯ ಕಾನೂನು ರಕ್ಷಣೆ ನೀಡಲಿದೆ. ಜತೆಗೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಒತ್ತಾಯಿಸುವ ಹಾಗೂ ಒತ್ತು ನೀಡುವ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

Hindi Diwas: ರಾಜ್ಯದಲ್ಲಿ ಹಿಂದಿ ದಿವಸ ಆಚರಿಸುವವರು ಅಭಿಮಾನಶೂನ್ಯರು

ಜೆಡಿಎಸ್‌ ಪ್ರತಿಭಟನೆ:

ಇದಕ್ಕೂ ಮುನ್ನ ‘ಹಿಂದಿ ದಿವಸ್‌’ ವಿರೋಧಿಸಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್‌ ಸದಸ್ಯರು ಸದನದ ಒಳಗೂ ಕನ್ನಡ ಶಾಲು ಧರಿಸಿ ‘ಹಿಂದಿ ಹೇರಿಕೆ’ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಶ್ನೋತ್ತರ ಅವಧಿ ಬಳಿಕ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ಸದಸ್ಯ ಡಾ.ಕೆ. ಅನ್ನದಾನಿ, ‘ಕನ್ನಡ ಭಾಷೆ ಮೇಲೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ಇದನ್ನು ನಾವು ವಿರೋಧ ಮಾಡುತ್ತೇವೆ. ನಮ್ಮ ಭಾಷೆಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಕೃಷ್ಣಾರೆಡ್ಡಿ, ಸಾ.ರಾ. ಮಹೇಶ್‌ ಸೇರಿದಂತೆ ಹಲವರು ದನಿಗೂಡಿಸಿದರು.

ನೋಟಿಸ್‌ ನೀಡದೆ ವಿಷಯ ಪ್ರಸ್ತಾಪಿಸಿದ್ದಕ್ಕೆ ಗರಂ ಆದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವು ಯಾವ ವಿಚಾರ ಮಾತನಾಡುತ್ತಿದ್ದೀರಿ ಎಂಬುದೇ ಗೊತ್ತಿಲ್ಲ. ನನ್ನ ಅನುಮತಿ ಪಡೆದಿಲ್ಲ, ನನಗೆ ಅನುಮತಿ ಕೋರಿ ನೋಟಿಸ್‌ ಸಹ ನೀಡಿಲ್ಲ. ಕುಮಾರಸ್ವಾಮಿಯವರೇ ಇದೇನು ಜಾತ್ರೆನಾ? ಹುಚ್ಚಾಸ್ಪತ್ರೆನಾ? ನಿಮ್ಮವರಿಗೆ ನೀವಾದರೂ ಹೇಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಲವಂತದ ಹೇರಿಕೆ ಬೇಡ-ಎಚ್‌ಡಿಕೆ:

ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಹಿಂದಿ ದಿವಸದ ವಿರುದ್ಧ ಸದನದ ಹೊರಗಡೆ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಪಕ್ಷದ ನಿಲುವನ್ನು ಸದನಕ್ಕೂ ತಿಳಿಸಬೇಕು ಎಂಬ ಕಾರಣಕ್ಕೆ ಪ್ರಸ್ತಾಪಿಸಲು ಕೋರುತ್ತಿದ್ದಾರೆ. ನಮ್ಮ ದೇಶದಲ್ಲಿ ಹಲವು ಭಾಷೆ, ಸಂಸ್ಕೃತಿಗಳಿವೆ. ಇಂತಹ ಕಡೆ ಒಂದು ರಾಷ್ಟ್ರ, ಒಂದು ಭಾಷೆ ಎಂಬ ವಾತಾವರಣ ಸೃಷ್ಟಿಸುವುದು ಖಂಡನೀಯ. ಯಾವುದೇ ರೀತಿಯ ಬಲವಂತದ ಹೇರಿಕೆ ಹಾಗೂ ಒಂದು ಭಾಷೆಯ ಕತ್ತು ಹಿಸುಕುವ ಕೆಲಸ ಮಾಡಬಾರದು ಕಿಡಿ ಕಾರಿದರು.

ಭಾಷೆ ವಿಚಾರದಲ್ಲಿ ರಾಜಿಯಿಲ್ಲ-ಸಿಎಂ:

ಇದಕ್ಕೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ದೇಶದಲ್ಲಿ ಯಾವುದೇ ಒಂದು ಭಾಷೆಯನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಎಲ್ಲಾ ಮಾತೃಭಾಷೆ ಹಾಗೂ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಎಂದು ಹೇಳಿದ್ದಾರೆ. ಕನ್ನಡ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕನ್ನಡ ಅಗ್ರಮಾನ್ಯ ಭಾಷೆಯಾಗಿಯೇ ಬಳಕೆಯಾಗುತ್ತದೆ ಎಂದು ಭರವಸೆ ನೀಡಿದರು.

ಇದಕ್ಕೆ ಪೂರಕವಾಗಿ ಇದೇ ಅಧಿವೇಶನದಲ್ಲಿ ಕಾನೂನಾತ್ಮಕವಾಗಿ ಕನ್ನಡ ಕಡ್ಡಾಯಗೊಳಿಸಲು ಕಾನೂನು ರೂಪಿಸಲಾಗುವುದು. ಎಲ್ಲಾದರೂ ಸಣ್ಣ ಲೋಪ ಇದ್ದರೂ ಸೂಕ್ಷ್ಮವಾಗಿ ಗಮನಿಸಿ ಸ್ಪಂದಿಸಲಾಗುವುದು ಎಂದು ಹೇಳಿದರು.

Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ

ಸದನದ ಒಳಗೆ, ಹೊರಗೆ ಜೆಡಿಎಸ್‌ ನಾಯಕರ ಧರಣಿ

ಬೆಂಗಳೂರು: ‘ಹಿಂದಿ ದಿವಸ್‌’ ವಿರೋಧಿಸಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್‌ ಸದಸ್ಯರು ಸದನದ ಒಳಗೂ ಕನ್ನಡ ಶಾಲು ಧರಿಸಿ ‘ಹಿಂದಿ ಹೇರಿಕೆ’ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಒಂದು ರಾಷ್ಟ್ರ, ಒಂದು ಭಾಷೆ ಎಂಬ ವಾತಾವರಣ ಸೃಷ್ಟಿಸುವುದು ಖಂಡನೀಯ. ಯಾವುದೇ ರೀತಿಯ ಬಲವಂತದ ಹೇರಿಕೆ ಹಾಗೂ ಭಾಷೆಯ ಕತ್ತು ಹಿಸುಕುವ ಕೆಲಸ ಮಾಡಬಾರದು ಎಂದು ಕಿಡಿ ಕಾರಿದರು.

ಭಾರತದ ಎಲ್ಲ ಭಾಷೆಗಳಿಗೆ ಹಿಂದಿ ಮಿತ್ರ: ಗೃಹಮಂತ್ರಿ

ಹಿಂದಿ ಹಾಗೂ ಗುಜರಾತಿ, ಹಿಂದಿ ಹಾಗೂ ತಮಿಳು, ಹಿಂದಿ ಹಾಗೂ ಮರಾಠಿ ಭಾಷೆಗಳು ಪ್ರತಿಸ್ಪರ್ಧಿಗಳು ಎಂದು ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ದೇಶದ ಯಾವುದೇ ಭಾಷೆಗೂ ಹಿಂದಿ ಪ್ರತಿಸ್ಪರ್ಧಿ ಅಲ್ಲ. ಹಿಂದಿ ಎಲ್ಲ ಭಾರತೀಯ ಭಾಷೆಗಳಿಗೂ ಸ್ನೇಹಿತ. ಹಿಂದಿ ಏಳ್ಗೆಯಾದರೆ ಪ್ರಾದೇಶಿಕ ಭಾಷೆಗಳ ಏಳ್ಗೆಯಾಗುತ್ತದೆ. ಪ್ರಾದೇಶಿಕ ಭಾಷೆಗಳ ಏಳ್ಗೆಯಾದರೆ ಹಿಂದಿ ಏಳ್ಗೆಯಾಗುತ್ತದೆ.

- ಅಮಿತ್‌ ಶಾ ಕೇಂದ್ರ ಗೃಹ ಸಚಿವ